ಕೊಪ್ಪಳ: ಸೆಪ್ಟೆಂಬರ್ 07: ಜನಸಾಮಾನ್ಯರಿಂದ ಸ್ವೀಕರಿಸಲಾದ ಕುಂದುಕೊರತೆ ಅರ್ಜಿಗಳನ್ನು ಮತ್ತೊಬ್ಬರಿಗೆ ವರ್ಗಾಯಿಸದೆ, ನಿಯಮಾನುಸಾರ ಪರಿಶೀಲಿಸಿ ಒಂದು ವಾರದೊಳಗೆ ಕನಿಷ್ಠ ಶೇಕಡ 90 ರಷ್ಟು ಅರ್ಜಿಗಳನ್ನು ಸಕಾರಾತ್ಮಕವಾಗಿ ಬಗೆಹರಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರಜಾಸೇವಾ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಸೆಪ್ಟೆಂಬರ್ 5 ರಂದು ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ‘ಪ್ರಜಾಸೇವಾ ಆಂದೋಲನ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಕಂದಾಯ, ಸರ್ವೆ, ಎಡಿಎಲ್‌ಆರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜೆಸ್ಕಾಂ ಹಾಗೂ ವಸತಿ ಯೋಜನೆ ಮತ್ತು ಕುಡಿಯುವ ನೀರಿಗೆ ಸಂಬAಧಿಸಿದ ಒಟ್ಟು 281 ಅರ್ಜಿಗಳು ಸಲ್ಲಿಕೆಯಾಗಿವೆ. ಸಾಮಾನ್ಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಬೇಕು. ನಿವೇಶನ, ವಸತಿ ಬೇಡಿಕೆ, ಪಡಿತರ ಚೀಟಿಗೆ ಹೆಸರು ಸೇರ್ಪಡೆ, ಎಪಿಎಲ್ ಕಾರ್ಡ್ನಿಂದ ಬಿಪಿಎಲ್‌ಗೆ ಬದಲಾವಣೆ ಸೇರಿದಂತೆ ಹಲವು ಸಣ್ಣ-ಪುಟ್ಟ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೇ ಪರಿಹರಿಸಲು ಸಾಧ್ಯವಿದ್ದು, ಅರ್ಜಿಗಳನ್ನು ಪೂರ್ಣವಾಗಿ ಓದಿ ಪರಿಹಾರ ಕಂಡುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು, ಅಧಿಕಾರಿಗಳಿಗೆ ಸಲಹೆ ನೀಡಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ಎಲ್ಲ ಅರ್ಜಿಗಳಿಗೂ ತ್ವರಿತವಾಗಿ ಪರಿಹಾರ ಸಿಗಬೇಕು. ನಿಯಮಗಳಲ್ಲಿ ಅವಕಾಶವಿದ್ದರೆ ಕೆಲಸ ಮಾಡಿಕೊಡಬೇಕು. ಇಲ್ಲವಾದಲ್ಲಿ ನಿಯಮಾವಳಿಯಂತೆ ಸೂಕ್ತ ಕಾರಣ ನೀಡಿ ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ಅರ್ಜಿಗಳನ್ನು ನೆಪಮಾತ್ರಕ್ಕೆ ಬೇರೆಯವರಿಗೆ ವರ್ಗಾಯಿಸಿ ವಿಲೇವಾರಿ ಮಾಡಲಾಗಿದೆ ಎಂದು ತೋರಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
*ಬುಧವಾರ ಅಧಿಕಾರಿಗಳ ಸರಣಿ ಪರಿಶೀಲನಾ ಸಭೆ:* ಪ್ರಜಾಸೇವಾ ಆಂದೋಲನ’ ಸಭೆಯಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಪರಿಶೀಲಿಸಲು ಬರುವ ಬುಧವಾರ ಅಧಿಕಾರಿಗಳ ಮಟ್ಟದಲ್ಲಿ ನಿರಂತರ ಸಭೆ ನಡೆಯಲಿದ್ದು, ಸ್ವೀಕೃತ ಹಾಗೂ ವಿಲೇವಾರಿಯಾದ ಅರ್ಜಿಗಳ ಪರಿಶೀಲನೆಯು ಅಂದು ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ತಹಶೀಲ್ದಾರ್ ಅವರಿಂದ ನಡೆಯಲಿದೆ. ಬಳಿಕ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಹಾಯಕ ಆಯುಕ್ತರಿಂದ ಪರಿಶೀಲನೆ. ನಂತರ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಅಂತಿಮ ಪರಿಶೀಲನೆಯನ್ನು ತಾವು ಖುದ್ದಾಗಿ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಮಸ್ಯೆಗಳು ಸಂಪೂರ್ಣವಾಗಿ ಬಗೆಹರಿಯುವವರೆಗೂ ಇಂತಹ ಪರಿಶೀಲನಾ ಸಭೆಗಳು ಮುಂದುವರಿಯಲಿದ್ದು, ಸೋಮವಾರ ಅಥವಾ ಮಂಗಳವಾರದೊಳಗೆ ಅಧಿಕಾರಿಗಳು ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಜಾಸೇವಾ ಆಂದೋಲನ ಸಭೆಗೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ. ಮೋಹನರಾಜ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಿರ್ಮಾಲ, ಸಹಾಯಕ ಆಯುಕ್ತರಾದ ಮಹೇಬೂಬ್ ಜೀಲಾನಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಶಾಮಸುಂದರ ಕಾಂಬ್ಳೆ, ಜಂಟಿ ಕೃಷಿ ನಿರ್ದೇಶಕರಾದ ಜಿಡಿ ಕೃಷ್ಣಮೂರ್ತಿ, ತೋಟಗಾರಿಕೆ ಜಂಟಿ ನಿರ್ದೇಶಕರಾದ ಕೃಷ್ಣ ಸಿ. ಉಕ್ಕುಂದ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಂಜುನಾಥ ಗುಂಡೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಈಶ್ವರ ಸವಡಿ, ತಹಶೀಲ್ದಾರ ಪ್ರಕಾಶ ನಾಸಿ, ತಾ.ಪಂ ಇಓ ನೀಲಗಂಗಾ ಬಬಲಾದ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಇತರೆ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
