ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಬೈಕ್ ರ್ಯಾಲಿ ಹಾಗೂ ಪ್ರಜ್ಞಾವಿಧಿ ಬೋಧನೆ
ತಾಲೂಕು ಸ್ವೀಪ್ ಸಮಿತಿ ವತಿಯಿಂದ ಜಾಗೃತಿ ಅಭಿಯಾನ
ಗಜೇಂದ್ರಗಡ: ಪಟ್ಟಣದಲ್ಲಿ ತಾಲೂಕು ಆಡಳಿತ, ತಾಲೂಕು ಸ್ಚೀಪ್ ಸಮಿತಿ ಗಜೇಂದ್ರಗಡ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ -2026ರ ಅಂಗವಾಗಿ ಇದೇ ಸೆ.19, 20, ರಂದು ವಿಶೇಷ ಅಭಿಯಾನ ನಡೆಸಲಿರುವ ಕುರಿತು ಬೈಕ್ ರ್ಯಾಲಿ ಮೂಲಕ ಜಾಗೃತಿ ಮೂಡಿಸಲಾಯಿತು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂದೆ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ ಕಂದಕೂರ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ಬೈಕ್ ರ್ಯಾಲಿ ತಹಶೀಲ್ದಾರ್ ಕಚೇರಿಯಿಂದ ಪ್ರಾರಂಭವಾಗಿ ಕೆ.ಕೆ. ಸರ್ಕಲ್, ದುರ್ಗಾ ಸರ್ಕಲ್, ಸರಾಫ್ ಬಜಾರ ರಸ್ತೆ, ಬಸವೇಶ್ವರ ಸರ್ಕಲ್, ಮೈಸೂರು ಮಠ, ಪುರಸಭೆ ಕಾರ್ಯಾಲಯದ ಮೂಲಕ ದುರ್ಗಾದೇವಿ ದೇವಸ್ಥಾನಕ್ಕೆ ಬಂದು ತಲುಪಿತು. ಇದರ ಜೊತೆಗೆ ಶ್ರೀ ಬಿಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಶ್ರೀ ಎಸ್ಎಂ ಭೂಮರಡ್ಡಿ ಕಾಲೇಜ್ ನಿಂದ ಜಾಗೃತಿ ಜಾಥಾ ಕಾಲ್ನಡಿಗೆ ಮೂಲಕ ದುರ್ಗಾದೇವಿ ದೇವಸ್ಥಾನಕ್ಕೆ ಬಂದು ತಲುಪಿದರು. ಅಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಲಾಯಿತು. ಈ ವೇಳೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ನಂತರ ದುರ್ಗಾದೇವಿ ದೇವಸ್ಥಾನದಿಂದ ಮುಖ್ಯ ರಸ್ತೆ ಮೂಲಕ ತಹಶೀಲ್ದಾರ್ ಕಚೇರಿಗೆ ಬಂದು ಮುಕ್ತಾಯಗೊಳಿಸಲಾತು.
ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರು ಮಾತನಾಡಿ, ಸೆಪ್ಟಂಬರ್ 19 ಮತ್ತು 20 ರಂದು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದೆ. ಅರ್ಹ ಮತದಾರರನ್ನು ಸೇರಿಸಲು, ಮೃತ ಅಥವಾ ಸ್ಥಳಾಂತರಗೊಂಡ ಮತದಾರರನ್ನು ಅಳಿಸಲು ಮತ್ತು ಮತದಾರರ ಪಟ್ಟಿಯಲ್ಲಿನ ನಮೂದುಗಳನ್ನು ಸರಿಪಡಿಸಲು ಎಸ್ಐಆರ್ ಒಂದು ಪ್ರಮುಖ ಪ್ರಕ್ರಿಯೆಯಾಗಿದೆ. ಎಸ್ಐಆರ್ ಸ್ವಚ್ಛ ಮತದಾರರ ಪಟ್ಟಿಯ ಅಡಿಪಾಯವಾಗಿದೆ. ಪ್ರತಿಯೊಬ್ಬ ಅರ್ಹ ಯುವಕರು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.
ಮತದಾರರ ಪಟ್ಟಿಗೆ ಸಂಬಂದಿಸಿದಂತೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು ಹಾಗೂ ಅರ್ಹ ನಾಗರಿಕರರು ತಮ್ಮ ಹಕ್ಕು/ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರೇರೇಪಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ಮತದಾರರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯದಂತೆ ಕ್ರಮವಹಿಸಲಾಗಿದೆ. ಯುವಕರು ವಿದ್ಯಾರ್ಥಿಗಳು ನಿಮ್ಮ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಸೇರ್ಪಡೆ ಮಾಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರಾದ ಬಸವರಾಜ ಬಡಿಗೇರ್, ತಾ.ಪಂ. ಲೆಕ್ಕಾಧಿಕಾರಿ ಡಾ.ಸಿ.ಬಿ ಮಾಳಗಿ, ತಾಲೂಕಿನ ಎಲ್ಲಾ ಪಂಚಾಯತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿ.ದ. ಸಹಾಯಕರು, ಕರವಸೂಲಿಗಾರರು, ಗಣಕಯಂತ್ರ ನಿರ್ವಾಹಕರು, ತಾ.ಪಂ., ಗ್ರಾ.ಪಂ. ಸಿಬ್ಬಂದಿಗಳು ಹಾಗೂ ವಿಬಿ ಜಿ ರಾಮ್ ಜಿ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
