Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ದೇವರ ಮನೆಯಲ್ಲೇ ದರೋಡೆ: ಜನಾರ್ದನ ರೆಡ್ಡಿ ಕ್ಷೇತ್ರದಲ್ಲಿ ಶಾಸಕರ ನಿಧಿಗೆ ಕನ್ನ

ದೇವರ ಮನೆಯಲ್ಲೇ ದರೋಡೆ: ಜನಾರ್ದನ ರೆಡ್ಡಿ ಕ್ಷೇತ್ರದಲ್ಲಿ ಶಾಸಕರ ನಿಧಿಗೆ ಕನ್ನ

ಭಕ್ತರು ಕಟ್ಟಿದ ಗುಡಿಗೆ ನಕಲಿ ಜಿಪಿಎಸ್ ಫೋಟೋ ಕೆಲಸ ಮಾಡದೆ ಲಕ್ಷಾಂತರ ರೂ. ಲೂಟಿ ಮಾಡಿದ ಭ್ರಷ್ಟ ತಿಮಿಂಗಿಲಗಳು

​ಗಂಗಾವತಿ: ಸ 04

ಜನಪ್ರತಿನಿಧಿಗಳ ಭ್ರಷ್ಟಾಚಾರಕ್ಕೆ ದೇವರ ಮನೆಯೂ ಹೊರತಾಗಿಲ್ಲ ಎಂಬುದಕ್ಕೆ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಈ ಬೃಹತ್ ಕರ್ಮಕಾಂಡವೇ ಸಾಕ್ಷಿ. ರಾಜ್ಯಮಟ್ಟದಲ್ಲಿ ಭ್ರಷ್ಟಾಚಾರದ ವಿರುದ್ಧ ನೀತಿಪಾಠ ಹೇಳುತ್ತಾ ಪಾದಯಾತ್ರೆ ನಡೆಸುವ ಸ್ಥಳೀಯ ಶಾಸಕ ಜಿ. ಜನಾರ್ದನ ರೆಡ್ಡಿಯವರ ತವರು ನೆಲದಲ್ಲೇ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಡಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆಂದು ಮಂಜೂರಾಗಿದ್ದ ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ನಯಾವಂಚಕ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಳುಂ ಮಾಡಿರುವ ಕರಾಳ ಹಗರಣ ದಾಖಲೆ ಸಮೇತ ಬಯಲಾಗಿದೆ.

​ದಲಿತ ಭೀಮ ಘರ್ಜನೆ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷ ಅಜಯ ಕುಮಾರ್ ಚಲವಾದಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ (RTI) ಸಂಗ್ರಹಿಸಿರುವ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ (PRED) ಲಂಚಕೋರ ಜಾಲದ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.

​ಕಾಗದದ ಮೇಲೆ ಕಾಮಗಾರಿ: ಸ್ಥಳದಲ್ಲಿ ಒಂದು ಇಟ್ಟಿಗೆಯೂ ಅಲುಗಾಡಿಲ್ಲ

2024-25 ಹಾಗೂ 2025-26ನೇ ಸಾಲಿನಲ್ಲಿ ಗಂಗಾವತಿ ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯ ನಾಲ್ಕು ಪ್ರಮುಖ ದೇವಸ್ಥಾನಗಳ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ಅನುದಾನ ಮಂಜೂರಾಗಿತ್ತು. ಆದರೆ ವಾಸ್ತವದಲ್ಲಿ ಸ್ಥಳದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಊರಿನ ಭಕ್ತರು ಮತ್ತು ಧರ್ಮದರ್ಶಿಗಳು ತಮ್ಮ ಸ್ವಂತ ಜೇಬಿನ ಹಣ ಹಾಕಿ ಈ ಹಿಂದೆಯೇ ನಿರ್ಮಿಸಿದ್ದ ದೇವಸ್ಥಾನದ ಗೋಡೆಗಳ ಮುಂದೆ ಅಧಿಕಾರಿಗಳು, ಗುತ್ತಿಗೆದಾರರು ನಿಂತು ನಕಲಿ ಜಿಪಿಎಸ್ ಫೋಟೋ ಹೊಡೆದು ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಿದ್ದಾರೆ. ನಕಲಿ ಮಾಪನ ಪುಸ್ತಕ ನಕಲಿ ಸಿಸಿ ಬಿಲ್‌ಗಳು, ಊಹಾತ್ಮಕ ಹೆಸರು-ಮೊಬೈಲ್ ನಂಬರ್‌ಗಳನ್ನು ಬಳಸಿ ಸಹಿಗಳನ್ನು ಫೋರ್ಜರಿ ಮಾಡಿ ಥರ್ಡ್ ಪಾರ್ಟಿ ಇನ್ಸ್‌ಪೆಕ್ಷನ್ ಏಜೆನ್ಸಿಗಳ ಸಹಯೋಗದೊಂದಿಗೆ ನೇರವಾಗಿ ಹಣ ಡ್ರಾ ಮಾಡಿಕೊಳ್ಳಲಾಗಿದೆ.

​ ₹4 ಲಕ್ಷ ಅನುದಾನದ ಪೈಕಿ ಸ್ಥಳದಲ್ಲಿ ಕನಿಷ್ಠ ಕೆಲಸವನ್ನೂ ಮಾಡದೆ ₹2,86,478 ಹಣವನ್ನು 14/05/2025 ರಂದೇ ಡ್ರಾ ಮಾಡಿಕೊಳ್ಳಲಾಗಿದೆ.

​ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ: ₹5 ಲಕ್ಷ ಮಂಜೂರಾದ ಕಾಮಗಾರಿಯಲ್ಲಿ ₹3,52,878 ಹಣವನ್ನು 22/05/2025 ರಂದು ನುಂಗಿ ನೀರು ಕುಡಿಯಲಾಗಿದೆ.

​ಶ್ರೀ ರುಕ್ಮಿಣಿ ಪಾಂಡುರಂಗ ದೇವಸ್ಥಾನ: ₹3.87 ಲಕ್ಷದ ಯೋಜನೆಯಲ್ಲಿ ಅಕ್ರಮವಾಗಿ ₹2,73,341 ಮೊತ್ತವನ್ನು 14/10/2025 ರಂದು ಗುತ್ತಿಗೆದಾರರ ಖಾತೆಗೆ ಜಮೆ ಮಾಡಲಾಗಿದೆ.

​ಜುಲೈ ನಗರದ ಶ್ರೀ ಉದ್ಭವ ಮಹಾಲಕ್ಷ್ಮಿ ದೇವಸ್ಥಾನ: ₹5 ಲಕ್ಷ ಮೊತ್ತದಲ್ಲಿ ಬರೋಬ್ಬರಿ ₹3,58,788 ಹಣವನ್ನು 29/01/2026 ರಂದು ನಕಲಿ ಬಿಲ್ ಸೃಷ್ಟಿಸಿ ಲಪಟಾಯಿಸಲಾಗಿದೆ.

​ರಾತ್ರೋರಾತ್ರಿ ರಾಜಿ ಸಂಧಾನಕ್ಕೆ ಇಳಿದ ಲೂಟಿಕೋರರು

ಅಕ್ರಮ ಬಯಲಾಗುತ್ತಿದ್ದಂತೆ ಕಳ್ಳಾಟವಾಡಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಗ್ಯಾಂಗ್ ಬೆವರಿಳಿಸಿಕೊಂಡು ದೇವಸ್ಥಾನದ ಸಮಿತಿಗಳ ಕಾಲಿಗೆ ಬೀಳುತ್ತಿದೆ. ಪೊಲೀಸ್ ಅಥವಾ ಲೋಕಾಯುಕ್ತಕ್ಕೆ ದೂರು ನೀಡಬೇಡಿ, ಮಂಜೂರಾದ ಹಣವನ್ನು ನಾವೇ ನಗದು ರೂಪದಲ್ಲಿ ತಂದು ಕೊಡುತ್ತೇವೆ ಎಂದು ಆಮಿಷವೊಡ್ಡುತ್ತಿರುವ ಆಡಿಯೋ ಸಂಭಾಷಣೆಗಳು ಲಭ್ಯವಾಗಿದ್ದು, ಭ್ರಷ್ಟರ ಮುಖವಾಡ ಕಳಚಿಬಿದ್ದಿದೆ.

​ಶಾಸಕ ಜನಾರ್ದನ ರೆಡ್ಡಿಯವರೇ, ನಿಮ್ಮ ಮೌನದ ಮರ್ಮವೇನು?

ವಾಲ್ಮೀಕಿ ನಿಗಮ ಸೇರಿದಂತೆ ಸರ್ಕಾರದ ಹಗರಣಗಳ ವಿರುದ್ಧ ಸಿಡಿದೆದ್ದು ಪಾದಯಾತ್ರೆ ನಡೆಸಿದ ಶಾಸಕ ಜನಾರ್ದನ ರೆಡ್ಡಿ ಅವರ ಮೂಗಿನ ನೇರಕ್ಕೆ ಅವರದೇ ಕ್ಷೇತ್ರದ ಶಾಸಕರ ನಿಧಿಯನ್ನು ನುಂಗಿ ನೀರು ಕುಡಿದ ಚೇಲಾಗಳ ವಿರುದ್ಧ ಅವರು ಏಕೆ ಚಕಾರವೆತ್ತುತ್ತಿಲ್ಲ? ಈ ಭ್ರಷ್ಟ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವ ನೈತಿಕ ಶಕ್ತಿ ಶಾಸಕರಿಗಿದೆಯೇ ಎಂದು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

​ದೇವರ ಹಣವನ್ನು ಹೊಟ್ಟೆಗೆ ಹಾಕಿಕೊಂಡ ಈ ತಿಮಿಂಗಿಲಗಳು ಅದಕ್ಕೆ ಸಾಥ್ ನೀಡಿದ PRED ಇಂಜಿನಿಯರ್‌ಗಳನ್ನು ಕೂಡಲೇ ಅಮಾನತು ಮಾಡಿ ಜೈಲಿಗೆ ಅಟ್ಟಬೇಕು. ಕಾಮಗಾರಿ ನಡೆಸಿದ ನಕಲಿ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಹಣ ವಸೂಲಿ ಮಾಡಬೇಕು.

ಇಲ್ಲವಾದರೆ ಗಂಗಾವತಿಯ ಬೀದಿಬೀದಿಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.ಎಂದು

— ಅಜಯ ಕುಮಾರ್ ಚಲವಾದಿ, ಜಿಲ್ಲಾಧ್ಯಕ್ಷರು ದಲಿತ ಭೀಮ ಘರ್ಜನೆ ಸಂಘಟನೆ ಕೊಪ್ಪಳ.

Related posts

ಆಧುನಿಕ ಭಾರತದ ಶಿಲ್ಪಿ ಪಂಡಿತ್ ನೆಹರು :ಮತ್ತಿಕಟ್ಟಿ 

satyadarshana

ತನಿಖಾಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು

satyadarshana

ಪವನ ವಿದ್ಯುತ್‌ ಖಾಸಗಿ ಕಂಪನಿ ಹಾವಳಿ; ಫಲವತ್ತಾದ ಕೃಷಿ ಭೂಮಿಗೆ ಕುತ್ತು

satyadarshana

Leave a Comment