Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಗಂಗಾವತಿ ದೇವಸ್ಥಾನಗಳ ಅನುದಾನ ಲೂಟಿ ಕರ್ಮಕಾಂಡದ ಒಳಮರ್ಮ

ಭಾಗ-2

ನಕಲಿ ಸಹಿ, ಕಳ್ಳ ಎಂಬಿ ರೆಕಾರ್ಡ್ ಥರ್ಡ್ ಪಾರ್ಟಿ ಕಮಿಷನ್ ದಂಧೆ: ಅರೆಸ್ಟ್ ಭೀತಿಯಲ್ಲಿ PRED ಅಧಿಕಾರಿಗಳು

ಗಂಗಾವತಿ:

ಜನಾರ್ದನ ರೆಡ್ಡಿ ಕ್ಷೇತ್ರದಲ್ಲಿ ಶಾಸಕರ ನಿಧಿಯಿಂದ ದೇವಸ್ಥಾನಗಳ ಹೆಸರಿನಲ್ಲಿ ನಡೆದ ಲಕ್ಷಾಂತರ ರೂಪಾಯಿ ಲೂಟಿ ಪ್ರಕರಣವೀಗ ಅಧಿಕಾರಿಗಳ ನಿದ್ದೆಗೆಡಿಸಿದೆ. ‘ದಲಿತ ಭೀಮ ಘರ್ಜನೆ’ ಸಂಘಟನೆಯ ಅಜಯ ಕುಮಾರ್ ಚಲವಾದಿ ಹೊರಹಾಕಿರುವ ದಾಖಲೆಗಳು ಕೇವಲ ಹಣ ಲಪಟಾಯಿಸಿದ್ದಷ್ಟೇ ಅಲ್ಲ, ಸರ್ಕಾರಿ ನಿಯಮಾವಳಿಗಳನ್ನೇ ಅಣಕಿಸಿ ಇಡೀ ವ್ಯವಸ್ಥೆಯನ್ನು ಹೇಗೆ ಕೊಳ್ಳೆಹೊಡೆಯಲಾಗಿದೆ ಎಂಬುದನ್ನು ಬೆತ್ತಲೆ ಮಾಡಿವೆ.

ಬೋಗಸ್ ಬಿಲ್‌ಗಳ ಕರ್ಮಕಾಂಡ ರಟ್ಟಾಗುತ್ತಿದ್ದಂತೆ, ಹಗರಣದಲ್ಲಿ ಷಾಮೀಲಾಗಿರುವ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ರಾತ್ರೋರಾತ್ರಿ ರಂಗಪ್ರವೇಶ ಮಾಡಿದ್ದಾರೆ. ದೇವಸ್ಥಾನ ಸಮಿತಿಯ ಪ್ರಮುಖರ ಬಳಿ ತೆರಳಿ, ಲೋಕಾಯುಕ್ತಕ್ಕಾಗಲಿ, ಪೊಲೀಸರಿಗಾಗಲಿ ದೂರು ಕೊಡಬೇಡಿ. ಸರ್ಕಾರದಿಂದ ಡ್ರಾ ಮಾಡಿಕೊಂಡ ಹಣವನ್ನು ನಾವೇ ಕಂತೆ ಕಂತೆ ನಗದಾಗಿ ನಿಮ್ಮ ಕೈಗಿಡುತ್ತೇವೆ” ಎಂದು ದುಂಬಾಲು ಬಿದ್ದಿದ್ದಾರೆ. ಈ ಸಂಧಾನದ ಕಚ್ಚಾ ಆಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಂಜಿನಿಯರ್‌ಗಳ ಕಳ್ಳಾಟಕ್ಕೆ ಬಲವಾದ ಸಾಕ್ಷ್ಯ ಒದಗಿಸಿವೆ.

ದೇವಸ್ಥಾನ ಸಮಿತಿಯ ಧರ್ಮದರ್ಶಿಗಳಿಗೆ ಕಿಂಚಿತ್ತೂ ಸುಳಿವು ನೀಡದೆ, ದಾಖಲೆಗಳಲ್ಲಿ ನಕಲಿ ಹೆಸರು ಮತ್ತು ತಮಗೆ ಬೇಕಾದ ಮೊಬೈಲ್ ನಂಬರ್‌ಗಳನ್ನು ನಮೂದಿಸಿ ಬೋಗಸ್ ಸಹಿಗಳನ್ನು ಗೀಚಲಾಗಿದೆ.

ಸ್ಥಳ ಪರಿಶೀಲನೆ ನಡೆಸಿ ಗುಣಮಟ್ಟ ಪರೀಕ್ಷಿಸಬೇಕಿದ್ದ ಥರ್ಡ್ ಪಾರ್ಟಿ ಕ್ವಾಲಿಟಿ ಕಂಟ್ರೋಲ್ ಏಜೆನ್ಸಿ ಕಚೇರಿಯಲ್ಲೇ ಕುಳಿತು ಕಾಮಗಾರಿ ಉತ್ಕೃಷ್ಟವಾಗಿದೆ’ ಎಂದು ಕಳ್ಳ ಪ್ರಮಾಣಪತ್ರ (QC Certificate) ನೀಡಿದೆ.

ಪಂಚಾಯತ್ ರಾಜ್ ಎಂಜಿನಿಯರಿಂಗ್ (PRED) ಎಂಜಿನಿಯರ್‌ಗಳು ಸ್ಥಳಕ್ಕೆ ಹೋಗದೆ ಕಚೇರಿಯ ಮೇಜಿನ ಮೇಲೆಯೇ ಅಳತೆ ಪುಸ್ತಕ (MB Record) ಭರ್ತಿ ಮಾಡಿ ಸಿಸಿ ಬಿಲ್ ಸಿದ್ಧಪಡಿಸಿದ್ದಾರೆ.

ಕೇವಲ ಒಂದೆರಡು ತಿಂಗಳ ಅಂತರದಲ್ಲಿ (ಮೇ 2025 ರಿಂದ ಜನವರಿ 2026ರ ವರೆಗೆ) ನಾಲ್ಕು ದೇವಸ್ಥಾನಗಳ ಬಿಲ್ ಪಾಸ್ ಮಾಡಿಸಿಕೊಂಡು ಒಟ್ಟು ಲಕ್ಷಾಂತರ ರೂಪಾಯಿ ಲಪಟಾಯಿಸಲಾಗಿದೆ.

ಶಾಸಕರ ನೈತಿಕ ಪರೀಕ್ಷೆ

ತಮ್ಮ ಕಣ್ಣೆದುರೇ ಇಷ್ಟೆಲ್ಲಾ ಭ್ರಷ್ಟಾಚಾರದ ಜಾಲ ಹೆಣೆದುಕೊಂಡಿದ್ದರೂ ಸ್ಥಳೀಯ ಶಾಸಕ ಜನಾರ್ದನ ರೆಡ್ಡಿಯವರು ಈವರೆಗೂ ಸಂಬಂಧಪಟ್ಟ ಎಂಜಿನಿಯರ್‌ಗಳ ಮೇಲೆ ಇಲಾಖಾ ತನಿಖೆಗೆ ಆದೇಶಿಸಿಲ್ಲ. ಶಾಸಕರ ಆಪ್ತ ವಲಯದ ಕೃಪಾಕಟಾಕ್ಷವಿಲ್ಲದೆ ಅಧಿಕಾರಿಗಳು ಇಷ್ಟೊಂದು ಧೈರ್ಯವಾಗಿ ದೇವಸ್ಥಾನದ ಅನುದಾನಕ್ಕೆ ಕೈಹಾಕಲು ಸಾಧ್ಯವೇ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.

ಬೀದಿಗಿಳಿಯಲು ಸಜ್ಜಾದ ಭಕ್ತ ಸಮೂಹ ಮತ್ತು ಸಂಘಟನೆಗಳು ದೇವರ ಹೆಸರಿನಲ್ಲಿ ನಡೆದ ಈ ದರೋಡೆಯನ್ನು ಯಾವುದೇ ಕಾರಣಕ್ಕೂ ಮುಚ್ಚಿಹಾಕಲು ಬಿಡುವುದಿಲ್ಲ. ಅಕ್ರಮ ಎಸಗಿದ PRED ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿ ಜೈಲಿಗಟ್ಟಬೇಕು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ಥರ್ಡ್ ಪಾರ್ಟಿ ಪರಿಶೀಲನಾ ಏಜೆನ್ಸಿಯ ಲೈಸೆನ್ಸ್ ರದ್ದುಪಡಿಸಬೇಕು. ಇಲ್ಲದಿದ್ದರೆ ಗಂಗಾವತಿ ತಾಲೂಕು ಪಂಚಾಯತ್ ಹಾಗೂ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಜಿಲ್ಲಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಅಜಯ ಕುಮಾರ್ ಚಲವಾದಿ ಎಚ್ಚರಿಸಿದ್ದಾರೆ.

Related posts

ಶಿಕ್ಷಣದಲ್ಲಿ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಿ.

satyadarshana

ಶಿಗ್ಗಾವಿಯ ಸಿಎಂ ಮನೆವರೆಗೂ ಪಾದಯಾತ್ರೆ ಕೈಗೊಂಡ ಮಹಿಳೆಯರು

satyadarshana

ಕರ್ನಾಟಕ ನದಾಫ್ ಪಿಂಜಾರ್ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪೆನ್ನು ಮತ್ತು ನೋಟ ಪುಸ್ತಕ ಹಾಗೂ ಅಂಕಲಿಪಿ ವಿತರಣೆ

satyadarshana

Leave a Comment