Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಬದಲಾವಣೆಯ ಹಾದಿಯಲ್ಲಿ ಜಕ್ಕಲಿ ಸರ್ಕಾರಿ ಶಾಲೆ: ದಾಖಲಾತಿ ಆಂದೋಲನಕ್ಕೆ ಭರ್ಜರಿ ಚಾಲನೆ

 

ರೋಣ : ಜಕ್ಕಲಿ ಸರ್ಕಾರಿ ಶಾಲೆಗಳು ಕೇವಲ ಅಕ್ಷರ ಕಲಿಯುವ ಕೇಂದ್ರಗಳಲ್ಲ, ಅವು ಮಕ್ಕಳ ಸಂಸ್ಕಾರ ಮತ್ತು ಭವಿಷ್ಯವನ್ನು ರೂಪಿಸುವ ಜ್ಞಾನ ದೇಗುಲಗಳು. ನಮ್ಮ ಜಕ್ಕಲಿ ಶಾಲೆಯಲ್ಲಿ ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಸೌಲಭ್ಯ ಹಾಗೂ ಶಿಕ್ಷಣವಿದ್ದು, ಪೋಷಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷರಾದ ಅಂದಪ್ಪ ರಾಮಪ್ಪ ಮಾದರ ಪೋಷಕರಲ್ಲಿ ಮನವಿ ಮಾಡಿದರು.

ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಂಕೀರ್ಣದಲ್ಲಿ (GMPS ಮತ್ತು HPKGS ) ದಿನಾಂಕ 13/05/2026 ಬುಧವಾರ ರಂದು 2026-27ನೇ ಸಾಲಿನ ದಾಖಲಾತಿ ಆಂದೋಲನ ಹಾಗೂ ಶಾಲಾ ಪ್ರಾರಂಭೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್‌ಪಿಕೆಜಿಎಸ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಸ್.ಬಿ. ಗವಿ ಅವರು, ನಮ್ಮ ಶಾಲೆಯಲ್ಲಿ ನುರಿತ ಶಿಕ್ಷಕ ವೃಂದವಿದ್ದು, ಗುಣಮಟ್ಟದ ಶಿಕ್ಷಣ ನೀಡಲು ನಾವು ಬದ್ಧರಾಗಿದ್ದೇವೆ. ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಯಲ್ಲಿ ಸಿಗುವ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂಗಳು ಮತ್ತು ಪೌಷ್ಟಿಕಾಂಶಯುತ ಬಿಸಿಊಟದಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ. ಶಾಲೆಯ ಆವರಣ ಈಗ ಸಿಸಿ ಕ್ಯಾಮೆರಾ ಮತ್ತು ಸುಂದರ ಪರಿಸರದೊಂದಿಗೆ ಕಂಗೊಳಿಸುತ್ತಿದ್ದು, ಮಕ್ಕಳ ಉಜ್ವಲ ಭವಿಷ್ಯಕ್ಕೆ ಇಲ್ಲಿ ಭದ್ರ ಬುನಾದಿ ಸಿಗಲಿದೆ ಎಂದು ಪೋಷಕರಿಗೆ ತಿಳಿಸಿದರು

ದಾಖಲಾತಿ ಆಂದೋಲನದ ವಿಶೇಷವೆಂದರೆ, ಶಾಲೆಯ ಶಿಕ್ಷಕ ವೃಂದದವರು ಮತ್ತು ಎಸ್‌ಡಿಎಂಸಿ ಸಮಿತಿಯ ಸದಸ್ಯರು ಇತರರಿಗೆ ಮಾದರಿಯಾಗುವ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನೇ ಸರ್ಕಾರಿ ಶಾಲೆಗೆ ದಾಖಲಿಸುವ ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ನಮ್ಮ ಶಾಲೆಯ ಶಿಕ್ಷಣದ ಮೇಲೆ ನಮಗೆ ಅಚಲವಾದ ವಿಶ್ವಾಸವಿದೆ, ಹಾಗಾಗಿ ನಾವು ನಮ್ಮ ಮಕ್ಕಳನ್ನು ಇಲ್ಲೇ ಓದಿಸುತ್ತಿದ್ದೇವೆ ಎಂಬ ಅವರ ನಿರ್ಧಾರವು ಗ್ರಾಮದ ಪೋಷಕರಲ್ಲಿ ಭರವಸೆ ಮೂಡಿಸಿತು. ಈ ಸಂದರ್ಭದಲ್ಲಿ ಹಲವು ಮಕ್ಕಳನ್ನು 1ನೇ ತರಗತಿಗೆ ಸಂಭ್ರಮದಿಂದ ದಾಖಲು ಮಾಡಿಕೊಳ್ಳಲಾಯಿತು.

ಕಾರ್ಯಕ್ರಮದ ನಂತರ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಮತ್ತು ಶಿಕ್ಷಕ ವೃಂದದವರು ಗ್ರಾಮದ ಪ್ರತಿಯೊಂದು ಬೀದಿಗಳಲ್ಲಿ ಸಂಚರಿಸಿ ಮನೆ ಮನೆಗೆ ಭೇಟಿ ನೀಡಿದರು. ಸರ್ಕಾರಿ ಶಾಲೆಯಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ, ನುರಿತ ಶಿಕ್ಷಕರು ಮತ್ತು ಆಧುನಿಕ ಸೌಲಭ್ಯಗಳ ಕುರಿತು ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು.

ಕಳೆದ ಕೆಲವು ವರ್ಷಗಳಿಂದ ಸಮಿತಿಯ ಸತತ ಪರಿಶ್ರಮದಿಂದ ಶಾಲೆಯ ಚಿತ್ರಣವೇ ಬದಲಾಗಿದೆ:

ಶಾಲೆಯ ಆವರಣದ ಭದ್ರತೆಗಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಆಕರ್ಷಕ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲಾಗಿದೆ.

ಬಾಲ (BaLA) ಯೋಜನೆಯಡಿ ಶಾಲಾ ಗೋಡೆಗಳ ಮೇಲೆ ಸುಂದರ ವರ್ಣಚಿತ್ರಗಳನ್ನು ಬಿಡಿಸಲಾಗಿದ್ದು, ಮಕ್ಕಳಿಗೆ ಶಾಲೆಯು ಆಟವಾಡುತ್ತಾ ಕಲಿಯುವ ಸುಂದರ ತಾಣವಾಗಿದೆ.

ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂಗಳು ಮತ್ತು ಪೌಷ್ಟಿಕಾಂಶಯುತ ಬಿಸಿಊಟದ ವ್ಯವಸ್ಥೆಯನ್ನು ಪೋಷಕರು ಸದುಪಯೋಗ ಪಡಿಸಿಕೊಳ್ಳಲು ಕೋರಲಾಯಿತು.

ಸಂಸ್ಕಾರಯುತ ಬದುಕು: ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಗಾಂಧೀಜಿಯವರಂತಹ ಮಹಾನ್ ಪುರುಷರ ಜಯಂತಿ ಆಚರಣೆಯ ಮೂಲಕ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಲಾಗುತ್ತಿದೆ.

ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಸ್.ಬಿ. ಗವಿ ಮತ್ತು ಶ್ರೀ ಹೆಚ್.ಎಸ್. ಬಿಂಗಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರಾದ ಶ್ರೀಮತಿ ಎ.ಬಿ. ಜಕ್ಕಲಿ, ಶ್ರೀಮತಿ ಎ ಪಿ ಶೆಟ್ಟರ್.ಶ್ರೀ ಎಂ ವಿ ತಾಳಿಕೋಟಿ.ಶ್ರೀ ಎಸ್.ಎ. ಪಲ್ಲೇದ, ಶ್ರೀ ಎಸ್.ಎಸ್. ಯಲ್ಲರೆಡ್ಡಿ ಹಾಗೂ ಶ್ರೀ ಪಿ.ಜಿ. ಹುಯಿಲಗೋಳ ಉಪಸ್ಥಿತರಿದ್ದರು. ಎಸ್‌ಡಿಎಂಸಿ ಸಮಿತಿಯ ಸದಸ್ಯರಾದ ಮುತ್ತಪ್ಪ ಮರಬಸಪ್ಪಣ್ಣವರ, ಕಳಕಪ್ಪ ರಂಗಣ್ಣವರ, ಕುಬೇರಪ್ಪ ಕೊಡಗಾನೂರು ಹಾಗೂ ಗ್ರಾಮಸ್ಥರಾದ ಶಿದ್ದಲಿಂಗಪ್ಪ ಹಡಪದ, ಮುತ್ತು ಮೇಟಿ, ವಿಜಯ ತಳವಾರ, ಹಣಮಪ್ಪ ಜಂಗಣ್ಣವರ ಸೇರಿದಂತೆ ಅನೇಕರು ಪಾಲ್ಗೊಂಡು ದಾಖಲಾತಿ ಆಂದೋಲನವನ್ನು ಯಶಸ್ವಿಗೊಳಿಸಿದರು.

Related posts

223ನೇ ದಿನದ ಬಲ್ಡೋಟ ಕಾರ್ಖಾನೆ, ಮಾಲಿನ್ಯ ವಿರೋಧಿ ಹೋರಾಟ ಯಶಸ್ವಿ;

satyadarshana

ಮದುವೆಯ ದುಂದು ವೆಚ್ಚಕ್ಕೆ ತಡೆ ; ಮದ್ಯಪಾನ ಸೇವನೆ, ಡಿಜೆಗೆ ನಿಷೇಧ

satyadarshana

ಸರ್ಕಾರಿ ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ (KPS) ಅಭಿವೃದ್ಧಿಪಡಿಸಲು ಸಿ.ಎಸ್. ಆರ್ ಸಭೆ: ಸಿ.ಎಸ್.ಆರ್. ಅನುದಾನ ಬಳಕೆ ಕುರಿತು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ನೇತೃತ್ವದಲ್ಲಿ ಮಹತ್ವದ ಸಭೆ

satyadarshana

Leave a Comment