Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಹುಬ್ಬಳ್ಳಿಯತ್ತ ರೈತರ ಪಾದಯಾತ್ರೆ

ಹುಬ್ಬಳ್ಳಿ: ಪ್ರತಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಬಹುತೇಕ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನವಾದ ಬುಧವಾರವೂ ಮುಂದುವರಿಯಿತು.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಿಲ್ಲ.

ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ, ವಿಜಯಪುರ ಮುಂತಾದ ಜಿಲ್ಲೆಗಳ ಹೆದ್ದಾರಿಗಳಲ್ಲಿ ಬಿಸಿಲನ್ನೂ ಲೆಕ್ಕಿಸದೇ, ಇಡೀ ದಿನ ಪ್ರತಿಭಟನೆ ನಡೆಸಿದ ರೈತರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೋರಾಟಕ್ಕೆ ಸ್ಪಂದಿಸದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪೂರಕವಾಗಿ ಮಠಾಧೀಶರು ಹೋರಾಟಕ್ಕೆ ಬೆಂಬಲ ನೀಡಿದರು.

‘ತೀವ್ರ ಸ್ವರೂಪದ ಹೋರಾಟದ ಭಾಗವಾಗಿ, ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ. ಹುಕ್ಕೇರಿ ತಾಲ್ಲೂಕಿನ ಹತ್ತರಗಿಯಿಂದ ಯಾತ್ರೆ ಆರಂಭಿಸಿದ್ದೇವೆ. ಬುಧವಾರ ಬೆಳಗಾವಿ ಬಳಿ ಕಾಕತಿಯಲ್ಲಿ ವಾಸ್ತವ್ಯ ಮಾಡಿ, ಗುರುವಾರ ಚನ್ನಮ್ಮನ ಕಿತ್ತೂರು ತಲುಪುತ್ತೇವೆ. ಶುಕ್ರವಾರ ಹುಬ್ಬಳ್ಳಿ

ಪ್ರವೇಶಿಸುತ್ತೇವೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ತಿಳಿಸಿದರು. ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ, ಹತ್ತರಗಿ ಹಾಗೂ ನಿಪ್ಪಾಣಿ ತಾಲ್ಲೂಕಿನ ಕೂಗನೊಳ್ಳಿ ಬಳಿ ರೈತರು ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ನಾಕಾ ಬಂದ್‌ ಮಾಡಿದರು.

ಯರಗಟ್ಟಿ, ಅಥಣಿ, ಚಿಕ್ಕೋಡಿ, ರಾಯಬಾಗ, ಹುಕ್ಕೇರಿ, ಗೋಕಾಕ ಮುಂತಾದ ತಾಲ್ಲೂಕು ಕೇಂದ್ರಗಳಲ್ಲೂ ರಾಜ್ಯ ಹೆದ್ದಾರಿ ಬಂದ್‌ ಮಾಡಿದರು.

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯ ಟೋಲ್‌ನಾಕಾ ಬಂದ್ ಮಾಡಿದ ರೈತರು, ಅರೆಬೆತ್ತಲೆ ಮೆರವಣಿಗೆ ಮಾಡಿ ಆಕ್ರೋಶ ಹೊರಹಾಕಿದರು. ಹೆದ್ದಾರಿಗೆ ಬೇಲಿ ಹಾಕಿ, ವಾಹನ ಸಂಚಾರ ತಡೆದರು. ಹೆದ್ದಾರಿ ಬಂದ್ ಮಾಡಿದ್ದರಿಂದ, ಪುಣೆ-ಬೆಂಗಳೂರು ಮಾರ್ಗದಲ್ಲಿ ಸಂಚರಿಸಬೇಕಿದ್ದ ವಾಹನಗಳ ಸಂಚಾರ ಬಂದ್ ಆಯಿತು.

ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಟೋಲ್‌ನಾಕಾ ಬಳಿ ರೈತರು ಬುಧವಾರ ನಡೆಸಿದ ಧರಣಿಯಲ್ಲಿ ಬೈಲೂರಿನ ನಿಜಗುಣಾನಂದ ಸ್ವಾಮೀಜಿ ಚನ್ನಮ್ಮನ ಕಿತ್ತೂರಿನ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಕೂಡ ಪಾಲ್ಗೊಂಡರು ‍ಪ್ರಜಾವಾಣಿ ಚಿತ್ರಶಶಿಕಾಂತ ಪಡಸಲಗಿ ಗುರೂಜಿ ಗೌರವಾಧ್ಯಕ್ಷ ರಾಜ್ಯ ರೈತ ಸಂಘಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಕುರಿತು ಪ್ರಲ್ಹಾದ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಬೇಕುಶ್ರೀರಾಮುಲು ಬಿಜೆಪಿ ನಾಯಕಕಬ್ಬು ಬೆಳೆಗಾರರ ಬೇಡಿಕೆ ಬಗ್ಗೆ ಪ್ರಲ್ಹಾದ ಜೋಶಿ ಚರ್ಚೆ ನಡೆಸಿದ್ದಾರೆ. ಅದನ್ನು ನೋಡಿ ರಾಜ್ಯ ಸರ್ಕಾರ ಸುಮ್ಮನೆ ಕೂರದೇ ತಾನೂ ಒಂದು ನಿರ್ಧಾರ ಕೈಗೊಳ್ಳಬೇಕು

ವಿಜಯಪುರ ಜಿಲ್ಲೆಯ ಆಲಮಟ್ಟಿ ಸಮೀಪ ಯಲಗೂರ ಕ್ರಾಸ್‌ನಲ್ಲಿ ಎರಡನೇ ದಿನವೂ ರೈತರು ಸೊಲ್ಲಾಪುರ-ಚಿತ್ರದುರ್ಗ ರಾಷ್ಟ್ರಿಯ ಹೆದ್ದಾರಿ-50ರಲ್ಲಿ ಪ್ರತಿಭಟನೆ ಮುಂದುವರಿಸಿದರು.

ವಿನೋದ ಟ್ರಕ್‌ ಚಾಲಕಚೆನ್ನೈನಿಂದ ಮುಂಬೈಗೆ ಸರಕು ಸಾಗಣೆ ಮಾಡುತ್ತೇವೆ. ಧಾರವಾಡದಲ್ಲಿ ರೈತರು ಹೆದ್ದಾರಿ ಬಂದ್‌ ಮಾಡಿರುವುದರಿಂದ ಅರ್ಧ ದಾರಿಯಲ್ಲಿ ಸಿಲುಕಿದ್ದೇವೆ. ನೀರು ಆಹಾರಕ್ಕೆ ಸಮಸ್ಯೆ ಆಗಿದೆ

ದಿನವಿಡೀ ಕಾದ ಸಂಸದ

ಕಬ್ಬು ಬೆಳೆಗಾರರು ಮನವಿ ಸಲ್ಲಿಸುವುದಾಗಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಅವರು ವಿಜಯಪುರ ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಇರುವ ತಮ್ಮ ಸರ್ಕಾರಿ ಕಚೇರಿಯಲ್ಲಿ ದಿನವಿಡೀ ರೈತರ ಬರುವಿಕೆಗಾಗಿ ಕಾದು ಕುಳಿತಿದ್ದರು. ಆದರೆ, ರೈತರು ಬಾರದೇ ಇದ್ದುದ್ದರಿಂದ ಬೇಸತ್ತು ಕೊನೆಗೆ ಮನೆಗೆ ತೆರಳಿದರು.

ಸಂಚಾರ ಸ್ಥಗಿತ: ಜನರಿಗೆ ತೊಂದರೆ

ಧಾರವಾಡ ಜಿಲ್ಲೆಯ ಯರಿಕೊಪ್ಪ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್‌ನಿಂದ ಸಂಚಾರ ಸ್ಥಗಿತವಾಗಿ ಭಾರಿ ವಾಹನಗಳು ಸಾಲುಗಟ್ಟಿ ನಿಂತಿವೆ. ಸಿಮೆಂಟ್‌, ಟೈಲ್ಸ್‌, ಆಹಾರ ಧಾನ್ಯ, ತೆಂಗಿನ ಕಾಯಿ ಮೊದಲಾದ ಸರಕು ತುಂಬಿದ ಟ್ರಕ್‌ಗಳು, ಲಾರಿಗಳು ರಸ್ತೆ ಬದಿಯಲ್ಲಿ ನಿಂತಿವೆ. ಚಾಲಕರು, ಕ್ಲೀನರ್‌ಗಳು ಅಲ್ಲೇ ಅಡುಗೆ ಸಿದ್ಧಪಡಿಸಿ ಆಹಾರ ಸೇವಿಸಿದರು. ವಾಹನದೊಳಗೆ, ಕೆಳಗೆ ಮಲಗಿ ವಿಶ್ರಾಂತಿ ಪಡೆದರು.

ಮೂಟೆಗಟ್ಟಲೇ ರೊಟ್ಟಿ ತಂದ ಮಹಿಳೆಯರು

ಬೆಳಗಾವಿ ಜಿಲ್ಲೆಯ ಟೋಲ್‌ನಾಕಾಗಳಲ್ಲಿ ಹಗಲು-ರಾತ್ರಿ ಧರಣಿ ನಡೆಸುತ್ತಿರುವ ರೈತರಿಗೆ ಸುತ್ತಮುತ್ತಲ ಗ್ರಾಮಗಳ ಜನರು ಸ್ವಯಂಪ್ರೇರಣೆಯಿಂದ ರೊಟ್ಟಿ, ಪಲ್ಯ, ಉಪ್ಪಿನಕಾಯಿ ತಂದರು. ಸ್ಥಳದಲ್ಲೇ ಅನ್ನ- ಸಾಂಬಾರು ತಯಾರಿಸಲು ಹಲವರು ಅಕ್ಕಿ ಚೀಲಗಳನ್ನು ದೇಣಿಗೆ ನೀಡಿದರು. ಪ್ರತಿಯೊಬ್ಬ ರೈತ ₹500 ಸಂಗ್ರಹ ಮಾಡಿ ಹೋರಾಟದ ಖರ್ಚು-ವೆಚ್ಚ ಭರಿಸಿದರು.

‘ಮಠಾಧೀಶರು, ಸಿನಿಮಾದವರು ರೈತರನ್ನು ಬೆಂಬಲಿಸಲಿ’

‘ರೈತರನ್ನು ದೆಹಲಿಗೆ ಕರೆಸಿ, ಬೇಡಿಕೆ ಈಡೇರಿಸದೆ ಕೇಂದ್ರ ಸರ್ಕಾರ ಅವಮಾನಿಸಿದೆ. ಇದನ್ನು ಖಂಡಿಸಿ ರಾಜ್ಯದ ಎಲ್ಲ ಮಠಾಧೀಶರು, ಧರ್ಮಗುರುಗಳು, ಸಿನಿಮಾದವರು ಬೀದಿಗಿಳಿದು, ರೈತರ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹುಬ್ಬಳ್ಳಿಯಲ್ಲಿ ಹೇಳಿದರು. ಕಬ್ಬು ಬೆಳೆಗಾರರಿಗೆ ಅವರಿಗೆ ನ್ಯಾಯ ಸಿಗುವವರೆಗೆ ನಾನು ಸಕ್ಕರೆ ತಿನ್ನುವುದಿಲ್ಲ’ ಎಂದರು.

‘ರೈತರ ಬದುಕಿನಲ್ಲಿ ಸಂಪತ್ತಿಲ್ಲ’

‘ರೈತರ ಮನೆಗೆ ದರೋಡೆಕೋರರು ಬಂದರೂ ಅವರಿಗೆ ಒಂದಿಷ್ಟು ಜೋಳ ಅಥವಾ ಭತ್ತ ಮಾತ್ರ ಸಿಗುತ್ತದೆ. ದುಡಿಮೆ ಫಲವನ್ನು ಹಂಚಿಕೊಳ್ಳುವುದು ರೈತರ ಸ್ವಭಾವ. ರೈತರನ್ನು ಸಾಲಗಾರರನ್ನಾಗಿ ಮಾಡಿರುವ ವ್ಯವಸ್ಥೆಯನ್ನು ಪ್ರಶ್ನಿಸಬೇಕಿದೆ’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ ಆಗ್ರಹಿಸಿದರು. ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ‌ ಬೆಂಬಲ ಸೂಚಿಸಿ ಮಾತನಾಡಿದರು.

ಕೇಂದ್ರಕ್ಕೆ ಪ್ರಾಯೋಗಿಕ ಜ್ಞಾನವಿಲ್ಲ: ಲಕ್ಷ್ಮಣ ಸವದಿ

ಅಥಣಿ (ಬೆಳಗಾವಿ ಜಿಲ್ಲೆ): ‘ರೈತರ ಕಷ್ಟಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಾಯೋಗಿಕ ಜ್ಞಾನವಿಲ್ಲ. ನಿವೃತ್ತ ಐಎಎಸ್ ಅಧಿಕಾರಿಗಳನ್ನು ಸಚಿವರನ್ನಾಗಿಸಿದರೆ ರೈತರ ಸಮಸ್ಯೆಗಳು ಹೇಗೆ ಅರ್ಥವಾಗುತ್ತವೆ’ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ವಾಗ್ದಾಳಿ ನಡೆಸಿದರು.

‘ಒಂದು ಎಕರೆ ಕಬ್ಬು ಬೆಳೆಯಲು ರೈತರು ಎಷ್ಟು ಖರ್ಚು ಮಾಡುತ್ತಾರೆ? ರಸಗೊಬ್ಬರ ಕಾರ್ಮಿಕರು ಹಾಗೂ ಕ್ರಿಮಿನಾಶಕಗಳ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಅಧ್ಯಯನ ನಡೆಸಿಲ್ಲ. ಕಬ್ಬಿನ ಬೆಲೆ ಹೆಚ್ಚಿಸಲು ಒಂದು ವರ್ಷದಿಂದ ಕೋರಿದರೂ ಸ್ಪಂದಿಸಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಎಥೆನಾಲ್ ಖರೀದಿ ದರದ ವಿಚಾರದಲ್ಲಿ ತೈಲ ಕಂಪನಿಗಳು ಹೆಚ್ಚಿನ ಲಾಭ ಪಡೆಯುತ್ತಿವೆ. ಕೇಂದ್ರ ಸರ್ಕಾರದ ಸೂಚನೆಯಂತೆ ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದಿಸುತ್ತಿವೆ. ಆದರೆ ಎಥೆನಾಲ್ ಖರೀದಿ ದರವನ್ನು ಹೆಚ್ಚಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುತ್ತಿಲ್ಲ’ ಎಂದರು.

ಕಬ್ಬು ಬೆಳೆಗಾರರ ಸಮಸ್ಯೆ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ

ನವದೆಹಲಿ: ಕಬ್ಬು ಬೆಳೆಗಾರರು ಎತ್ತಿರುವ ವಿಷಯಗಳನ್ನು ಪರಿಶೀಲಿಸಲು ಮತ್ತು ಅವರ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮಗಳನ್ನು ಶಿಫಾರಸು ಮಾಡಲು ನೀತಿ ಆಯೋಗದ ಮಾಜಿ ಸದಸ್ಯ ಪ್ರೊ. ರಮೇಶ್ ಚಂದ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ಸರ್ಕಾರ ಬುಧವಾರ ರಚಿಸಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ಕಬ್ಬು ಬೆಳೆಗಾರರ ​​ಪ್ರತಿನಿಧಿಗಳೊಂದಿಗೆ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್‌ ಚೌಹಾಣ್‌ ಹಾಗೂ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ನಡೆಸಿದ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ವಯ ಈ ಸಮಿತಿ ರಚಿಸಲಾಗಿದೆ.

ಕೃಷಿ ವೆಚ್ಚಗಳು ಮತ್ತು ಇತರ ಸಂಬಂಧಿತ ಅಂಶಗಳನ್ನು ಪರಿಗಣಿಸಿ, ಕಬ್ಬು ಬೆಳೆಗಾರರಿಗೆ ಲಾಭದಾಯಕ ಬೆಲೆ ದೊರೆಯುವಂತೆ ಮಾಡಲು ಅದನ್ನು ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಸಮಿತಿ ಪರಿಶೀಲಿಸಲಿದೆ. ಅಲ್ಲದೆ, ಸಕ್ಕರೆ ಉತ್ಪಾದನಾ ವೆಚ್ಚ, ಮಾರುಕಟ್ಟೆಯಲ್ಲಿ ದೊರೆಯುವ ಬೆಲೆ ಮತ್ತು ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು, ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಪರಿಷ್ಕರಿಸಬೇಕೆಂಬ ಬೇಡಿಕೆಯನ್ನೂ ಸಮಿತಿ ಪರಿಶೀಲಿಸುತ್ತದೆ.

ಯಂತ್ರಗಳ ಮೂಲಕ ಕಟಾವು ಮಾಡಿದ ಕಬ್ಬಿನ ತೂಕದಲ್ಲಿ ಕಡಿತ ಮಾಡುವ ಪ್ರಸ್ತುತ ಪದ್ಧತಿಗಳನ್ನು ಸಮಿತಿ ಪರಿಶೀಲಿಸಲಿದೆ. ಯಾಂತ್ರೀಕೃತ ಕಟಾವಿನಿಂದ ನೈಜವಾಗಿ ಯಾವುದೇ ನಷ್ಟ ಉಂಟಾಗಿದ್ದರೆ, ಅದರ ಮೌಲ್ಯಮಾಪನ ಮಾಡುತ್ತದೆ. ಪ್ರಸ್ತುತ ಪದ್ಧತಿಗಳು ರೈತರಿಗೆ ಪಾವತಿಸಬೇಕಾದ ಕಬ್ಬಿನ ಬೆಲೆಯ ಮೇಲೆ ಬೀರುವ ಆರ್ಥಿಕ ಪರಿಣಾಮವನ್ನು ಸಮಿತಿಯು ಮೌಲ್ಯಮಾಪನ ಮಾಡಲಿದೆ.

ಸಮಿತಿಯು ರೈತರ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆಗಳ ಸಂಘಗಳು, ರಾಜ್ಯ ಸರ್ಕಾರಗಳು ಹಾಗೂ ತಜ್ಞರು ಅಥವಾ ಸಂಸ್ಥೆಗಳು ಸೇರಿದಂತೆ ಎಲ್ಲ ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲಿದೆ. ಸಮಿತಿಯು ವರದಿಯನ್ನು ಶೀಘ್ರದಲ್ಲಿ ಸಲ್ಲಿಸಲಿದೆ.

ಕೃಷಿ ಸಚಿವಾಲಯದ ಕೃಷಿ ಆಯುಕ್ತರು, ಆಹಾರ ಸಚಿವಾಲಯದ ಜಂಟಿ ಕಾರ್ಯದರ್ಶಿ (ಸಕ್ಕರೆ) ಹಾಗೂ ಗ್ರಾಹಕ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಈ ಸಮಿತಿಯ ಸದಸ್ಯರು.

Related posts

ಅರಣ್ಯ ಇಲಾಖೆ-ತಾಲೂಕು ಆಡಳಿತದ ನಡುವೆ ಚೆಲ್ಲಾಟ: ಅಕ್ರಮಕ್ಕೆ ಮೌನದ ಬೆಂಬಲ ನೀಡಿದ ಗಣಿ ಇಲಾಖೆ

satyadarshana

ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಅಗತ್ಯ : ಜಿಲ್ಲಾ ನ್ಯಾ. ಬಸವರಾಜ

satyadarshana

ಇಂದು ಭಾರತ-ಪಾಕ್ ಹೈವೋಲ್ಟೇಜ್ ಮ್ಯಾಚ್.

satyadarshana

Leave a Comment