Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಹರ್ತಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳ ಅನಾವರಣ, ಲೋಕಾರ್ಪಣೆ ನೆರವೇರಿದ ಸಚಿವ ಡಾ. ಎಚ್.ಕೆ. ಪಾಟೀಲ

 

ಬುದ್ದ–ಬಸವ–ಅಂಬೇಡ್ಕರ್ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ • ಸಮಾನತೆ, ಸಹಬಾಳ್ವೆಗೆ ಸರ್ಕಾರ ಬದ್ಧತೆ

ಗದಗ, ಮೇ 03: ಜಿಲ್ಲೆಯ ಹರ್ತಿ ಗ್ರಾಮದಲ್ಲಿ ಭಾನುವಾರ (ಮೇ.3) ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮಗಳು ಜರುಗಿದವು.

ರಾಜ್ಯದ ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಅವರು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಗ್ರಾಮಾಭಿವೃದ್ಧಿಗೆ ವೇಗ ತುಂಬಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಎಚ್ ಕೆ ಪಾಟೀಲರು, “ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ದ್ವನಿ ಇಲ್ಲದವರಿಗೆ ದ್ವನಿಯಾಗಿ ನಿಲ್ಲುವ ಶಕ್ತಿ ನಮ್ಮ ದೇಶಕ್ಕೆ ನೀಡಿದ್ದಾರೆ. ಬುದ್ಧರು ‘ಸಮ ಬಾಳು – ಸಮಪಾಲು’ ಎಂಬ ತತ್ವವನ್ನು ಸಾರಿದರೆ, ಬಸವಣ್ಣನವರು ‘ಇವ ನಮ್ಮವ’ ಎಂಬ ಸಮಾನತೆಯ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಈ ಮಹನೀಯರ ತತ್ವಗಳು ಕೇವಲ ಭಾಷಣಗಳಲ್ಲಿ ಮಾತ್ರ ಉಳಿಯದೆ, ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ,” ಎಂದು ಹೇಳಿದರು.

ಇಂದಿನ ಸಮಾಜದಲ್ಲಿ ಹಲವರು ಬುದ್ದ, ಬಸವ ಹಾಗೂ ಅಂಬೇಡ್ಕರ್ ಅವರ ಹೆಸರುಗಳನ್ನು ಕೇವಲ ವೇದಿಕೆ ಭಾಷಣಗಳಿಗೆ ಮಾತ್ರ ಬಳಸುತ್ತಿರುವುದು ವಿಷಾದನೀಯ. ಅವರ ತತ್ವ–ಸಿದ್ಧಾಂತಗಳನ್ನು ಅನುಸರಿಸಿದಾಗ ಮಾತ್ರ ಸಮಾನತೆ, ನ್ಯಾಯ ಮತ್ತು ಸಹಬಾಳ್ವೆಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಜನಪರ ಆಡಳಿತಕ್ಕೆ ಆದ್ಯತೆ ನೀಡಿ, ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಒದಗಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ. “ಇವ ನಮ್ಮವ, ಇವ ನಮ್ಮವ” ಎಂಬ ಸಮಾನತೆಯ ಭಾವನೆ ಮೂಡಿಸುವ ನಿಟ್ಟಿನಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ ಎಂದು ಎಚ್ ಕೆ ಪಾಟೀಲ ಅವರು ಹೇಳಿದರು.

ಈ ಕಾಮಗಾರಿಗಳು ಪೂರ್ಣಗೊಂಡ ನಂತರ ಗ್ರಾಮದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಬಲ ದೊರೆಯಲಿದೆ. ಗ್ರಾಮಸ್ಥರ ದೈನಂದಿನ ಜೀವನ ಸುಗಮವಾಗುವುದಲ್ಲದೆ, ಸ್ವಚ್ಛತೆ, ಸಂಚಾರ ಮತ್ತು ಸಾರ್ವಜನಿಕ ಸೇವೆಗಳ ಗುಣಮಟ್ಟ ಹೆಚ್ಚಲಿದೆ ಎಂಬ ನಿರೀಕ್ಷೆಯಿದೆ ಎಂದು ಸಚಿವ ಎಚ್ ಕೆ ಪಾಟೀಲರು ಅಭಿಪ್ರಾಯ ಪಟ್ಟರು.

*ವಿವಿಧ ಕಾಮಗಾರಿಗಳಿಗೆ ಚಾಲನೆ:* ಈ ಸಂದರ್ಭದಲ್ಲಿ ಹರ್ತಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಬಳಿಯಲ್ಲಿ ಸುಸಜ್ಜಿತ ಗೌರವ ಘಟಕ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಶಿವ–ಪಾರ್ವತಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೂ ಚಾಲನೆ ನೀಡಲಾಯಿತು. ಗ್ರಾಮದಲ್ಲಿ ಸಾರ್ವಜನಿಕ ಸೌಲಭ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಗ್ರಾಮ ಚವಡಿ ಕಟ್ಟಡ ನಿರ್ಮಾಣ, ಸಿ.ಸಿ. ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

*ಜಯಂತ್ಯೋತ್ಸವಕ್ಕೆ ಚಾಲನೆ:* ಬುದ್ಧ, ಬಸವ ಮತ್ತು ಅಂಬೇಡ್ಕರ್ ಜಯಂತ್ಯೋತ್ಸವ ಆಚರಣೆಗೆ ಸಚಿವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮಹನೀಯರ ತತ್ವಗಳನ್ನು ಜನರಿಗೆ ಪರಿಚಯಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

*ಸ್ಥಳೀಯರ ಹರ್ಷ:* ಗ್ರಾಮದಲ್ಲಿ ಒಂದೇ ದಿನ ಹಲವು ಕಾಮಗಾರಿಗಳಿಗೆ ಚಾಲನೆ ದೊರೆತಿರುವುದು ಗ್ರಾಮಸ್ಥರಲ್ಲಿ ಹರ್ಷದ ವಾತಾವರಣವನ್ನು ಮೂಡಿಸಿದೆ. ದೀರ್ಘಕಾಲದಿಂದ ನಿರೀಕ್ಷಿಸಲಾಗುತ್ತಿದ್ದ ರಸ್ತೆ, ಚರಂಡಿ ಮತ್ತು ಕಟ್ಟಡ ಕಾಮಗಾರಿಗಳು ಇದೀಗ ಆರಂಭವಾಗುತ್ತಿರುವುದು ಸಂತಸದ ಸಂಗತಿ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಎಸ್.ಎಸ್. ಪಾಟೀಲ, ಅಪ್ಪಣ್ಣ ಇನಾಮತಿ, ಬಸವರಾಜ ಕಡೇಮನಿ, ಸಿಂಗಾಡಿ, ಶರೀಪನವರ್, ಎಸಿ ಗಂಗಪ್ಪ, ಡಾ. ಜಿನಗಾ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗಂಗಾಧರ ಶಿರೋಳ ಸೇರಿದಂತೆ ಅನೇಕ ಗಣ್ಯರು ಹಾಗೂ ಗ್ರಾಮಸ್ಥರು ಇದ್ದರು.

Related posts

“ಮಳೆಯೇ ಪರಿಸರದ ಬ್ಯಾಂಕ್ ಪರಿಸರವೇ ಆಕ್ಸಿಜನ್ ಟ್ಯಾಂಕ್” -ದಂಡಿನ

satyadarshana

ಅಮಿತ್ ಷಾ ರಾಜಿನಾಮೇ ನೀಡುವಂತೆ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಆಗ್ರಹ

satyadarshana

ಕರೋನಾ ದೂರಿಕರಿಸಲು ವ್ಯಾಕ್ಸಿನ್ ಹಾಕಿಸಿಕೊಳ್ಳಿ – ಪಾಪಣ್ಣ

satyadarshana

Leave a Comment