ರಾಮನಗರ: ತೇಗದ ಮರಗಳನ್ನು ಕಡಿದು ಸಾಗಿಸಲು ಅನುಮತಿ ನೀಡಲು ₹30 ಸಾವಿರ ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ರಾಮನಗರ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ರಾಜಶೇಖರಯ್ಯ ಎಂಬಾತನನ್ನು ಜಿಲ್ಲಾ ಲೋಕಾಯುಕ್ತ ಪೊಲೀಸರು ಬುಧವಾರ ರಾತ್ರಿ ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ನಗರದ ಕೊತ್ತಿಪುರದ ಸಂತೋಷ್ ಎಂಬುವರು ತಮ್ಮ ಜಮೀನಿನಲ್ಲಿದ್ದ ತೇಗದ ಮರಗಳನ್ನು ಕಡಿಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅನುಮತಿ ನೀಡಲು ಆರಂಭದಲ್ಲಿ ₹40 ಸಾವಿರ ಬೇಡಿಕೆಯಿಟ್ಟಿದ್ದ ರಾಜಶೇಖರಯ್ಯ, ಅಂತಿಮವಾಗಿ ₹30 ಸಾವಿರಕ್ಕೆ ಡೀಲ್ ಕುದಿಸಿದ್ದ. ಕಚೇರಿಗೆ ಅಲೆದು ಬೇಸತ್ತ ಸಂತೋಷ್ ಅವರು ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಹೋಟೆಲ್‌ನಲ್ಲಿ ಲಂಚ ಪಡೆಯುವಾಗ ಟ್ರ್ಯಾಪ್:
ದೂರಿನನ್ವಯ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಪೊಲೀಸರು, ಎಸ್‌ಪಿ ಕಚೇರಿ ವೃತ್ತದ ಹೋಟೆಲ್‌ನಲ್ಲಿ ದೂರುದಾರರಿಂದ ₹30 ಸಾವಿರ ನಗದು ಪಡೆಯುತ್ತಿದ್ದಾಗ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಅಧೀಕ್ಷಕಿ ಸ್ನೇಹ ಪಿ.ವಿ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿಗಳಾದ ಶಿವಪ್ರಸಾದ್, ರಾಜೇಶ್, ಇನ್‌ಸ್ಪೆಕ್ಟರ್‌ಗಳಾದ ಸಂದೀಪ್ ಕುಮಾರ್ ಬಿ.ಎನ್, ವಿಜಯಕುಮಾರ್ ಹಾಗೂ ಸಿಬ್ಬಂದಿ ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ಹಿಂದೆಯೂ ಕೇಳಿಬಂದಿತ್ತು ಸಾಲು ಸಾಲು ಲಂಚದ ಆರೋಪ!
ಬಂಧಿತ ಡಿಆರ್‌ಎಫ್‌ಒ ರಾಜಶೇಖರಯ್ಯ ವಿರುದ್ಧ ಈ ಹಿಂದೆಯೂ ತೀವ್ರ ಅಕ್ರಮ ಮತ್ತು ಲಂಚಾವತಾರದ ಆರೋಪಗಳು ಕೇಳಿಬಂದಿದ್ದವು:
ಗಣಿಗಾರಿಕೆಗೆ ಅನುಕೂಲ: ಕಳೆದ ವರ್ಷ ತಾಲೂಕಿನ ಗ್ರಾಮವೊಂದರಲ್ಲಿ ಕಲ್ಲು ಗಣಿಗಾರಿಕೆಗಾಗಿ 900ಕ್ಕೂ ಹೆಚ್ಚು ಮರಗಳನ್ನು ಕಡಿದಾಗ, ಲಂಚ ಪಡೆದು ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದ್ದ ಆರೋಪವಿತ್ತು.
ದೌರ್ಜನ್ಯ ಮತ್ತು ಹಲ್ಲೆ: ಬಿಡದಿ ಚೆಕ್‌ಪೋಸ್ಟ್ ಬಳಿ ಸೌದೆ ವಾಹನ ಚಾಲಕನಿಗೆ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು.
ಇಲಾಖೆ ಸಿಬ್ಬಂದಿಗೂ ಕಿರುಕುಳ: ಲಂಚದ ವಿಚಾರ ತಿಳಿದಿದ್ದ ಇಲಾಖೆಯ ಗಸ್ತು ಸಿಬ್ಬಂದಿಯೊಬ್ಬರ ಮೇಲೆ ದೌರ್ಜನ್ಯ ಎಸಗಿದ ಕಾರಣಕ್ಕೆ ದಲಿತ ಸಂಘಟನೆಗಳು ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದವು.
