ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ
ಚೆನ್ನಾಗಿ ಕೆಲಸ ಮಾಡಿದರೆ ನಿರಂತರ ಕೆಲಸ: ತಾ.ಪಂ. ಇಒ ಚಂದ್ರಶೇಖರ ಬಿ. ಕಂದಕೂರು ಭರವಸೆ
ಗಜೇಂದ್ರಗಡ: ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮ್ಯಾಕಲಜೇರಿ ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ ಕಂದಕೂರ ಗುದ್ದಲಿ ಪೂಜೆ ನೆರವೇರಿಸಿದರು.
ಈ ವೇಳೆ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನರೇಗಾ ಯೋಜನೆಯ ಬದಲಾಗಿ ಜುಲೈ 1 ರಿಂದ ವಿಬಿ ಜಿ ರಾಮ್ ಜಿ ಯೋಜನೆ ಜಾರಿಯಾಗಿದೆ. ಈ ಯೋಜನೆಯಲ್ಲಿ ಕೂಲಿಯ ಮೊತ್ತ 382 ಆಗಿದೆ. ಒಂದು ಜಾಬ್ ಕಾರ್ಡ್ ಗೆ ವರ್ಷಕ್ಕೆ 100 ದಿನಗಳ ಬದಲಾಗಿ 125 ದಿನಗಳ ಕಾಲ ಕೆಲಸ ನೀಡಲಾಗುತ್ತದೆ. ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ನರೇಗಾ ಕಾಮಗಾರಿಗಳು ಅಷ್ಟೇ ಅಲ್ಲದೆ ಇನ್ನಷ್ಟು ಕಾಮಗಾರಿಗಳನ್ನು ಅಳವಡಿಸಿಕೊಂಡು ಒಟ್ಟು 375 ಅನುಷ್ಠಾನಗೊಳಿಸಲು ಅವಕಾಶ ನೀಡಲಾಗಿದೆ. ಎಲ್ಲರೂ ಈ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿಗಳ ಜೊತೆಗೆ ಸಮುದಾಯ ಕಾಮಗಾರಿಗಳು ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೆರೆ ಅಭಿವೃದ್ಧಿ, ಚಕ್ ಡ್ಯಾಂ ನಿರ್ಮಾಣ ಶಾಲಾ ಕೊಠಡಿ, ತೋಟಗಾರಿಕೆ ಬೆಳೆಗಳು, ರೇಷ್ಮೆ ಬೆಳೆ ಬೆಳೆಯಲು ಅವಕಾಶವಿದೆ ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಎನ್.ಎಂಎಂಎಸ್ ಹಾಜರಾತಿ ಕಡ್ಡಾಯವಾಗಿ ಕೂಲಿಕಾರರು ಎರಡು ಬಾರಿ ಹಾಜರಿ ಹಾಕಿದರೆ ಮಾತ್ರ ಕೂಲಿ ಸಿಗಲಿದೆ. ಅಳತೆ ತಕ್ಕಂತೆ ಕೆಲಸ ಮಾಡಿದರೆ ದಿನಕ್ಕೆ 382 ರೂ. ಕೂಲಿ ಮೊತ್ತ ಸಿಗಲಿದೆ. ಸರಿಯಾಗಿ ಕೆಲಸ ಮಾಡದಿದ್ದರೆ ಸಂಪೂರ್ಣ ಕೂಲಿ ಸಿಗುವುದಿಲ್ಲ ಎಂದು ತಿಳಿಸಿದರು. ಈ ವೇಳೆ ಕೂಲಿಕಾರರು ನಿರಂತರ ಕೆಲಸ ಕೊಡಬೇಕು ಎಂದು ಕೇಳಿದರು ನೀವು ಚೆನ್ನಾಗಿ ಕೆಲಸ ಮಾಡಿದರೆ ನಿರಂತರವಾಗಿ ಕೆಲಸ ಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಹಾಯಕ ಅಭಿಯಂತರ ಗುರು ಫಕ್ಕೀರಗೌಡ್ರ, ಡಿಇಒ ಮುದಕಪ್ಪ ದೊಣೆಗುಡ್ಡ, ಜಿಕೆಎಂ ಅನ್ನಪೂರ್ಣ ಹಿರೇಮಠ, ಕಾಯಕ ಬಂಧುಗಳು, ಕೂಲಿಕಾರರು ಇದ್ದರು.
