Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಕುಡಿಯುವ ನೀರಿನ ದಾಹ ಇಂಗಿಸುವ ಕೃಷ್ಣಾ ನದಿಯ ಒಡಲು ಖಾಲಿ

ಬಾಗಲಕೋಟೆ :ಮೇ ತಿಂಗಳು ಪೂರ್ಣವಾದರೂ ಮುಂಗಾರಿನ ಸುಳಿವಿಲ್ಲ. ಕುಡಿಯುವ ನೀರಿನ ದಾಹ ಇಂಗಿಸುವ ಕೃಷ್ಣಾ ನದಿಯ ಒಡಲು ಖಾಲಿಯಾಗಿದೆ. ಕುಡಿಯುವ ನೀರಿಗಾರಿ ಜನರು ಪರದಾಡುವಂತಾಗಿದೆ

ಕಳೆದ ಬಾರಿ ಬೇಗನೆ ಮುಂಗಾರು ಬಂದಿತ್ತು. ಜೊತೆಗೆ ಹಿಪ್ಪರಗಿ ಬ್ಯಾರೇಜಿನಲ್ಲಿಯೂ ನೀರು ಸಂಗ್ರಹಿಸಲಾಗಿತ್ತು.

ಆದರೆ, ಈ ಬಾರಿ ತೀವ್ರ ಬಿಸಿಲಿನ ಪರಿಣಾಮ ನೀರು ಖಾಲಿಯಾಗಿದೆ. ಮುಂಗಾರು ವಿಳಂಬವಾಗಿರುವುದರಿಂದ ನೀರಿನ ಸಮಸ್ಯೆ ಉಲ್ಬಣಿಸಿದೆ.

ಕೃಷ್ಣಾ ನದಿಗೆ ಮಹಾರಾಷ್ಟ್ರ ರಾಜ್ಯದಿಂದ ಎರಡು ಟಿಎಂಸಿ ಅಡಿ ನೀರು ಬಿಡಿಸುವುದಾಗಿ ಹೇಳುತ್ತಿದ್ದ ಜನಪ್ರತಿನಿಧಿಗಳು ಮುಖ್ಯಮಂತ್ರಿ ಬದಲಾವಣೆ, ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ನೀರು ಬಿಡಲು ಬರೆದಿದ್ದ ರಾಜ್ಯ ಸರ್ಕಾರದ ಪತ್ರಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ.

 

ಹಿಪ್ಪರಗಿ ಬ್ಯಾರೇಜಿನ ಗೇಟ್‌ ಮುರಿದು 2 ಟಿಎಂಸಿ ಅಡಿಯಷ್ಟು ನೀರು ಪೋಲಾಗಿ ಹರಿದು ಹೋಗಿದೆ. ಈಗ ಬ್ಯಾರೇಜಿನಲ್ಲಿ 0.3 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ. ಬೆಳೆಗಳಿಗೆ ಹೋಗಲಿ, ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.

ನದಿ ಪಾತ್ರದ ರೈತರು ಬೆಳೆ ಉಳಿಸಿಕೊಳ್ಳಲು ನದಿಯಲ್ಲಿ ಜೆಸಿಬಿ ಯಂತ್ರದ ಸಹಾಯದಿಂದ ಚಿಕ್ಕ, ಚಿಕ್ಕ ಗುಂಡಿ ತೆಗೆದು ನೀರು ಪಡೆಯುವುದಕ್ಕೆ ಮುಂದಾಗಿದ್ದಾರೆ. ಆ ನೀರೂ ಬೆಳೆಗಳಿಗೆ ಸಾಲುತ್ತಿಲ್ಲ. ಪ್ರಖರ ಬಿಸಿಲಿಗೆ ಕಬ್ಬು ಒಣಗಲಾರಂಭಿಸಿದೆ.

ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಜಲಾಶಯದಿಂದ ಚಿಕ್ಕಪಡಸಲಗಿ ಶ್ರಮ ಬಿಂದು ಸಾಗರವರೆಗೆ ಹಿಂಭಾಗದ ಎಡ ಮತ್ತು ಬಲಭಾಗದ ಶಿರಗುಪ್ಪಿ, ಮುತ್ತೂರ, ಮೈಗೂರ, ಶೂರ್ಪಾಲಿ, ಜಂಬಗಿ, ತುಬಚಿ, ಕಂಕಣವಾಡಿ, ಕಡಕೋಳ, ಟಕ್ಕಳಕಿ, ಟಕ್ಕೊಡ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ತೊಂದರೆ ಎದುರಾಗಿದೆ.

ಪ್ರತಿವರ್ಷ ಹಿಪ್ಪರಗಿ ಬ್ಯಾರೇಜಿನಲ್ಲಿ ನೀರಿನ ಸಂಗ್ರಹ ಇರುತ್ತಿತ್ತು. ಆದರೆ ಈ ಬಾರಿ ಬ್ಯಾರೇಜಿನ ಗೇಟು ಕಿತ್ತಿದ್ದರಿಂದ ಖಾಲಿಯಾಗಿದೆ. ಕೂಡಲೇ ಜನಪ್ರತಿನಿಧಿಗಳು ಮಹಾರಾಷ್ಟ್ರ ರಾಜ್ಯದಿಂದ ನೀರು ಬಿಡಿಸಬೇಕು’ ಎಂಬುದು ರೈತರ ಆಗ್ರಹವಾಗಿದೆ.

‘ರೈತರು ನೀರು ಬಿಡಿಸಬೇಕು ಎಂದು ಒತ್ತಾಯ ಮಾಡಿದಾಗ ಹಿಪ್ಪರಗಿ ಬ್ಯಾರೇಜಿನಿಂದ ತಿಂಗಳ ಹಿಂದೆ 0.10 ಟಿಎಂಸಿ ಅಡಿ ನೀರು ಬಿಡಲಾಗಿತ್ತು. ಆದರೆ, ಅದು ಶಿರಗುಪ್ಪಿ ಗ್ರಾಮವನ್ನೂ ದಾಟಲಿಲ್ಲ. ಪಕ್ಕದಲ್ಲಿಯೇ ನದಿ ಇದ್ದರೂ ನೀರಿಗಾಗಿ ಪರದಾಡುವಂತಾಗಿದೆ’ ಎನ್ನುತ್ತಾರೆ ರೈತ ಮುಖಂಡ ಕಲ್ಲಪ್ಪ ಬಿರಾದಾರ.

ಮಹಾರಾಷ್ಟ್ರ ರಾಜ್ಯದಿಂದ ಕೃಷ್ಣಾ ನದಿಗೆ ನೀರು ಹರಿಯದಿರುವುದರಿಂದ ಬಾಗಲಕೋಟೆ ಮಾತ್ರವಲ್ಲ ಬೆಳಗಾವಿ, ವಿಜಯಪುರ ಜಿಲ್ಲೆಯ ಹಳ್ಳಿಗಳಿಗೂ ಕುಡಿಯುವ ನೀರಿನ ತೊಂದರೆ ಎದುರಾಗಿದೆ.

‘ಮಹಾರಾಷ್ಟ್ರದ ಜಲಾಶಯಗಳಿಂದ ಕೃಷ್ಣೆಗೆ ನೀರು ಹರಿಸುವಂತೆ ಒತ್ತಾಯಿಸಲು ಸರ್ವಪಕ್ಷಗಳ ನಿಯೋಗ ಮಹಾರಾಷ್ಟ್ರ ಮುಖ್ಯಮಂತ್ರಿ ಬಳಿ ತೆಗೆದುಕೊಂಡು ಹೋಗುತ್ತೇವೆ’ ಎಂದು ಸಚಿವರು ಹೇಳುತ್ತಲೇ ಇದ್ದರು. ಆದರೆ, ಈ ವರೆಗೆ ನಿಯೋಗ ಹೋಗಿಲ್ಲ.

ಉತ್ತರ ಕರ್ನಾಟಕದ ಜಿಲ್ಲೆಗಳ ಜನರ ಮತ್ತು ಜಾನುವಾರುಗಳ ಕುಡಿಯುವ ನೀರಿನ ಅಗತ್ಯತೆ ಪೂರೈಸುವ ದೃಷ್ಟಿಯಿಂದ ಮಹಾರಾಷ್ಟ್ರದ ಕೊಯ್ನಾ ಅಥವಾ ವಾರಣಾ ಜಲಾಶಯಗಳಿಂದ ಕೃಷ್ಣಾ ನದಿಗೆ ಮತ್ತು ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ ತಲಾ 2 ಟಿಎಂಸಿ ಅಡಿ ನೀರು ಬಿಡುಗಡೆಗೊಳಿಸಬೇಕು’ ಎಂದು ಒತ್ತಾಯಿಸಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಏಪ್ರಿಲ್‌ ತಿಂಗಳಿನಲ್ಲಿಯೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಸ್ಪಂದನೆ ಸಿಕ್ಕಿಲ್ಲ.

17 ಕಡೆ ಖಾಸಗಿ ಕೊಳವೆಬಾವಿಗಳಿಂದ ನೀರು

ಸರ್ಕಾರದ ವತಿಯಿಂದ ನೀರು ಪೂರೈಸಲಾಗುತ್ತಿದ್ದ ಜಲಮೂಲ ಬತ್ತಿ ಹೋಗಿರುವುದರಿಂದ ಜಿಲ್ಲೆಯ 17 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ.

ಇಳಕಲ್‌ ತಾಲ್ಲೂಕಿನ ಹಿರೇಕೊಡಗಲಿ, ಚಿಕ್ಕಕೊಡಗಲಿ, ಬಾದಾಮಿ ತಾಲ್ಲೂಕಿನ ಕೈನಕಟ್ಟಿ, ಗುಳೇದಗುಡ್ಡ ತಾಲ್ಲೂಕಿನ ಚಿಮ್ಮಲಗಿ, ಹಂಗರಗಿ, ಹಿರೇಬೂದಿಹಾಳ, ಜಮಖಂಡಿ ತಾಲ್ಲೂಕಿನ ಸಾವಳಗಿ, ಶಿರಗುಪ್ಪ, ತೊದಲಬಾಗಿ, ಶೂರ್ಪಾಲಿ ಮುಂತಾದೆಡೆ ಖಾಸಗಿ ಕೊಳವೆಬಾವಿಗಳಿಂದ ನೀರಿನ ದಾಹ ಇಂಗಿಸಲಾಗುತ್ತಿದೆ.

ನೀರಿನ ಕೊರತೆಯಿಂದಾಗಿ ಅರಕೇರಿ, ತೋಳಮಟ್ಟಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸ್ಥಗಿತಗೊಂಡಿದ್ದವು. ಘಟಪ್ರಭಾ ನದಿಗೆ ನೀರು ಬಿಟ್ಟಿರುವುದರಿಂದ ಮತ್ತೇ ಚಾಲನೆಗೊಂಡಿವೆ.

ಚಿಕ್ಕಪಡಸಲಗಿ ಬ್ಯಾರೇಜ್‌ 25 ಹಳ್ಳಿಗಳ ಸವಳು ನೀರು ಬರುತ್ತದೆ. ಪರಿಣಾಮ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಯಿಸಿದರೂ ನೀರು ಬಳಕೆಗೆ ಯೋಗ್ಯವಾಗಿಲ್ಲ. ಹಾಗಾಗಿ, ಈ ಗ್ರಾಮಗಳು ನದಿ ನೀರನ್ನೇ ಅವಲಂಬಿಸಿವೆ. ನದಿಯಲ್ಲಿ ನೀರಿಲ್ಲದಿದ್ದರೆ ಪರದಾಟ ಆರಂಭವಾಗುತ್ತದೆ.

ಹಿಪ್ಪರಗಿ ಬ್ಯಾರೇಜಿಗೆ ಬೇಕಿದೆ ಕಾಯಕಲ್ಪ

ಇತ್ತೀಚೆಗೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜಿನ ಗೇಟ್‌ ಕಿತ್ತು ಹೋಗಿ, 2.4 ಟಿಎಂಸಿ ಅಡಿಯಷ್ಟು ನೀರು ಪೊಲಾಗಿ ಹೋಯಿತು. ಬ್ಯಾರೇಜ್‌ಗೆ ಕಾಯಕಲ್ಪ ನೀಡುವ ಕೆಲಸ ಆಗಬೇಕಿದೆ.

1972ರಲ್ಲಿ ಆರಂಭವಾದ ಹಿಪ್ಪರಗಿ ಬ್ಯಾರೇಜ್‌ 2002ರಲ್ಲಿ ಪೂರ್ಣಗೊಂಡಿದೆ. 2004ರಲ್ಲಿ ಮೊದಲ ಬಾರಿಗೆ ನೀರು ಸಂಗ್ರಹಿಸಲಾಯಿತು. 6 ಟಿಎಂಸಿ ಅಡಿಯಷ್ಟು ನೀರು ಸಂಗ್ರಹ ಸಾಮರ್ಥ್ಯವನ್ನು ಬ್ಯಾರೇಜ್‌ ಹೊಂದಿದೆ. ಇದರಲ್ಲಿ 5.20 ಟಿಎಂಸಿ ಅಡಿ ನೀರು ಬಳಕೆಗೆ ಉಪಯೋಗವಾಗುತ್ತದೆ.

ಹಿಪ್ಪರಗಿ ಬ್ಯಾರೇಜ್‌ನಿಂದಾಗಿ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆತಿದೆ. ರೈತರೂ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ.‌

ಬ್ಯಾರೇಜ್ ನಿರ್ಮಾಣವಾಗಿ ಎರಡೂವರೆ ದಶಕ ಕಳೆದು ಹೋಗಿರುವುದರಿಂದ ಗೇಟಿನ ಸಾಮರ್ಥ್ಯ ಪರೀಕ್ಷೆಯಾಗಬೇಕಿದೆ. ತಜ್ಞರ ವರದಿ ಪಡೆದುಕೊಂಡು ಮುಂದಿನ ದಿನಗಳಲ್ಲಿ ಗೇಟ್‌ಗಳಿಗೆ ಹಾನಿಯಾಗದಂತೆ ಕ್ರಮಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ.

ಬ್ಯಾರೇಜ್ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರಮುಖ ಸಂಪರ್ಕದ ಕೊಂಡಿಯಾಗಿದೆ. ಇದರಿಂದಾಗಿ ದಿನನಿತ್ಯ ಬ್ಯಾರೇಜ್ ಮೇಲೆ ನೂರಾರು ವಾಹನಗಳು ಸಂಚರಿಸುತ್ತಿವೆ. ಸಕ್ಕರೆ ಕಾರ್ಖಾನೆಗಳು ಆರಂಭವಾದರೆ ಕಬ್ಬು ತುಂಬಿದ ಟ್ರಕ್ ಮತ್ತು ಟ್ರ್ಯಾಕ್ಟರ್ ಓಡಾಟ ಹೆಚ್ಚಾಗುತ್ತದೆ.

ವಾಹನಗಳ ಓಡಾಟ ತಪ್ಪಿಸಲು ಬ್ಯಾರೇಜ್ ಕೆಳ ಭಾಗದಲ್ಲಿ ದಶಕಗಳ ಹಿಂದೆ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಈ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸದರೆ ಬ್ಯಾರೇಜ್ ಮೇಲಿನ ವಾಹನಗಳ ಸಂಚಾರ ತಡೆಯಬಹುದು.

ಆಕಾಶ ವಂದೆ, ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರಿನ ಯೋಜನೆಜಿಲ್ಲೆಯಲ್ಲಿ 350 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. 67 ಹಳ್ಳಿಗಳಲ್ಲಿ ನೀರಿನ ತೊಂದರೆಯಾಗಬಹುದು ಎಂದು ಅಂದಾಜಿಸಲಾಗಿದೆ

 

 

 

Related posts

ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಲೋಕ್ ಅದಾಲತ್ ಉತ್ತಮ ಅವಕಾಶ: ನ್ಯಾ. ಮಹಾಂತೇಶ ಎಸ್. ದರಗದ

satyadarshana

ಎನ್ ಸಿಬಿ ದಾಳಿ, ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ 8 ಮಂದಿ ವಶಕ್ಕೆ

satyadarshana

ಗದಗ ಜಿಲ್ಲಾಡಳಿತ ಕೋವಿಡ್ ಮೂರನೇ ಅಲೆ ಎದುರಿಸಲು ಸಜ್ಜುಗೊಂಡಿದೆಯೇ?

satyadarshana

Leave a Comment