ಗದಗ 29 ಕಾನೂನು ಬದ್ಧ ಸುರಕ್ಷಿತ ಮತ್ತು ಕಳಂಕವಿಲ್ಲದ ಗರ್ಭಪಾತ ಸೇವೆಗಳು ಪ್ರತಿಯೊಬ್ಬ ಮಹಿಳೆಯರಿಗೂ ತಲುಪುವಂತೆ ಮಾಡುವಲ್ಲಿ ಒಗ್ಗಟ್ಟಿನ ಕಾರ್ಯಾಚರಣೆ ಅಗತ್ಯವಾಗಿದ್ದು ಸುರಕ್ಷಿತ ಗರ್ಭಪಾತ ಮಹಿಳೆಯರ ಆರೋಗ್ಯದ ಹಕ್ಕು ಎಂದು ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ. ಎಚ್ ಎಲ್ ಗಿರಡ್ಡಿ ಅವರು ಹೇಳಿದರು.
ಗದಗ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯವು ಇಲ್ಲಿಯ ತಾಲೂಕ ಆರೋಗ್ಯ ಅಧಿಕಾರಿಗಳ ಸಭಾಭವನದಲ್ಲಿ ಏರ್ಪಡಿಸಿದ್ದ 2026 ನೇ ಸಾಲಿನ ಅಂತರರಾಷ್ಟ್ರೀಯ ಸುರಕ್ಷಿತ ಗರ್ಭಪಾತ ಸೇವೆಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮೇಲಿನಂತೆ ಮಾತನಾಡಿದ ಡಾ. ಗಿರಡ್ಡಿ ಅವರು ಈಗ ಪ್ರಸವಪೂರ್ವ ಹಾಗೂ ಗರ್ಭಪೂರ್ವ ಬ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಯಡಿ ಗರ್ಭದಲ್ಲಿಯೇ ಮಗುವಿನ ಲಿಂಗ ಪತ್ತೆ ಮಾಡಿ ಗರ್ಭಪಾತ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ತೀರ ಅವಶ್ಯವಿದ್ದ ಪಕ್ಷದಲ್ಲಿ ಮಾತ್ರ ಕಾನೂನಾತ್ಮಕವಾಗಿ ತಜ್ಞರಿಂದ ಸುರಕ್ಷಿತ ಗರ್ಭಪಾತ ಮಾಡಿಸಲು ಮಾತ್ರ ಅವಕಾಶ ಇದೆ ಎಂದರು.
ಮುಖ್ಯ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಬೆಂಗಳೂರಿನ ಆರೋಗ್ಯ ಇಲಾಖೆಯ ನಿರ್ದೇಶನಾಲಯದ ಸಮಗ್ರ ಗರ್ಭಪಾತ ಕಾರ್ಯಕ್ರಮದ ತಾಂತ್ರಿಕ ಘಟಕದ ಸಲಹೆಗಾರರಾದ ಜಿ. ದೊಡ್ಡನಗೌಡ ಅವರು ಮಾತನಾಡಿ ಅಸುರಕ್ಷಿತ ಗರ್ಭಪಾತದಿಂದ ಶೇಕಡಾ 8 ರಷ್ಟು ಮರಣ ಸಂಭವಿಸುತ್ತಿದ್ದು ಇವನ್ನು ತಡೆಗಟ್ಟಲು ಸಮಗ್ರ ಮಾಹಿತಿಯನ್ನು ಸಮುದಾಯಕ್ಕೆ ತಿಳಿಸಿ ಮರಣ ತಪ್ಪಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಹಿಂದಿನ ದಿನಗಳಂತೆ ಗರ್ಭಪಾತವನ್ನ ಸಾಂಪ್ರದಾಯಕವಾಗಿ ಮನೆಯಲ್ಲಿ ಮಾಡಲು ಈಗ ಅವಕಾಶವಿಲ್ಲ ಏಕೆಂದರೆ ತಾಯಂದಿರ ಮರಣಗಳು ಹೆಚ್ಚುತ್ತಿರುವುದರಿಂದ ಅದನ್ನು ಈಗ ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಹೇಳಿದರು.
ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ. ರಾಜೇಂದ್ರ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸುರಕ್ಷಿತ ಮತ್ತು ಕಳಂಕವಿಲ್ಲದ ಗರ್ಭಪಾತ ಸೇವೆಗಳು ಎಲ್ಲಾ ತಾಯಂದಿರಿಗೂ ತಲುಪುವಂತೆ ಮಾಡುವುದು ಈ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿ ಸರ್ವರನ್ನು ಸ್ವಾಗತಿಸಿದರು. ಆರಂಭದಲ್ಲಿ ಶ್ರೀಮತಿ ಶಾರದಾ ಆಶಾ ಕಾರ್ಯಕರ್ತೆ ಪ್ರಾರ್ಥಿಸಿದರು .ಆಶಾ ಮೆಂಟರ್ ಶ್ರೀಮತಿ ನವೀನ್ ಕುಮಾರಿ ಅವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ವೇದಿಕೆಯ ಮೇಲೆ ಶ್ರೀಮತಿ ಜ್ಯೋತಿ ಹೊಸಮನಿ, ಶ್ರೀಮತಿ ಶಾರದಾ ಪಾಟೀಲ್, ಶ್ರೀಮತಿ ಸರೋಜಾ ಕಟ್ಟಿಮನಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಯಂದಿರು ಗರ್ಭಿಣಿಯರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.
