Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಟ್ರೆಂಡ್ಬಿಸಿ ಬಿಸಿ ಸುದ್ದಿರಾಜ್ಯ

ಅಂಗಡಿ ಮಾಲಕರಿಗೆ ಪಿಡಿಓ ನೋಟಿಸ್ ಜಾರಿ : ಅಧಿಕ ದರ, ಸ್ವಚ್ಛತೆ ನಿರ್ಲಕ್ಷ್ಯ ಆರೋಪ

ಯಲಬುರ್ಗಾ :ಬೇವೂರು ಗ್ರಾಮದಲ್ಲಿನ ಕೆಲವು ಚಿಕನ್ ಸೆಂಟರ್, ಎಗ್ ರೈಸ್ ಹಾಗೂ ಇತರೆ ಆಹಾರ ಮಾರಾಟ ಮಳಿಗೆಗಳಲ್ಲಿ ಅಧಿಕ ದರ ವಸೂಲಿ, ಬೆಲೆಪಟ್ಟಿ ಪ್ರದರ್ಶಿಸದಿರುವುದು ಹಾಗೂ ಸ್ವಚ್ಛತೆ ನಿರ್ಲಕ್ಷ್ಯದ ಕುರಿತು ಗ್ರಾಮಸ್ಥರು ನೀಡಿದ ದೂರಿಗೆ ಸ್ಪಂದಿಸಿರುವ ಗ್ರಾಮ ಪಂಚಾಯಿತಿ, ಸಂಬಂಧಪಟ್ಟ ಅಂಗಡಿ ಮಾಲೀಕರಿಗೆ ಸೂಚನಾ ಪತ್ರ ಜಾರಿಗೊಳಿಸಿದೆ.

ಪಿಡಿಓ ಅಬ್ದುಲ್ ಗಫಾರ್ ಅವರ ಸೂಚನೆಯಂತೆ, ಕೊಪ್ಪಳ-ಯಲಬುರ್ಗಾ ರಸ್ತೆಯಲ್ಲಿರುವ ಡಾಬಾಗಳು, ಚಿಕನ್ ಸೆಂಟರ್‌ಗಳು, ಎಗ್ ರೈಸ್ ಅಂಗಡಿಗಳು, ಟೀ ಸ್ಟಾಲ್‌ಗಳು, ಹೋಟೆಲ್‌ಗಳು ಹಾಗೂ ಇತರೆ ಆಹಾರ ಮಾರಾಟ ಮಳಿಗೆಗಳ ಮಾಲೀಕರಿಗೆ ಬೆಲೆಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಹಾಗೂ ಸ್ವಚ್ಛತೆ ಕಾಪಾಡುವಂತೆ ಸೂಚಿಸಲಾಗಿದೆ.

ಗ್ರಾಮಸ್ಥರ ಪ್ರಕಾರ, ಸಮೀಪದ ಯಲಬುರ್ಗಾ, ಕೊಪ್ಪಳ ಹಾಗೂ ಕುಷ್ಟಗಿ ಪಟ್ಟಣಗಳಲ್ಲಿ ಒಂದು ಕೆಜಿ ಚಿಕನ್ 250 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದರೆ, ಬೇವೂರಿನ ಕೆಲವು ಅಂಗಡಿಗಳಲ್ಲಿ 300 ರೂ. ರವರೆಗೆ ದರ ವಸೂಲಿ ಮಾಡಲಾಗುತ್ತಿದೆ. ಎಗ್ ರೈಸ್ ಸೇರಿದಂತೆ ಇತರೆ ಆಹಾರ ಪದಾರ್ಥಗಳಿಗೂ ಅಧಿಕ ದರ ವಿಧಿಸಲಾಗುತ್ತಿದ್ದು, ಬೆಲೆಪಟ್ಟಿ ಪ್ರದರ್ಶಿಸದ ಕಾರಣ ಗ್ರಾಹಕರು ಹೆಚ್ಚುವರಿ ಹಣ ಪಾವತಿಸುವಂತಾಗಿದೆ ಎಂದು ಆರೋಪಿಸಲಾಗಿದೆ

ಗ್ರಾಮದ ಯುವ ಮುಖಂಡ ಕರಿಯಪ್ಪ ಮಣ್ಣಿನವರ್ ಮಾತನಾಡಿ, ಅಂಗಡಿ ಮಾಲೀಕರು ಮನಬಂದಂತೆ ದರ ನಿಗದಿಪಡಿಸಿ ಗ್ರಾಹಕರನ್ನು ಶೋಷಿಸುತ್ತಿದ್ದಾರೆ. ಬೆಲೆಪಟ್ಟಿ ಪ್ರದರ್ಶಿಸದಿರುವುದು ಗ್ರಾಹಕರ ಹಕ್ಕಿನ ಉಲ್ಲಂಘನೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಲ್ಲದೆ, ಆಹಾರ ಮಾರಾಟ ಮಳಿಗೆಗಳ ಸುತ್ತ ತ್ಯಾಜ್ಯ, ಪ್ಲಾಸ್ಟಿಕ್, ಖಾಲಿ ಬಾಟಲಿಗಳು ಹಾಗೂ ಕಸವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಪಂಚಾಯಿತಿ ತಿಳಿಸಿದೆ. ಈ ಹಿಂದೆ ಹಲವು ಬಾರಿ ಮೌಖಿಕ ಹಾಗೂ ಲಿಖಿತ ಸೂಚನೆ ನೀಡಿದ್ದರೂ ಸುಧಾರಣೆ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಗಡಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವನ್ನು ಪ್ರತಿದಿನ ಸ್ವಚ್ಛವಾಗಿಟ್ಟುಕೊಳ್ಳಬೇಕು. ತ್ಯಾಜ್ಯವನ್ನು ನಿಗದಿತ ಸ್ಥಳದಲ್ಲಿಯೇ ವಿಲೇವಾರಿ ಮಾಡಬೇಕು. ಸೂಚನೆಗಳನ್ನು ಪಾಲಿಸದಿದ್ದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಅನ್ವಯ ಕಾನೂನು ಕ್ರಮ ಜರುಗಿಸುವುದರ ಜೊತೆಗೆ ಅಗತ್ಯವಿದ್ದಲ್ಲಿ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿಸುವ ಕ್ರಮವೂ ಕೈಗೊಳ್ಳಲಾಗುವುದು ಎಂದು ಪಿಡಿಓ ಅಬ್ದುಲ್ ಗಫಾರ್ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕರಿಯಪ್ಪ ಮಣ್ಣಿನವರ, ಶೇಖಪ್ಪ ಮರಗಪ್ಪನವರ, ಮುದಕಪ್ಪ ಪೂಜಾರ, ಈರಪ್ಪ ಹಿರೇಮನಿ, ಮುದ್ದಪ್ಪ ಮಣ್ಣಿನವರ, ಉಮೇಶ್ ಓಜೀನಳ್ಳಿ, ಲಕ್ಷ್ಮಣ್ಣ ಹಿರೇಮನಿ ಹಾಗೂ ಅರಳಯ್ಯ ಜಾಲಿಗಿಡದ ಉಪಸ್ಥಿತರಿದ್ದರು.

 

Related posts

ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಿ

satyadarshana

ಪ್ರಾಮಾಣಿಕ ಪರಿಶ್ರಮದಿಂದ ಸರ್ವವುಸಾಧ್ಯ. ಡಾ. ಮಾದಿ 

satyadarshana

ಸತ್ಯದರ್ಶನ ಕನ್ನಡ ದಿನಪತ್ರಿಕೆ.26.04.2023

satyadarshana

Leave a Comment