ಕೊಪ್ಪಳ :ಅಕ್ಟೋಬರ್ 06 : ವಿಲ್ ಮೂಲಕ ಬಂದಿರುವ ಜಮೀನಿನ ಉತಾರ ಮಾಡಿಸಿಕೊಡಲು ರೂ. 40,000 ಲಂಚ ಸ್ವೀಕರಿಸುತ್ತಿದ್ದ ಸಂಗಾಪುರದ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕ ಅಕ್ಟೋಬರ್ 06ರಂದು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸಂಗಾಪುರದ ಗ್ರಾಮ ಆಡಳಿತಾಧಿಕಾರಿ ಸೋಮನಾಥ ಟಿ. ಹಾಗೂ ಗ್ರಾಮ ಸಹಾಯಕ ಹನುಮೇಶ ಬಂಡಿ ಆಂಜನೇಯ ಬಂಧಿತ ಆರೋಪಿಗಳಾಗಿದ್ದಾರೆ.
*ಘಟನೆಯ ವಿವರ:* ಗಂಗಾವತಿ ತಾಲೂಕಿನ ಅಂಜನಹಳ್ಳಿ ನಿವಾಸಿ ರಾಮು ತಂದೆ ವೆಂಕಟೇಶ ಎಂಬುವವರಿಗೆ ತಮ್ಮ ಸಣ್ಣಜ್ಜನಿಂದ ವಿಲ್ ಮೂಲಕ ಜಮೀನು ಬಂದಿತ್ತು. ಈ ಜಮೀನಿನ ದಾಖಲೆಗಳನ್ನು (ಉತಾರ) ತಮ್ಮ ಹೆಸರಿಗೆ ಮಾಡಿಸಿಕೊಡುವಂತೆ ಅವರು ಗಂಗಾವತಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಕೆಲಸ ಮಾಡಿಕೊಡಲು ಗ್ರಾಮ ಆಡಳಿತಾಧಿಕಾರಿ ಸೋಮನಾಥ ಟಿ. ಹಾಗೂ ಗ್ರಾಮ ಸಹಾಯಕ ಹನುಮೇಶ ರೂ. 40,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ರಾಮು ಅವರು ಅಕ್ಟೋಬರ್ 5 ರಂದು ಕೊಪ್ಪಳದ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಮಂಗಳವಾರ (ಅಕ್ಟೋಬರ್ 6) ಮಧ್ಯಾಹ್ನ ಸುಮಾರು 12:40ರ ವೇಳೆಗೆ ಫಿರ್ಯಾದಿ ರಾಮು ಅವರಿಂದ ರೂ. 40,000 ಲಂಚದ ಹಣವನ್ನು ಪಡೆಯುತ್ತಿದ್ದಾಗ ಇಬ್ಬರೂ ಅಧಿಕಾರಿಗಳನ್ನು ರೆಡ್ಹ್ಯಾಂಡ್ ಆಗಿ ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಂದ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ರಾಯಚೂರು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ, ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಸುನೀಲ ಮೇಗಲಮನಿ, ಶೈಲಾ ಎಸ್. ಪ್ಯಾಟಿಶೆಟ್ಟರ್ ಹಾಗೂ ಸಿಬ್ಬಂದಿಗಳ ತಂಡ ಈ ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಕೊಪ್ಪಳ ಲೋಕಾಯುಕ್ತ ಕಚೇರಿಯ ಪ್ರಕಟಣೆ ತಿಳಿಸಿದೆ.
