ಹುಬ್ಬಳ್ಳಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಮಹತ್ವದ ಸಭೆ ಹಾಗೂ ಸುದ್ದಿಗೋಷ್ಠಿ
ಅರ್ಹ ಪತ್ರಕರ್ತರಿಗೆ ಕಿರುಕುಳ ನೀಡಿದರೆ ಸಹಿಸಲ್ಲ ಸಂಘಟನೆಯ ನಾಯಕರ ಗಂಭೀರ ಎಚ್ಚರಿಕೆ
ಶ್ರಮಜೀವಿ ಪತ್ರಕರ್ತರ ಹಿತರಕ್ಷಣೆಗೆ ಸಂಘಟನೆ ಸದಾ ಬದ್ಧ: ರಾಜ್ಯಉಪಾಧ್ಯಕ್ಷ ಡಾ. ಎಸ್ ಎಸ್ ಪಾಟೀಲ್
ಹುಬ್ಬಳ್ಳಿ ರಾಜ್ಯದಲ್ಲಿ ನೈಜವಾಗಿ ದುಡಿಯುವ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣವೇ ಪತ್ರಕರ್ತರ ರಕ್ಷಣಾ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಈ ಬೇಡಿಕೆ ಈಡೇರಿಕೆಗೆ ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ರಾಜ್ಯಾದ್ಯಂತ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಗುಡುಗಿದ್ದಾರೆ.
ನಗರದ ಪರಿವೀಕ್ಷಣಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಸಂಘಟನೆಯ ರಾಜ್ಯ, ವಿವಿಧ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಮಹತ್ವದ ಸಭೆ ಮತ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪತ್ರಕರ್ತರು ಎದುರಿಸುತ್ತಿರುವ ಕ್ಷೇತ್ರ ಮಟ್ಟದ ಸವಾಲುಗಳು ಕಿರುಕುಳ ಮಾಧ್ಯಮ ಮಾನ್ಯತೆ ಹಾಗೂ ಕಾರ್ಮಿಕ ಕಾಯ್ದೆಗಳ ಅನುಷ್ಠಾನದಲ್ಲಿನ ಲೋಪದೋಷಗಳನ್ನು ಪ್ರಸ್ತಾಪಿಸಿದ ಅವರು ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ. ಸತ್ಯವನ್ನು ಸಮಾಜಕ್ಕೆ ಮುಟ್ಟಿಸುವ ಶ್ರಮಜೀವಿ ಪತ್ರಕರ್ತರ ಮೇಲೆ ದೌರ್ಜನ್ಯ ಎಸಗಿದರೆ ಸಂಘಟನೆ ಕೈಕಟ್ಟಿ ಕೂರುವುದಿಲ್ಲ. ಸಂಘಟನೆಯ ಹೆಸರಿನಲ್ಲಿ ನಡೆಯುವ ಯಾವುದೇ ಹಣಕಾಸು ಅಕ್ರಮಗಳು ಹಾಗೂ ಪತ್ರಕರ್ತರ ಶ್ರಮವನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿಯನ್ನು ಸಹಿಸುವುದಿಲ್ಲ. ಅರ್ಹ ಪತ್ರಕರ್ತರಿಗೆ ನ್ಯಾಯ ಸಿಗುವವರೆಗೂ ಕಾನೂನಾತ್ಮಕ ಹೋರಾಟ ನಿಲ್ಲದು ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರ ಮಟ್ಟದಲ್ಲಿ ಪತ್ರಕರ್ತರ ರಕ್ಷಣೆಗೆ ಒಗ್ಗಟ್ಟು ಅಗತ್ಯ
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಗದಗ ಜಿಲ್ಲಾಧ್ಯಕ್ಷರಾದ ಅಂದಪ್ಪ ಮಾದರ ಅವರು ಗ್ರಾಮೀಣ ಹಾಗೂ ಜಿಲ್ಲಾ ಮಟ್ಟದಲ್ಲಿ ಪತ್ರಕರ್ತರು ತಳಮಟ್ಟದ ಜನರ ಧ್ವನಿಯಾಗಿ ಅತ್ಯಂತ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ವರದಿಗಾರರಿಗೆ ಬೆದರಿಕೆ ಕಿರುಕುಳ ನೀಡುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಗದಗ ಜಿಲ್ಲೆ ಸೇರಿದಂತೆ ರಾಜ್ಯದ ಯಾವುದೇ ಮೂಲೆಯಲ್ಲಿ ಕಾರ್ಯನಿರ್ವಹಿಸುವ ಪ್ರಾಮಾಣಿಕ ಪತ್ರಕರ್ತನಿಗೆ ಅನ್ಯಾಯವಾದರೆ ಧ್ವನಿ ಸಂಘಟನೆ ಅವರ ಬೆನ್ನಿಗೆ ನಿಲ್ಲಲಿದೆ. ಪತ್ರಕರ್ತರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಮುನ್ನಡೆಯಬೇಕು, ಎಂದು ಕರೆ ನೀಡಿದರು.
ಪತ್ರಕರ್ತರಲ್ಲಿ ದೊಡ್ಡವರು-ಚಿಕ್ಕವರು ಎಂಬ ಭೇದಭಾವವಿಲ್ಲದೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಕೆಲಸ ಮಾಡಬೇಕು. ಯಾವುದೇ ಬಾಹ್ಯ ಒತ್ತಡ ಅಥವಾ ಭಯಕ್ಕೆ ಮಣಿಯದೆ ನೈತಿಕತೆಯಿಂದ ವರದಿಗಾರಿಕೆ ನಡೆಸಬೇಕು.
ಡಾ. ಎಸ್. ಎಸ್. ಪಾಟೀಲ್ (ರಾಜ್ಯ ಉಪಾಧ್ಯಕ್ಷರು)
ಆರ್.ಎನ್.ಐ (RNI) ಮಾನ್ಯತೆ ಹೊಂದಿರುವ ಹಾಗೂ ನೈಜವಾಗಿ ಕ್ಷೇತ್ರದಲ್ಲಿದ್ದು ದುಡಿಯುವ ಪತ್ರಕರ್ತರಿಗೆ ಯಾವುದೇ ರೀತಿಯ ಅವಮಾನವಾದರೆ ಸಂಘಟನೆ ಸಹಿಸುವುದಿಲ್ಲ. ಒಗ್ಗಟ್ಟಿನಿಂದ ಮಾತ್ರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ.
ಸಂಗನಗೌಡ ಹೂವಣ್ಣವರ ಧಾರವಾಡ ಜಿಲ್ಲಾಧ್ಯಕ್ಷರು.
ಮುದ್ರಣ ವಿದ್ಯುನ್ಮಾನ ಮಾತ್ರವಲ್ಲದೆ ಇಂದಿನ ಡಿಜಿಟಲ್ ಯುಗದಲ್ಲಿ ಜನರ ಧ್ವನಿಯಾಗಿರುವ ಯೂಟ್ಯೂಬ್ ಹಾಗೂ ಸಾಮಾಜಿಕ ಮಾಧ್ಯಮ ಪತ್ರಕರ್ತರ ನ್ಯಾಯಸಮ್ಮತ ಹಿತಾಸಕ್ತಿಗೂ ಸಂಘಟನೆ ಬದ್ಧವಾಗಿದೆ.
ನಾಗರಾಜ್ (ಹಾವೇರಿ ಜಿಲ್ಲಾಧ್ಯಕ್ಷರು)
ಪತ್ರಿಕೋದ್ಯಮ ದೀನ-ದಲಿತರ ಮತ್ತು ಶೋಷಿತರ ಕಣ್ಣು-ಕಿವಿಯಾಗಿ ಕೆಲಸ ಮಾಡಬೇಕು. ಸತ್ಯ ಮತ್ತು ನ್ಯಾಯದ ಹಾದಿಯಲ್ಲಿ ರಾಜಿ ಇಲ್ಲದೆ ಸಾಗಬೇಕು.
ಮೊಹಮ್ಮದ್ ರಫಿ ಗಜೇಂದ್ರಗಡ ತಾಲೂಕು ಸದಸ್ಯರು
ಇದೇ ವೇಳೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹಿಳಾ ಪತ್ರಕರ್ತೆಯರು ಎದುರಿಸುತ್ತಿರುವ ಸವಾಲುಗಳ ಕುರಿತು ಮಹಿಳಾ ಪ್ರತಿನಿಧಿಗಳು ಬೆಳಕು ಚೆಲ್ಲಿದರು. ಮಹಿಳಾ ವರದಿಗಾರರಿಗೆ ಆತ್ಮಸ್ಥೈರ್ಯ ತುಂಬಲು ಸಂಘಟನೆಯು ಎಲ್ಲಾ ರೀತಿಯ ಸಾಂಸ್ಥಿಕ ಹಾಗೂ ಕಾನೂನಾತ್ಮಕ ನೆರವು ನೀಡಲಿದೆ ಎಂದು ಮುಖಂಡರು ಭರವಸೆ ನೀಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಧಾರವಾಡ ಜಿಲ್ಲಾಧ್ಯಕ್ಷ ಸಂಗನಗೌಡ ಹೂವಣ್ಣವರ ವಂದಿಸಿದರು. ಸಭೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
