ಮುಳಗುಂದದಲ್ಲಿ ₹16.71 ಕೋಟಿ ಕೆಇಬಿ ಗ್ರಿಡ್‌ಗೆ ಶಂಕುಸ್ಥಾಪನೆ – ಸಚಿವ ಡಾ. ಎಚ್.ಕೆ. ಪಾಟೀಲ*
ಅಂಗನವಾಡಿ, ಸಮುದಾಯ ಭವನ, ಜೈನ ಬಸದಿ ಅಭಿವೃದ್ಧಿ ಕಾಮಗಾರಿಗಳಿಗೆ ಸಹ ಚಾಲನೆ
ಗದಗ, ಮೇ 03:
ಗದಗ ತಾಲೂಕಿನ ಮುಳಗುಂದ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಲಾಗಿದ್ದು, ಪ್ರಮುಖವಾಗಿ ₹16.71 ಕೋಟಿ ವೆಚ್ಚದ ಕೆಇಬಿ ಗ್ರಿಡ್ ನಿರ್ಮಾಣ ಯೋಜನೆಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಲಾಯಿತು. 
ರಾಜ್ಯದ ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಮುಳಗುಂದದಲ್ಲಿ ಕೆಇಬಿ ಗ್ರಿಡ್ ಸ್ಥಾಪನೆ ಎಂಬುದು ಕಳೆದ ಇಪ್ಪತ್ತು ವರ್ಷಗಳ ಹೋರಾಟದ ಫಲವಾಗಿದೆ. ಇಂದು ಅದು ಸಾಕಾರವಾಗುತ್ತಿರುವುದು ಅತ್ಯಂತ ಸಂತಸದ ಸಂಗತಿ. ₹16.71 ಕೋಟಿ ಮೊತ್ತದ ಈ ಯೋಜನೆ ಈ ಭಾಗದ ರೈತರು ಹಾಗೂ ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗಲಿದೆ,” ಎಂದು ಸಚಿವರು ಹೇಳಿದರು.
ಮುಳಗುಂದದಲ್ಲಿ ನಿರ್ಮಿಸಲಾಗುವ 2 X 20 ಎಂ.ವಿ.ಎ ಸಾಮರ್ಥ್ಯದ 110/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರವು ಈ ಪ್ರದೇಶದ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಮಹತ್ವದ ಬಲ ತುಂಬಲಿದೆ. ವಿಶೇಷವಾಗಿ ರೈತರಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಲಭ್ಯವಾಗುವ ಮೂಲಕ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಈ ಗ್ರಿಡ್ ಕಾಮಗಾರಿ ಒಂದು ವರ್ಷದೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದ್ದು, ಮುಂದಿನ ವರ್ಷದ ಮೇ 1ರೊಳಗೆ ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
ಮುಳಗುಂದದ ಜನರು ಜಾಣರು ಮತ್ತು ದೊಡ್ಡ ಮೊತ್ತದ ಯೋಜನೆಗಳನ್ನು ಒಟ್ಟಾಗಿ ಸಾಧಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ “ವಿಜ್ ಟು ವ್ಯಾಲಿ” ಯೋಜನೆಯಂತಹ ₹20 ಕೋಟಿ ಯೋಜನೆಯೂ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ ಎಂದು ಸಚಿವ ಎಚ್ ಕೆ ಪಾಟೀಲ ಪ್ರಶಂಸಿಸಿದರು.
ಮುಳಗುಂದದಲ್ಲಿ ಜೈನ ಬಸದಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಮುಳಗುಂದ ಪಟ್ಟಣದ ಅಂಗನವಾಡಿ ಕೇಂದ್ರ-323 ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಅಲ್ಲದೇ ಶ್ರೀ ಪುರದ ಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಸೌಲಭ್ಯಗಳು ಮತ್ತಷ್ಟು ಸುಧಾರಿಸಲಿವೆ ಎಂದರು.
ಕಾರ್ಯಕ್ರಮದಲ್ಲಿ ಹು.ವಿ.ಸ.ಕಂ.ನಿ ಅಧ್ಯಕ್ಷರು ಹಾಗೂ ಶಿಗ್ಗಾಂವ–ಸವಣೂರ ಮಾಜಿ ಶಾಸಕ ಸೈಯದ್ ಅಜೀಮಪೀರ್ ಎಸ್. ಖಾದ್ರಿ, ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು
