ಗಜೇಂದ್ರಗಡ ವ್ಯಾಪ್ತಿಯಲ್ಲಿ ಅರಣ್ಯ ಸಂಪತ್ತಿಗೆ ಕನ್ನ: ಪ್ರಭಾವಿಗಳಿಗೆ ರತ್ನಗಂಬಳಿ ಹಾಸಿದ ಇಲಾಖೆಗಳು
ಅರಣ್ಯ ಇಲಾಖೆ-ತಾಲೂಕು ಆಡಳಿತದ ನಡುವೆ ಚೆಲ್ಲಾಟ: ಅಕ್ರಮಕ್ಕೆ ಮೌನದ ಬೆಂಬಲ ನೀಡಿದ ಗಣಿ ಇಲಾಖೆ
ಗಜೇಂದ್ರಗಡ: ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಜಿಗೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಅರಣ್ಯ ಹಾಗೂ ಸರ್ಕಾರಿ ಜಮೀನಿನ ಸಂಪತ್ತನ್ನು ರಾಜಾರೋಷವಾಗಿ ಕೊಳ್ಳೆಹೊಡೆಯುವ ದಂಧೆ ಅವ್ಯಾಹತವಾಗಿ ಸಾಗಿದೆ. ಪರಿಸರ ಸಂರಕ್ಷಣೆ ಮತ್ತು ಗಣಿ ಕಾಯ್ದೆಗಳನ್ನು ಸಂಪೂರ್ಣವಾಗಿ ಅಣಕಿಸುವಂತೆ ಹಗಲು-ರಾತ್ರಿ ಜೆಸಿಬಿ, ಹಿಟಾಚಿ ಹಾಗೂ ಬೃಹತ್ ಟಿಪ್ಪರ್ಗಳು ಗರ್ಜಿಸುತ್ತಿದ್ದರೂ, ಸಂಬಂಧಪಟ್ಟ ಇಲಾಖೆಗಳು ಜಾಣ ಕುರುಡು ಪ್ರದರ್ಶಿಸುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಗೇರಿ ಕಾಲಕಾಲೇಶ್ವರ ದೇವಸ್ಥಾನ ಸಮೀಪದ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಬೃಹತ್ ಆಳದ ಗುಂಡಿಗಳನ್ನು ತೋಡಿ ಕೆಂಪು ಮುರಂ ಹಾಗೂ ನೈಸರ್ಗಿಕ ಮಣ್ಣನ್ನು ಅಕ್ರಮವಾಗಿ ಬಗೆಯಲಾಗುತ್ತಿದೆ. KA-27 ನೋಂದಣಿ ಸಂಖ್ಯೆಯುಳ್ಳ ಟಿಪ್ಪರ್ಗಳು ಹಾಗೂ ಯಂತ್ರಗಳು ಯಾವುದೇ ಅಧಿಕೃತ ಪಾಸ್, ರವಾನೆ ಪರವಾನಗಿ ಇಲ್ಲದೆ ನಿರಂತರವಾಗಿ ಧಾವಿಸುತ್ತಿವೆ.
ಸರ್ಕಾರದ ಕಣ್ಣಿಗೆ ಮಣ್ಣೆರಚಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿರುವ ಈ ಗಣಿಗಾರಿಕೆಯ ಹಿಂದೆ ಸ್ಥಳೀಯ ಘಟಾನುಘಟಿಗಳು ಹಾಗೂ ಪ್ರಭಾವಿಗಳ ಕೈವಾಡವಿದೆ ಎಂಬ ಬಲವಾದ ಮಾತುಗಳು ಕೇಳಿಬರುತ್ತಿವೆ.
ಹಸಿರು ಪರಿಸರ ಹಾಗೂ ಅರಣ್ಯ ಭೂಮಿಯನ್ನು ರಕ್ಷಿಸಬೇಕಾದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ಇದು ನಮ್ಮ ವ್ಯಾಪ್ತಿಗೆ ಸಂಪೂರ್ಣವಾಗಿ ಬರುವುದಿಲ್ಲ, ತಹಶೀಲ್ದಾರರೇ ಕ್ರಮ ಕೈಗೊಳ್ಳಬೇಕು ಎಂದು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ.
ಇತ್ತ ತಾಲೂಕು ದಂಡಾಧಿಕಾರಿಗಳಾದ ಗಜೇಂದ್ರಗಡ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರು ತಮ್ಮ ಸರ್ಕಾರಿ ವಾಹನ ಮತ್ತು ಕಚೇರಿಯ ಕುರ್ಚಿಗಷ್ಟೇ ಸೀಮಿತವಾಗಿದ್ದು, ಕಣ್ಣೆದುರೇ ಸರ್ಕಾರಿ ಸಂಪತ್ತು ನಾಶವಾಗುತ್ತಿದ್ದರೂ ಸ್ಥಳ ಪರಿಶೀಲನೆಗೆ ಮುಂದಾಗದಿರುವುದು ತಾಲೂಕು ಆಡಳಿತದ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ.
ಇನ್ನು ಜಿಲ್ಲೆಯ ಗೌಣ ಖನಿಜ ಕಳ್ಳತನ ತಡೆಯಬೇಕಾದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಂತೂ ಈ ಭಾಗದಲ್ಲಿ ಅಸ್ತಿತ್ವದಲ್ಲಿದೆಯೋ ಇಲ್ಲವೋ ಎಂಬಂತೆ ನಿಷ್ಕ್ರಿಯವಾಗಿದೆ.
ಅರಣ್ಯ ಹಾಗೂ ಬೆಟ್ಟಗುಡ್ಡಗಳ ನೈಸರ್ಗಿಕ ಪರಿಸರವನ್ನು ಅನುಮತಿಯಿಲ್ಲದೆ ಧ್ವಂಸಗೊಳಿಸುವುದು ಶಿಕ್ಷಾರ್ಹ ಅಪರಾಧ.
ಗಣಿ ಮತ್ತು ಖನಿಜ ಕಾಯ್ದೆ 1957 ಅಧಿಕೃತ ರವಾನೆ ಪಾಸ್ ಇಲ್ಲದೆ ಗೌಣ ಖನಿಜ ಸಾಗಿಸುವುದು ಜಾಮೀನು ರಹಿತ ಅಪರಾಧ ಹಾಗೂ ವಾಹನಗಳ ಮುಟ್ಟುಗೋಲಿಗೆ ಆಸ್ಪದ ನೀಡುತ್ತದೆ.
ಸರ್ಕಾರಿ ಸ್ವತ್ತಿನ ಒತ್ತುವರಿ ಹಾಗೂ ನೈಸರ್ಗಿಕ ಸಂಪತ್ತಿನ ಕಳ್ಳತನಕ್ಕೆ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ. ತಮ್ಮ ಗಡಿಯಲ್ಲೇ ಜೆಸಿಬಿಗಳು ನಿರಂತರವಾಗಿ ಮಣ್ಣು ಎತ್ತುತ್ತಿದ್ದರೂ ಅರಣ್ಯ ರಕ್ಷಕರು ಮತ್ತು ಅಧಿಕಾರಿಗಳು ಸ್ಥಳದಲ್ಲೇ ವಾಹನಗಳನ್ನು ಜಪ್ತಿ ಮಾಡಿ ಎಫ್ಐಆರ್ ದಾಖಲಿಸದಿರಲು ಯಾರ ಭಯ? ತಾಲೂಕು ವ್ಯಾಪ್ತಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಉತ್ಖನನ ನಡೆಯುತ್ತಿದ್ದರೂ ಗಜೇಂದ್ರಗಡ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರು ಜಂಟಿ ಕಾರ್ಯಪಡೆ ರಚಿಸಿ ದಾಳಿ ನಡೆಸಲು ಮೀನಮೇಷ ಎಣಿಸುತ್ತಿರುವುದೇಕೆ?. ಸರ್ಕಾರದ ರಾಯಲ್ಟಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದ್ದರೂ ಜಿಪಿಎಸ್ ಆಧಾರಿತ ತಪಾಸಣೆ ನಡೆಸಲು ಜಿಲ್ಲಾ ಗಣಿ ಅಧಿಕಾರಿಗಳು ಮುಂದಾಗದಿರುವುದು ಏಕೆ?
ಗದಗ ಜಿಲ್ಲಾಧಿಕಾರಿಗಳಾದ ಎನ್. ಶ್ರೀಧರ್ ಅವರು ತಕ್ಷಣ ಮಧ್ಯಪ್ರವೇಶಿಸಿ, ಈ ಜಂಟಿ ಕರ್ತವ್ಯಲೋಪದ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಆದೇಶಿಸುವರೇ ಎಂದು ಕಾದುನೋಡಬೇಕಿದೆ.
