ಯಲಬುರ್ಗಾ ಪ್ರಸಕ್ತ ಸಾಲಿನಲ್ಲಿ ₹ 970 ಕೋಟಿ ವೆಚ್ಚದಲ್ಲಿ ಕೃಷ್ಣಾ ನದಿಯಿಂದ ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕಿನ ಒಟ್ಟು 34 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಆಯೋಜಿಸಿದ್ದ ಜನ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಳೆದ ವರ್ಷದಲ್ಲಿಯೇ 24 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ’ ಎಂದರು.
‘ಸುಮಾರು 23 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ₹ 125 ಕೋಟಿ ವೆಚ್ಚದ ಹೊಸ ಯೋಜನೆ ರೂಪಿಸಲಾಗಿದ್ದು, ತುಂಗಭದ್ರಾ ನದಿಯಿಂದ ನೀರು ಒದಗಿಸುವ ಕೆಲಸ ಪ್ರಾರಂಭವಾಗಲಿದೆ. ಹಾಗೆಯೇ ಕ್ಷೇತ್ರದ ವಿವಿಧ ಗ್ರಾಮಗಳ ಸಂಪರ್ಕ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಕನೂರು, ಮುಧೋಳ ಹಾಗೂ ಯಲಬುರ್ಗಾ ರಸ್ತೆ ಅಭಿವೃದ್ಧಿಗಾಗಿ ₹ 400 ಕೋಟಿ ಅನುದಾನ ಮೀಸಲಿಡಲಾಗಿದೆ’ ಎಂದು ವಿವರಿಸಿದರು.
‘ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಮುಂದುವರಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ದೀಪಿಕಾ ಯೋಜನೆ ಅಡಿಯಲ್ಲಿ ವಾರ್ಷಿಕ ₹ 30 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ. ತಾಲ್ಲೂಕಿನಲ್ಲಿ ಒಟ್ಟು 13 ಕರ್ನಾಟಕ ಪಬ್ಲಿಲ್ ಶಾಲೆಗಳು ಮಂಜೂರಾಗಿವೆ. ಪ್ರತಿ ಶಾಲೆಗೆ ₹ 4 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿವೆ’ ಎಂದು ಹೇಳಿದರು.
ಬೇವೂರಿನಲ್ಲಿ ₹ 24 ಕೋಟಿ ವೆಚ್ಚದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಹಾಗೆಯೇ ಕಲ್ಲೂರು ಗ್ರಾಮದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ನೂತನ ಸಮುದಾಯ ಭವನ, ₹ 60 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣಕ್ಕೆ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ ಕೊರ್ಲಳ್ಳಿ, ತಾ.ಪಂ ಇಒ ನೀಲಗಂಗಾ ಬಬಲಾದ, ಕೆಆರ್ಐಡಿಎಲ್ ಅಧಿಕಾರಿ ಅನಿಲ್ ಪಾಟೀಲ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ, ಮುಖಂಡರಾದ ಕೆ.ಎಂ. ಸೈಯದ್, ಶಿವನಗೌಡ ದಾನರೆಡ್ಡಿ, ಕೆರೆಬಸಪ್ಪ ನಿಡಗುಂದಿ, ಹಂಪಯ್ಯ ಹಿರೇಮಠ, ವರದಯ್ಯ ಸೇರಿದಂತೆ ಅನೇಕರು ಹಾಜರಿದ್ದರು.
‘ಕುಖ್ಯಾತಿ ಬದಲು ಖ್ಯಾತಿಯಾದೆ’
‘ಎರಡು ದಿನ ನಮ್ಮ ಪರ ಪ್ರಚಾರ ಕೊಟ್ಟಿದ್ದಕ್ಕೆ ಮಾಧ್ಯಮದವರಿಗೆ ವಿಶೇಷವಾಗಿ ಅಭಿನಂದನೆಗಳು. ಬಿಹಾರದ ಎಂಪಿಯೊಬ್ಬರು ಕಾಲ್ ಮಾಡಿ ಎಷ್ಟೊಂದು ಪ್ರಚಾರ ಕೊಡುತ್ತಿದ್ದಾರೆ ಸಾಬ್ ಎಂದು ಕೇಳಿದರು. ಹಾಗೆಯೇ ಸಿಎಂ ಜೊತೆ ಕಾರಿನಲ್ಲಿ ಕುಳಿತಿದ್ದಾಗ ಎಚ್.ಕೆ.ಪಾಟೀಲರು ಹೇಳುತಿದ್ದರು, ‘ಏನು ಮಾರಾಯ ಸೌದಿ ಅರೇಬಿಯಾ, ಇರಾನ್, ಇರಾಕ್ನಲ್ಲಿಯೂ ನಿಮ್ಮ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ’ ಎಂದರು. ಬಿಜೆಪಿ ಸ್ನೇಹಿತರು ಹಾಗೂ ಮಾಧ್ಯಮದವರು ಕುಖ್ಯಾತಿ ಮಾಡಲು ಪ್ರಯತ್ನಿಸಿದ್ದರು. ಆದರೆ, ಖ್ಯಾತಿಯಾದೆ’ ಎಂದು ಸಚಿವ ಬಸವರಾಜ ರಾಯರಡ್ಡಿ ಅವರು ವ್ಯಂಗ್ಯವಾಡಿದರು.
