Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಬೆಂಗಳೂರಲ್ಲಿ ವಿದ್ಯುತ್‌ ಶಾಕ್‌, ಬಿರುಗಾಳಿಗೂ ವಿದ್ಯಾರ್ಥಿ ಸೇರಿ 3 ಜನ ಸಾವು: 7 ಮಂದಿಯನ್ನು ಬಲಿಪಡೆದ ಬೌರಿಂಗ್ ಆಸ್ಪತ್ರೆ ಕಂಪೌಂಡ್ ಬಳಿ ನಿಜಕ್ಕೂ ನಡೆದಿದ್ದೇನು?

ಬೆಂಗಳೂರ :ನಗರದಲ್ಲಿ ಬುಧವಾರ ಸಂಜೆ ಬಿರುಗಾಳಿ ಸಹಿತ ಸುರಿದ ಮಳೆಗೆ ವಿದ್ಯುತ್‌ ಪ್ರವಹಿಸಿ ಇಬ್ಬರು ಮೃತಪಟ್ಟಿದ್ದು, ಮತ್ತೊಂದೆಡೆ ಬಿರುಗಾಳಿಯಿಂದ ಹಾರಿಬಂದ ಶೀಟ್ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ಕೆ.ಜಿ.ಹಳ್ಳಿಯ ಸೈಯದ್‌ ಸೂಫಿಯಾನ್‌ (17) ಹಾಗೂ ಜೆಡಿ ಮರ ಕೊಳೆಗೇರಿ ಪ್ರದೇಶದ ನಿವಾಸಿ ರಘು (35) ಹಾಗೂ ಮೈಸೂರು ರಸ್ತೆಯ ಕಸ್ತೂರಿನಗರದ ಮಂಜುನಾಥ್ (35) ಮೃತಪಟ್ಟವರು.

ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.

ಗೋಡೆ ಕುಸಿದು 7 ಮಂದಿ ಸಾವನ್ನಪ್ಪಿರುವ ಬೌರಿಂಗ್‌ ಆಸ್ಪತ್ರೆಯಿಂದ ಅನತಿ ದೂರದಲ್ಲಿಯೇ ವಿದ್ಯುತ್‌ ಪ್ರವಹಿಸಿ ವಿದ್ಯಾರ್ಥಿ ಸೈಯದ್‌ ಸೂಫಿಯಾನ್‌ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತನ ತಾಯಿ ಉಮಯಾ ಸಲ್ಮಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಥಮ ಪಿಯುಸಿಯಲ್ಲಿಉತ್ತೀರ್ಣನಾಗಿದ್ದ ಸೂಫಿಯಾನ್‌ಗೆ ಹೊಸ ಬಟ್ಟೆ ಕೊಡಿಸುವ ಸಲುವಾಗಿ ತಾಯಿ ಸಲ್ಮಾ ಅವರು ಆತನನ್ನು ಶಿವಾಜಿನಗರಕ್ಕೆ ಕರೆತಂದಿದ್ದರು. ಮಳೆ ಜೋರಾಗಿ ಸುರಿಯುತ್ತಿದ್ದ ಸಂದರ್ಭದಲ್ಲಿ ವಿದ್ಯುತ್‌ ಕಂಬದ ಬಳಿ ನಿಲ್ಲಿಸಿದ್ದ ಬೈಕ್‌ ತೆಗೆದುಕೊಳ್ಳಲು ಹೋದಾಗ ವಿದ್ಯುತ್‌ ಪ್ರವಹಿಸಿ ಸೂಫಿಯಾನ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಮಾಲ್‌ ಸಮೀಪದ ಬಸ್‌ ನಿಲ್ದಾಣದ ಬಳಿ ರಾತ್ರಿ 8.25ರ ಸುಮಾರಿನಲ್ಲಿ ನಿಂತಿದ್ದ ರಘು, ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಓಡಿ ಹೋಗಿ ಜೀವ ಉಳಿಸಿಕೊಂಡರು..

ಶಿವಾಜಿನಗರದಲ್ಲಿನ ಟ್ರಾಫಿಕ್‌ ಕಿರಿಕಿರಿ, ರಸೆಲ್‌ ಮಾರುಕಟ್ಟೆಯ ಸದ್ದುಗದ್ದಲದ ನಡುವೆ ನೂರಾರು ಬಡ ರೋಗಿಗಳ ಪಾಲಿಗೆ ಆಸರೆಯಾಗಿರುವ ಬೌರಿಂಗ್‌ ಆಸ್ಪತ್ರೆಯ ಕಾಂಪೌಂಡ್‌ ಈಗ ಅಕ್ಷರಶಃ ಮೃತ್ಯುಪಾಶವಾಗಿ ಪರಿಣಮಿಸಿದೆ.

ಘಟನೆ ಸಂದರ್ಭದಲ್ಲಿ ಸುಮಾರು 30 ಮಂದಿ ಅಲ್ಲಿದ್ದರು. ಕಾಂಪೌಂಡ್‌ ಕುಸಿಯುತ್ತಿದ್ದಂತೆಯೇ ಹಲವರು ಅಲ್ಲಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಉಳಿದ 10 ಮಂದಿ ಗೋಡೆಯ ಅವಶೇಷಗಳಡಿ ಸಿಲುಕಿ ಹಾಕಿಕೊಂಡಿದ್ದಾರೆ. ಅದರಲ್ಲಿ 7 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಸ್ತುಗಳು:

ಕಾಂಪೌಂಡ್‌ ಕುಸಿದಿರುವ ಜಾಗದಲ್ಲಿ ವ್ಯಾಪಾರಿಗಳ ತಳ್ಳುವ ಗಾಡಿಗಳು ನುಜ್ಜುಗುಜ್ಜಾಗಿವೆ. ಅಲ್ಲದೆ, ಬಟ್ಟೆ, ಚಪ್ಪಲಿ ಸೇರಿದಂತೆ ಇತರೆ ವಸ್ತುಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿದ್ದ ಕಾಂಪೌಂಡ್‌ ಕೊಂಚ ಬಿರುಕು ಬಿಟ್ಟಿತ್ತು. ಆದರೆ, ಆಸ್ಪತ್ರೆ ಆಡಳಿತ ಮಂಡಳಿಯವರು ದುರಸ್ತಿ ಕಾರ್ಯ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದ ಪರಿಣಾಮ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 30 ವರ್ಷಗಳಷ್ಟು ಹಳೆಯದಾದ ಮಣ್ಣಿನ ಗೋಡೆಯಾಗಿದ್ದರಿಂದ ಕುಸಿದು ಬಿದ್ದಿದೆ. ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು, ಕಾಂಪೌಂಡ್‌ಗಳನ್ನು ತೆರವುಗೊಳಿಸಬೇಕು ಎಂದಿದ್ದಾರೆಅತೀಕ್‌ ಅಹಮದ್‌, ಸ್ಥಳೀಯ ನಿವಾಸಿ.

ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 77 ಮಿ.ಮೀ ಮಳೆ:

ನಗರದಾದ್ಯಂತ 60 ಮಿ.ಮೀ ಮಳೆಯಾಗಿದ್ದು, ಕೇಂದ್ರ ನಗರ ಪಾಲಿಕೆಯ ಕಾಟನ್‌ಪೇಟೆ, ಬಿನ್ನಿಪೇಟೆ, ಕೆಂಪಾಪುರ, ಸುಭಾಷ್‌ನಗರದಲ್ಲಿ77.6 ಮಿ.ಮೀ ಮಳೆ ಸುರಿದಿದೆ. ಉತ್ತರ ನಗರ ಪಾಲಿಕೆಯ ಕೆಲವೆಡೆ 8 ಮಿ.ಮೀ ಮಳೆಯಾಗಿದೆ.

68 ಪ್ರದೇಶಗಳು ಜಲಾವೃತ:

ಜಿಬಿಎ ವ್ಯಾಪ್ತಿಯ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 19, ಪೂರ್ವ 5, ಉತ್ತರ 3, ದಕ್ಷಿಣ 29 ಹಾಗೂ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ12 ಕಡೆ ಸೇರಿ 68 ಪ್ರದೇಶಗಳು ಜಲಾವೃತಗೊಂಡಿದ್ದವು.

170 ಮರ, 408 ಕೊಂಬೆ ಧರೆಗೆ:

ನಗರದ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ67, ಪೂರ್ವ 1, ಪಶ್ಚಿಮ 55, ದಕ್ಷಿಣ 23, ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 24 ಮರಗಳು ಸೇರಿದಂತೆ ಒಟ್ಟು 170 ಮರಗಳು ಧರೆಗುರುಳಿವೆ. ಅಲ್ಲದೇ ಬಿರುಗಾಳಿಯ ಆರ್ಭಟಕ್ಕೆ 408 ರೆಂಬೆ-ಕೊಂಬೆಗಳು ಮುರಿದು ಬಿದ್ದಿವೆ. ಈ ಪೈಕಿ ಪಾಲಿಕೆಗಳ ಅರಣ್ಯ ವಿಭಾಗದ ಸಿಬ್ಬಂದಿಗಳು 118 ಮರ ಹಾಗೂ ರೆಂಬೆಗಳನ್ನು ತೆರವುಗೊಳಿಸಿದ್ದಾರೆ.

Related posts

ಭಾರತದ ಸರ್ವೋಚ್ಛ ನ್ಯಾಯಾಲಯದಿಂದ ‘ಸಮಾಧಾನ ಸಮಾರೋಹ-2026’ ಪ್ರಥಮ ಬಾರಿಗೆ ವಿಶೇಷ ಲೋಕ್ ಅದಾಲತ್ ಆಯೋಜನೆ

satyadarshana

ಡಿಸಿ ಕಾರು ಪೆಟ್ರೋಲ್‌ಗೆ ಹಣ ಇಲ್ಲ:ಕುರಿ ಸತ್ತರೆ ಪರಿಹಾರ ಇಲ್ಲ..ಯತ್ನಾಳ್‌

satyadarshana

ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಮರ್ಪಕ ಪ್ರಮಾಣದಲ್ಲಿ ಲಭ್ಯ

satyadarshana

Leave a Comment