Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಪ್ರವಾಸಿ ತಾಣಗಳ ಸ್ವಚ್ಛತೆ ಹಾಗೂ ಭದ್ರತೆಗೆ ಆದ್ಯತೆ ನೀಡಿ, ವಿದ್ಯಾರ್ಥಿಗಳು ಪ್ರವಾಸೋದ್ಯಮದ ರಾಯಭಾರಿಗಳಾಗಲಿ: ಜಿ.ಪಂ. ಸಿಇಒ ಮುಕುಲ್ ಜೈನ್

​ಗದಗ : ಸೆಪ್ಟೆಂಬರ್ 28: ಕರ್ನಾಟಕವು ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ಶ್ರೀಮಂತ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ರಾಜ್ಯವಾಗಿದೆ. ನಮ್ಮ ಗದಗ ಜಿಲ್ಲೆಯಲ್ಲಿ ತ್ರಿಕೂಟೇಶ್ವರ ದೇವಾಲಯ, ಲಕ್ಕುಂಡಿ ಸೇರಿದಂತೆ ಅನೇಕ ಪ್ರಮುಖ ಹಾಗೂ ಅಪಾರ ಸಾಮರ್ಥ್ಯವುಳ್ಳ ಪ್ರವಾಸಿ ತಾಣಗಳಿವೆ. ಈ ಪ್ರವಾಸಿ ತಾಣಗಳ ಸಂಪೂರ್ಣ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳಲು ನಮ್ಮ ಊರು ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಪ್ರವಾಸಿಗರ ಸುರಕ್ಷತೆ ಹಾಗೂ ಭದ್ರತೆಗೆ ಆದ್ಯತೆ ನೀಡುವುದು ಮತ್ತು ಪ್ರಾಕೃತಿಕ ಹಾಗೂ ಐತಿಹಾಸಿಕ ತಾಣಗಳನ್ನು ಸಂರಕ್ಷಿಸುವುದು ಅತ್ಯಗತ್ಯವಾಗಿದೆ ಎಂದು ಜಿ.ಪಂ. ಸಿಇಒ ಮುಕುಲ್ ಜೈನ್ ಅವರು ತಿಳಿಸಿದರು.

ನಗರದ ಶ್ರೀ ಬಸವೇಶ್ವರ ಮೂರ್ತಿಯ ಉದ್ಯಾನವನ ಭೀಷ್ಮ ಕೆರೆಯ ವಿಹಾರದಾಮದಲ್ಲಿ ಭಾನುವಾರ ಸೆಪ್ಟೆಂಬರ್ (27) ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಎನ್.ಎಸ್. ಎಸ್. ಘಟಕ ಇವರ ಸಹಯೋಗದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ – 2026 ಅಂಗವಾಗಿ ಆಯೋಜಿಸಲಾದ ಡಿಜಿಟಲ್ ಕಾರ್ಯ ಸೂಚಿ ಮತ್ತು ಕೃತಕ ಬುದ್ಧಿಮತ್ತೆ ಬಳಸಿ ಪ್ರವಾಸೋದ್ಯಮ ಮರುಸೃಷ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

​​”ವಿದ್ಯಾರ್ಥಿಗಳು ತಾವು ಎಲ್ಲೇ ತೆರಳಿದರೂ ಸ್ವಚ್ಛತೆ, ಆರೋಗ್ಯ ನೈರ್ಮಲ್ಯ ಹಾಗೂ ಉತ್ತಮ ನಡತೆಯನ್ನು ಕಾಯ್ದುಕೊಳ್ಳಬೇಕು. ನೀವುಗಳು ನಿಮ್ಮ ಜಿಲ್ಲೆ, ರಾಜ್ಯ ಹಾಗೂ ಇಡೀ ದೇಶದ ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ರಾಯಭಾರಿಗಳಂತೆ ಕಾರ್ಯನಿರ್ವಹಿಸಬೇಕು. ನಿಮ್ಮ ಉತ್ತಮ ನಡವಳಿಕೆ ಹಾಗೂ ಸ್ವಚ್ಛತೆಯಿಂದ ಪ್ರವಾಸಿಗರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿ, ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ” ಎಂದು ವಿದ್ಯಾರ್ಥಿಗಳಿಗೆ ಜಿ.ಪಂ. ಸಿಇಒ ಮುಕುಲ್ ಜೈನ್ ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಅವರು ಮಾತನಾಡಿ ಪ್ರವಾಸೋದ್ಯಮವು ಕೇವಲ ಮನರಂಜನೆ ಅಥವಾ ಮಜಾ ಮಾಡಲು ಸೀಮಿತವಾಗಿರದೆ, ದೇಶದ ಸಂಸ್ಕೃತಿ ರಕ್ಷಣೆ ಹಾಗೂ ಆರ್ಥಿಕ ಪ್ರಗತಿಗೆ ಪ್ರಮುಖ ಬೆನ್ನೆಲುಬಾಗಿದೆ ಎಂದು ಹೇಳಿದರು.

“ಸಿಂಗಾಪುರ, ದುಬೈ, ಶ್ರೀಲಂಕಾ ಮುಂತಾದ ಅನೇಕ ದೇಶಗಳು ಕೇವಲ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ತಮ್ಮ ಆರ್ಥಿಕತೆಯನ್ನು ಬಲಪಡಿಸಿಕೊಂಡಿವೆ. ಪ್ರವಾಸಿಗರು ಆಗಮಿಸಿದಾಗ ಅವರಿಗೆ ಮೂಲಸೌಕರ್ಯಗಳು, ಉಪಚಾರ ಹಾಗೂ ಭದ್ರತೆ ನೀಡುವುದರಿಂದ ಸ್ಥಳೀಯವಾಗಿ ಆತಿಥ್ಯ ಉದ್ಯಮ ಬೆಳೆಯುವುದಲ್ಲದೆ, ಅಪಾರ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ದೇಶದ ಒಟ್ಟು ಜಿಡಿಪಿಯಲ್ಲಿ (GDP) ಸುಮಾರು ಶೇಕಡಾ 10 ರಷ್ಟು ಕೊಡುಗೆ ಪ್ರವಾಸೋದ್ಯಮ ಕ್ಷೇತ್ರದಿಂದಲೇ ಬರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ” ಎಂದರು.

​ಗದಗ ಜಿಲ್ಲೆಯ ಹೆಮ್ಮೆಯ ಪ್ರವಾಸಿ ಹಾಗೂ ಪ್ರಾಕೃತಿಕ ತಾಣವಾದ ಕಪ್ಪತಗುಡ್ಡದ ಬಗ್ಗೆ ಅವರು, “ಕಪ್ಪತಗುಡ್ಡ ಪ್ರದೇಶದಲ್ಲಿ ಸುಮಾರು 340 ಕ್ಕೂ ಹೆಚ್ಚು ವಿವಿಧ ಔಷಧೀಯ ಸಸ್ಯಗಳು ಲಭ್ಯವಿದ್ದು, ಇದು ನಮ್ಮ ನಾಡಿನ ಅಪರೂಪದ ನೈಸರ್ಗಿಕ ಸಂಪತ್ತಾಗಿದೆ. ‘ದೇಶ ಸುತ್ತು, ಕೋಶ ಓದು’ ಎಂಬ ನಾಣ್ಣುಡಿಯಂತೆ ಪ್ರವಾಸ ಮಾಡುವುದರಿಂದ ಜ್ಞಾನಾರ್ಜನೆ ಹೆಚ್ಚಾಗುತ್ತದೆ. ವಿದೇಶಗಳಿಗೆ ಪ್ರಯಾಣಿಸಿದವರು ಸಹ ಭಾರತದಂತಹ ವೈವಿಧ್ಯಮಯ ಸಂಸ್ಕೃತಿ ಮತ್ತು ಪ್ರಾಕೃತಿಕ ಸೌಂದರ್ಯವನ್ನು ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದು ವಿವರಿಸಿದರು.

​ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಸಿ.ಆರ್. ಮುಂಡರಗಿ ಅವರು, “ವಿದ್ಯಾರ್ಥಿಗಳು ರಜಾ ದಿನಗಳು ಹಾಗೂ ಬಿಡುವಿನ ವೇಳೆಯಲ್ಲಿ ವಿವಿಧ ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳಿಗೆ ಭೇಟಿ ನೀಡಿ, ಅವುಗಳ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಬೇಕು. ನಾವು ಕಲಿತ ಜ್ಞಾನ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ಕರೆ ನೀಡಿದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ವಿಭೂತಿ ಪ್ರಾಸ್ತವಿಕವಾಗಿ ಮಾತನಾಡಿ 1980 ರಲ್ಲಿ ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ UNWTO (ವಿಶ್ವ ಪ್ರವಾಸೋದ್ಯಮ ಸಂಸ್ಥೆ) ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಪ್ರಾರಂಭಿಸಿತು. ಪ್ರವಾಸ ಎಂದರೆ ಮನಸ್ಸಿಗೆ ಉಲ್ಲಾಸ, ನೆಮ್ಮದಿ ಹಾಗೂ ಸಂತೋಷ ನೀಡುವ ಪ್ರಕ್ರಿಯೆಯಾಗಿದೆ. ಪ್ರವಾಸೋದ್ಯಮವು ಕೇವಲ ಮನರಂಜನೆಗೆ ಸೀಮಿತವಾಗಿರದೆ, ಹೊಟೇಲ್, ಬೋಟಿಂಗ್, ರೆಸಾರ್ಟ್‌ಗಳು ಹಾಗೂ ಸ್ಥಳೀಯ ಉದ್ಯಮಗಳ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ” ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಡಾ. ನಂದಾ ಹಣಬರಹಟ್ಟಿ ಅವರು ಮಾತನಾಡಿ ನಮ್ಮಲ್ಲಿರುವ ಪ್ರವಾಸಿ ತಾಣಗಳ ವೈಶಿಷ್ಟ್ಯತೆ ಮತ್ತು ಪ್ರಾಮುಖ್ಯತೆಯನ್ನು ಅರಿತುಕೊಂಡು ಅವುಗಳನ್ನು ಸ್ವಚ್ಛವಾಗಿ ಹಾಗೂ ಜಾಗರೂಕತೆಯಿಂದ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಪ್ರತಿಪಾದಿಸಿದರು.

​ಪ್ರವಾಸಿ ತಾಣಗಳ ನೈರ್ಮಲ್ಯದ ಕುರಿತು ವಿಶೇಷವಾಗಿ ಪ್ರಸ್ತಾಪಿಸಿದ ಅವರು, “ಸ್ವಚ್ಛತೆಯನ್ನು ಕಾಪಾಡುವುದು ಕೇವಲ ಪೌರಕಾರ್ಮಿಕರು ಅಥವಾ ಅಧಿಕಾರಿಗಳ ಜವಾಬ್ದಾರಿಯಲ್ಲ, ಅದು ಪ್ರವಾಸಿಗರ ಹಾಗೂ ಸಾರ್ವಜನಿಕರ ಜವಾಬ್ದಾರಿಯಾಗಿದೆ. ನಾವು ಎಲ್ಲೇ ಹೋದರೂ ತ್ಯಾಜ್ಯವನ್ನು ನಿಗದಿತ ಕಸದ ಬುಟ್ಟಿಗಳಲ್ಲೇ ಹಾಕುವ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ಮನಸ್ಥಿತಿ ಬದಲಾಗದ ಹೊರತು ಯಾವುದೇ ದೊಡ್ಡ ಬದಲಾವಣೆ ಸಾಧ್ಯವಿಲ್ಲ. ನಾವು ಬದಲಾದರೆ ನಮ್ಮ ಮುಂಬರುವ ಪೀಳಿಗೆ ಹಾಗೂ ವಿದ್ಯಾರ್ಥಿಗಳು ನಮ್ಮನ್ನು ಅನುಸರಿಸುತ್ತಾರೆ” ಎಂದು ಕಿವಿಮಾತು ಹೇಳಿದರು.

ಉಪನ್ಯಾಸಕ ದತ್ತ ಪ್ರಸನ್ನ ಪಾಟೀಲ್ ಮಾತನಾಡಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪ್ರಸಕ್ತ ವರ್ಷದ ಧೇಯವಾಕ್ಯವಾದ “ಡಿಜಿಟಲ್ ಕಾರ್ಯಸೂಚಿ ಮತ್ತು ಕೃತಕ ಬುದ್ಧಿಮತ್ತೆ (AI)” ಬಳಕೆಯ ಮೂಲಕ ಪ್ರವಾಸೋದ್ಯಮ ಕ್ಷೇತ್ರವನ್ನು ಆಧುನಿಕವಾಗಿ ಮರುಸೃಷ್ಟಿಸಬೇಕಿದೆ ಎಂದು ಅವರು ತಿಳಿಸಿದರು.

ಪ್ರಸ್ತುತ ಪ್ರಪಂಚವು ಡಿಜಿಟಲ್ ಮಯವಾಗಿದ್ದು, ‘ಜೆನ್ ಜಿ’ ಮತ್ತು ‘ಆಲ್ಫಾ’ ಪೀಳಿಗೆಯನ್ನು ತಲುಪಲು AI ತಂತ್ರಜ್ಞಾನ ಅಗತ್ಯವಾಗಿದೆ. ಪ್ರವಾಸೋದ್ಯಮ ಇಲಾಖೆಯು ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳಾದ ಬೇಲೂರು, ಹಳೆಬೀಡು, ಬಾದಾಮಿ, ಪಟ್ಟದಕಲ್ಲು ಹಾಗೂ ಲಕ್ಕುಂಡಿಯ ದೇವಾಲಯಗಳ ಡಿಜಿಟಲ್ ವೀಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮವನ್ನು ಪ್ರೊ. ಬಾಹುಬಲಿ ಜೈನರ್ ​ನಿರೂಪಿಸಿ ವಂದಿಸಿದರು. ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ ಮುರ್ತುಜಾ ಖಾದ್ರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ನಗರಸಭೆ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳು ಪ್ರವಾಸಿಗರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಪಂಚರಾಜ್ಯ ಚುನಾವಣೆಗೆ ದಿನಾಂಕ ಫಿಕ್ಸ್, ಭೌತಿಕ ರ‍್ಯಾಲಿ, ರೋಡ್ ಶೋ ನಿಷೇಧ.

satyadarshana

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2024”

satyadarshana

ಶ್ರಾವಣ ಮಾಸದ ನಿಮಿತ್ಯ ಸಿಹಿ ಭೋಜನ ಉದ್ಘಾಟನಾ ಸಮಾರಂಭ

satyadarshana

Leave a Comment