ಆಭರಣ. ಆದರೂ ಕೂದಲು ಆಕರ್ಷಣೆಯ ಸಂಕೇತ್ ಮಾತ್ರವಲ್ಲದೆ ಆರೋಗ್ಯದ ಕನ್ನಡಿಯು ಆಗಿದೆ. ಸುಂದರ ಮತ್ತು ಆರೋಗ್ಯಕರ ಕೂದಲು ಒಬ್ಬ ವ್ಯಕ್ತಿಯ ಆತ್ಮವಿಶ್ವಾಸದ ಶಕ್ತಿಶಾಲಿ ಸಾಧನವಾಗಿರುತ್ತದೆ. ಆರೋಗ್ಯಕರ, ಉದ್ದ ಮತ್ತು ಮಿನುಗುವ ಕೂದಲು ವ್ಯಕ್ತಿಯ ವ್ಯಕ್ತಿತ್ವವನ್ನು ಹೆಚ್ಚಿಸಲು ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ಕೂದಲನ್ನು ಆರೋಗ್ಯಕರ ಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ಸಂಪೂರ್ಣವಾಗಿ ನಮ್ಮ ಜವಾಬ್ದಾರಿಯಾಗಿದೆ, ಏಕೆಂದರೆ ಮುಖದಂತೆಯೇ ಕೂದಲು ಕೂಡ ದೇಹದ ಆರೋಗ್ಯದ ಸ್ಥಿತಿಯನ್ನು ಪ್ರತಿಬಿಂಬಿಸುವ ಕನ್ನಡಿ ಆಗಿದೆ.
ಈ ಆಧುನಿಕ ಮತ್ತು ಅಭಿವೃದ್ಧಿಯಾದ ಯುಗದಲ್ಲಿ ಜನರು ಅನೇಕ ಸುಧಾರಿತ ಸೌಲಭ್ಯಗಳನ್ನು ಹೊಂದಿದ್ದರೂ, ಅದೇ ಸಮಯದಲ್ಲಿ ಕುಳಿತ ಜೀವನಶೈಲಿ, ಒತ್ತಡದಿಂದ ಕೂಡಿದ ಗಡಿಬಿಡಿ ದಿನಚರಿ ಮತ್ತು ಅಸ್ವಸ್ಥ ಆಹಾರ ಪದ್ಧತಿಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳೆಲ್ಲವೂ ದೇಹದ ಸಮತೋಲನ (ಹೋಮಿಯೋಸ್ಟೇಸಿಸ್) ಮೇಲೆ ನೇರ ಪರಿಣಾಮ ಬೀರುತ್ತವೆ ಮತ್ತು ಕೂದಲು ಉದುರುವಿಕೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಸಮಾಜದಲ್ಲಿ ಕೂದಲು ಉದುರುವಿಕೆಯ ಸಮಸ್ಯೆ ದಿನೇದಿನೇ ಹೆಚ್ಚುತ್ತಿದ್ದು, ಅದು ಜೀವನದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿದೆ. ಅತಿಲವಣಸೇವನೆ (ಅತಿಯಾದ ಉಪ್ಪಿನ ಸೇವನೆ), ಅತಿಕ್ಷಾರಸೇವನೆ (ಅತಿಯಾದ ಕ್ಷಾರ ಪದಾರ್ಥಗಳ ಸೇವನೆ), ವಿರುದ್ದಾಹಾರ, ಅತಿಯಾದ ಸೂರ್ಯತಾಪ ಸೇವನೆ, ಅವಸಾದ (ಮನೋನ್ಮಾದ/ಖಿನ್ನತೆ), ಪೌಷ್ಠಿಕಾಂಶಗಳ ಕೊರತೆ ಇತ್ಯಾದಿ ಕಾರಣಕಾರಕ ಅಂಶಗಳು ಮುಖ್ಯವಾಗಿ ಖಾಲಿತ್ಯ (ಕೂದಲು ಉದುರುವಿಕೆ) ಗೆ ಕಾರಣವಾಗುತ್ತವೆ.
ಆಯುರ್ವೇದವು ಆರೋಗ್ಯಕರ ಕೂದಲನ್ನು ಉಳಿಸಿಕೊಳ್ಳಲು ಮತ್ತು ವಿವಿಧ ಕೂದಲು ಸಮಸ್ಯೆಗಳನ್ನು ಚಿಕಿತ್ಸಿಸಲು ಸುರಕ್ಷಿತ ಹಾಗೂ ಕಡಿಮೆ ವೆಚ್ಚದ ಪರ್ಯಾಯ ವಿಧಾನವಾಗಿದೆ. ಆಯುರ್ವೇದ ಔಷಧಿ ಸಸ್ಯಗಳು ಮತ್ತು ಮನೆಮದ್ದುಗಳು, ಪ್ರಾರಂಭಿಕ ಹಂತದಲ್ಲೇ ಅನುಸರಿಸಿದರೆ ಹಾಗೂ ಕಡ್ಡಾಯವಾಗಿ ಪಥ್ಯ–ಅಪಥ್ಯಗಳನ್ನು ಪಾಲಿಸಿದರೆ, ಕೂದಲು ಉದುರುವಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಹಾಯಕವಾಗುತ್ತವೆ.
ಕೆಲವೊಂದು ಮನೆಯಲ್ಲಿಯೇ ತಯಾರಿಸಬಹುದಾದ ಕೇಶ ತೈಲ ಮತ್ತು ಶಾಂಪೋಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.
1) ಕೇಶ ತೈಲ –
ಇದ್ದಕೆ ನಮಗೆ ಕೆಂಪು ದಾಸವಾಳ ಹೂ, ದಾಸವಾಳ ಎಲೆ, ಕರಿಬೇವೂ (ನೇರಳಿನಲ್ಲಿ ವಣಗಿಸಿರಿವು), , ಈ ಎಲ್ಲಾ ಸಾಮಗ್ರಿಗಳನ್ನು ಒಂದು ಬಾಂಡಲೆಗೆ ಹಾಕಿ, ಅದರ ಮೇಲೆ ನಿಲ್ಲುವಷ್ಟು ಕೊಬರಿ ಎಣ್ಣೆಯನ್ನು ಹಾಕಿ, ಸಣ್ಣ ಊರಿಯ ಮೇಲೆ ಇಟ್ಟು, ಕರಿಬೇವಿನ ಸುವಾಸನೆ ಬರುವವರಿಗೂ ಕಾಯಿಸಿ, ನಂತರ ಮೆಂತ್ಯಕಾಳು ( ಒಂದು ಸಣ್ಣ ಚಮಚದಷ್ಟು ) ಹಾಕಿ, ಊರಿಯಿಂದ ಕೆಳಗಿಳಿಸಬೇಕು. ಈ ಎಣ್ಣೆಯನ್ನು ತಣ್ಣಗಾದ ಮೇಲೆ ಶೇಕರಿಸಿ ಒಂದು ಡಬ್ಬದಲ್ಲಿ ಹಾಕಿಟ್ಟು, ನಿತ್ಯ ಉಪಯೋಗಿಸಬಹುದು. ಇದರಿಂದ ಕೂದಲಿಗೆ ಶಕ್ತಿ, ಪೋಷಕಾಂಶಗಳು ದೊರೆಯುತ್ತದೆ.
2) ಶ್ಯಾಂಪೋ-
ಇದನ್ನು ತಯಾರಿಸಲು, 2-3 ಅಂಟ್ವಳಕಾಯಿ, 3-4 ಸೀಗೆಕಾಯಿ, ಮತ್ತು ಒಂದು ಚಮಚದಷ್ಟು ಒಣಗಿದ ನೆಲ್ಲಿಕಾಯಿ. ಈವೆಲ್ಲವನ್ನು ಹಿಂದಿನ ರಾತ್ರಿ ತೊಳೆದು ನೆನಸಿಡಬೇಕು. ಮರುದಿನ ಬೆಳ್ಳಗ್ಗೆ ಅದೇ ನೀರಿನಲ್ಲಿ ಸಣ್ಣ ಊರಿಯಲ್ಲಿ ಕುದಿಸಬೇಕು, ಸ್ವಲ್ಪ ಮೇತ್ತಗಾದಮೇಲೆ ಅದನ್ನು ಊರಿಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಬೇಕು. ನಂತರ ಅದನ್ನು ಕೈಯಿಂದ ಚನ್ನಾಗಿ ಹಿಸಿಗಿ, ಶೇಕರಿಸಬೇಕು. ಇದನ್ನು ತಲೆ ಸ್ನಾನ ಮಾಡುವಾಗ ತಲೆಗೆ ಹಚ್ಚಿ ಶಂಪೋವಿನ ರೀತಿ ಉಪಯೋಗಿಸಬಹುದು. ಇದರಿಂದ ಎಣ್ಣೆ ಜಿದ್ದು ಹೋಗುತ್ತೆ.
ಸಲಹೆ – ಪ್ರತಿಸಲ ನೀವು ತಲೆ ತೊಳೆಯುವ ಮೊದಲು ಹಿಂದಿನ ದಿನ ತಲೆಗೆ ಎಣ್ಣೆ ಹಚ್ಚುವುದು ಸೂಕ್ತ. ಇದರಿಂದ ಕೂದಲು ಅತೀ ಶುಷಕವಾಗುವುದನ್ನು ತಾಡಯಬಹುದು.
3) ಹೇರ್ ಕಂಡೀಷನರ್-
ಎರಡು ಚಮಚದಷ್ಟು ಅಗಸೆ ಬೇಜ, ಮತ್ತು ಒಂದು ಗ್ಲಾಸ್ ನೀರು. ಇವೆರಡನ್ನು ಒಂದು ಬಾಂಡಲೆಗೆ ಹಾಕಿ, ಸಣ್ಣ ಊರಿಯಲ್ಲಿ ಕಾಯಿಸಬೇಕು. ಈ ಮಿಶ್ರಣ ಸ್ವಲ್ಪ ಲೋಳೆ ತರಹ ವಾದಾಗ ಅದನ್ನು ಕೂಡಲೇ ಶೇಕರಿಸಬೇಕು. ಈ ಮಿಶ್ರಣ ವನ್ನು ತಲೆ ಸ್ನಾನ ಮಾಡಿದ ನಂತರ ಹಚ್ಚಿ ಎರಡು ಮೂರು ನಿಮಿಷದ ನಂತರ ಕೂಡಲನ್ನು ತೊಳೆಯಬೇಕು. ಇದರಿಂದ ಕೂದಲು ಮೃದುವಾಗಿ, ಕೂದಲಿಗೆ ಹೊಳಪುನ್ನು ನೀಡುತ್ತದೆ.
ಕೂದಲು ಉದುರುವಿಕೆಯನ್ನು ತಡೆಯುವ ಸಲಹೆಗಳು
• ಸಮರ್ಪಕವಾದ ಮತ್ತು ಗುಣಮಟ್ಟದ ನಿದ್ರೆ ಮಾಡಬೇಕು.
• ಯೋಗ ಮತ್ತು ಧ್ಯಾನದ ಮೂಲಕ ಒತ್ತಡ ಹಾಗೂ ಆತಂಕವನ್ನು ನಿಯಂತ್ರಿಸಬೇಕು.
• ಹೇರ್ ಡೈ, ಹೇರ್ ಡ್ರೈಯರ್, ಕರ್ಳರ್ ಮತ್ತು ಸ್ಟ್ರೈಟ್ನರ್‌ಗಳನ್ನು ಅತಿಯಾಗಿ ಬಳಸಬಾರದು.
• ಕೂದಲು ಬಲವಾಗಿರಲು ಆಹಾರದಲ್ಲಿ ಕ್ಯಾಲ್ಸಿಯಂ ಸೇರಿಸಬೇಕು.
• ಕೂದಲು ಬಣ್ಣಿಸುವಲ್ಲಿ ಕನಿಷ್ಠ 6–8 ವಾರಗಳ ಅಂತರ ಇರಬೇಕು.
• ಜಡೆ, ಬನ್, ಪೋನಿಟೇಲ್ ಮುಂತಾದ ಗಟ್ಟಿಯಾದ ಮತ್ತು ಬಿಗಿಯಾದ ಹೇರ್‌ಸ್ಟೈಲ್‌ಗಳನ್ನು ತಪ್ಪಿಸಬೇಕು.
• ಕೂದಲು ಉದುರುವಿಕೆಯನ್ನು ತಡೆಯಲು ವಿಟಮಿನ್ C ಇರುವ ಆಹಾರ ಸೇವಿಸಬೇಕು (ಶಿಫಾರಸು ಪ್ರಮಾಣ: ದಿನಕ್ಕೆ 1,000–3,000 ಮಿ.ಗ್ರಾಂ).
• ಕೂದಲು ಪ್ರೋಟೀನ್‌ನಿಂದ ನಿರ್ಮಿತವಾಗಿರುವುದರಿಂದ ಪ್ರೋಟೀನ್ ಸಮೃದ್ಧ ಆಹಾರ ಸೇವಿಸಬೇಕು.
• ತಲೆಚರ್ಮ ಹಾಗೂ ದೇಹದ ಇತರ ಭಾಗಗಳಿಗೆ ಸರಿಯಾದ ಆಮ್ಲಜನಕ ಸರಬರಾಜಿಗೆ ಐರನ್ ಅಗತ್ಯ. ವಿಟಮಿನ್ E ಕೂಡ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
• ಕಠಿಣ ಶ್ಯಾಂಪು, ಕಾಂಡಿಷನರ್ ಹಾಗೂ ಕಡಿಮೆ ಗುಣಮಟ್ಟದ ಕೂದಲು ಉತ್ಪನ್ನಗಳನ್ನು ಬಳಸಬಾರದು.
• ಮದ್ಯಪಾನ ಮತ್ತು ಇತರ ಮದ್ಯಪದಾರ್ಥಗಳನ್ನು ನಿಯಂತ್ರಿಸಬೇಕು.
• ತಲೆ ತೊಳೆದ ತಕ್ಷಣ ಒದ್ದೆಯಿರುವ ಕೂದಲನ್ನು ಗಟ್ಟಿಯಾಗಿ ಒರೆಸಬಾರದು ಅಥವಾ ಜಗ್ಗಬಾರದು. ಮೊದಲು ಸಹಜವಾಗಿ ಒಣಗಲು ಬಿಡಿ. ನಂತರ ದೀರ್ಘ ಕೂದಲಿದ್ದರೆ ಕೆಳಭಾಗದಿಂದ ಮೇಲ್ಭಾಗದ ಕಡೆಗೆ ಸೌಮ್ಯವಾಗಿ ಬಾಚಬೇಕು.
• ವಾರಕ್ಕೊಮ್ಮೆ ಕನಿಷ್ಠ ಬೆಚ್ಚಗಿನ ಔಷಧೀಯ ತೈಲದಿಂದ (ಮೂರ್ಧ ತೈಲ/ತೈಲಾಭ್ಯಂಗ) ತಲೆ ಮಸಾಜ್ ಮಾಡಬೇಕು. ತೆಂಗಿನೆಣ್ಣೆಯನ್ನು ನಿಯಮಿತವಾಗಿ ಬಳಸಬಹುದು.
ಇಂದಿನ ಯುಗದಲ್ಲಿ ಆಧುನಿಕ ಜೀವನಶೈಲಿಯನ್ನು ಅನುಸರಿಸುವ ಪೈಪೋಟಿ ಹೆಚ್ಚಾಗಿದೆ. ಇದರ ಪರಿಣಾಮವಾಗಿ ವಿವಿಧ ಸೌಂದರ್ಯ ವಸ್ತುಗಳ ಅತಿಯಾದ ಬಳಕೆ ಹಾಗೂ ಪಾಶ್ಚಾತ್ಯ ಸಂಸ್ಕೃತಿ ಮತ್ತು ಅಸ್ವಸ್ಥ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಯುವ ವಯಸ್ಸಿನಲ್ಲೇ ಕೂದಲು ಉದುರುವಿಕೆ ಅಥವಾ ಬಿಳಿಕರಣ ಹೆಚ್ಚಾಗಿದೆ. ಕೂದಲು ಎಣ್ಣೆ, ಶ್ಯಾಂಪು, ಕಾಂಡಿಷನರ್, ಸಾಬೂನು, ಸೀರಮ್, ಜೆಲ್ ಮತ್ತು ಇತರೆ ಸೌಂದರ್ಯ ಉತ್ಪನ್ನಗಳಂತಹ ಅನೇಕ ರಾಸಾಯನಿಕ ಪದಾರ್ಥಗಳನ್ನು “ಸೌಂದರ್ಯ ಪ್ರಸಾದನ” ಎಂಬ ಹೆಸರಿನಲ್ಲಿ ಔಷಧೀಯ ಪ್ರಚಾರದ ಮೂಲಕ ಕೂದಲು ಬೆಳವಣಿಗೆಗಾಗಿ ಪರಿಚಯಿಸಲಾಗಿದೆ. ಆದರೆ ಇವುಗಳ ಅತಿಯಾದ ಮತ್ತು ಅಜಾಗರೂಕ ಬಳಕೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.
ಆಯುರ್ವೇದ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ, ಆದ್ದಪರಿಣಾಮ ಬೀರದಂತೆ ಪರಿಹಾರ ನೀಡುವಲ್ಲಿ ಪರಿಣಾಮಕಾರಿಯಾಗಿದೆ. ಆಯುರ್ವೇದವು ಕೂದಲು ಆರೈಕೆಗೆ ಸಂಬಂಧಿಸಿದ ಅನೇಕ ಔಷಧ ಸಂಯೋಜನೆಗಳು ಹಾಗೂ ಚಿಕಿತ್ಸಾ ವಿಧಾನಗಳನ್ನು ಒಳಗೊಂಡಿರುವ ಜ್ಞಾನ ಭಂಡಾರವಾಗಿದೆ. . ಪ್ರತಿದಿನ ಸರಿಯಾದ ದಿನಚರ್ಯೆಯನ್ನು ಪಾಲಿಸುವುದು — ಉದಾಹರಣೆಗೆ ಶಿರೋಅಭ್ಯಂಗ (ತಲೆ ತೈಲ ಮಸಾಜ್) ಮತ್ತು ಪ್ರತಿಮರ್ಶ ನಸ್ಯ — ಹಾಗೂ ತೀಕ್ಷ್ಣ, ಉಷ್ಣ, ಕಟು ಮತ್ತು ಲವಣ ರಸಯುಕ್ತ ಆಹಾರವನ್ನು ತಪ್ಪಿಸುವುದರಿಂದ ಗಟ್ಟಿಯಾದ ಮತ್ತು ಸುಂದರ ಕೂದಲನ್ನು ಪಡೆಯಬಹುದು.
ಡಾ. ಶಿಲ್ಪಾ. ಮಹದೇವಪ್ಪ. ಬಾಚಲಾಪುರ್.
ತಜ್ಞ ವೈದ್ಯರು,
ಸರ್ಕಾರಿ ಆಯುರ್ವೇದ ಆಸ್ಪತ್ರೆ
ಯಲಬುರ್ಗಾ.
