ಗಜೇಂದ್ರಗಡ ನಗರ ಸಮೀಪದ ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ಗುರುವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕವಿತಾ ಜಾಲಿಹಾಳ ಉದ್ಘಾಟಿಸಿ ಮಾತನಾಡಿ, ಶ್ರೀಕೃಷ್ಣನ ಜೀವನ ಹಾಗೂ ಭಗವದ್ಗೀತೆಯ ಸಂದೇಶಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿವೆ. ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಇಂತಹ ಆಚರಣೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಬ್ರೈಟ್ ಎಜ್ಯುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಎನ್.ಎಂ. ಮುದಗಲ್ ಮಾತನಾಡಿ, ಮಕ್ಕಳಿಗೆ ಪಠ್ಯದ ಜತೆಗೆ ನಮ್ಮ ಸಂಸ್ಕೃತಿ ಮತ್ತು ಹಬ್ಬಗಳ ಮಹತ್ವವನ್ನು ತಿಳಿಸುವುದು ಅಗತ್ಯ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿನ ಸೃಜನಶೀಲತೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜತೆಗೆ ಪರಂಪರೆಯ ಬಗ್ಗೆ ಗೌರವ ಮೂಡಿಸುತ್ತವೆ ಎಂದು ಹೇಳಿದರು.
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶಾಲೆಯ ಪುಟಾಣಿ ಮಕ್ಕಳು ಶ್ರೀಕೃಷ್ಣ, ರಾಧೆ, ಯಶೋಧೆ ಸೇರಿದಂತೆ ವಿವಿಧ ಪೌರಾಣಿಕ ಪಾತ್ರಗಳ ವೇಷಧರಿಸಿ ಗಮನ ಸೆಳೆದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕೃಷ್ಣನ ವೇಷದಲ್ಲಿದ್ದ ಪುಟಾಣಿಗಳ ಮುದ್ದಾದ ಅಭಿನಯ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ನೆರೆದಿದ್ದವರ ಗಮನ ಸೆಳೆದವು,ಮುದ್ದು ಮಕ್ಕಳು ಮಡಿಕೆ ಒಡೆದು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ನಸರೀನ ಮುಧೋಳ, ತವಶೀನ ಕರ್ನಾಚಿ, ಸಂಗಮೇಶ ರೇವಡಿ, ಕಿರಣ ನಿಡಗುಂದಿ, ರವಿಚಂದ್ರ ನಿಡಗುಂದಿ, ಆಕಾಶ ತಾಳಿಕೋಟಿ, ಶಾಂತವ್ವ ಮುದಟಗಿಮಠ, ಶಾಂತಾ ಸೋರೆಬಾನ, ಅಂಜುಮ ಹಂಪಿಹೊಳಿ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
