ಗದಗ: ಫೆ.3: ರಾಜ್ಯದ ಜನತೆಗೆ ಉತ್ತಮ ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆಯ ಒದಗಿಸುವ ನಿಟ್ಟಿನಲ್ಲಿ 325 ನೂತನ ಬಸ್ ಖರೀದಿಗೆ ಸದ್ಯದಲ್ಲೇ ಕ್ರಮವಹಿಸುವದರ ಜೊತೆಗೆ ಒಟ್ಟಾರೆ 5000 ಬಸ್ ಖರೀದಿಗೆ ಉದ್ದೇಶ ಹೊಂದಲಾಗಿದೆ ಎಂದು ರಾಜ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಹೇಳಿದರು.
ನಗರದ ಹೊಸ ಬಸ್ ನಿಲ್ದಾಣದಲ್ಲಿ ಶನಿವಾರದಂದು ನೂತನ 50 ಬಸ್ ಗಳ ಲೋಕಾರ್ಪಣೆ, ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ನಾಲ್ಕು ವರ್ಷಗಳಿಂದ ಹೊಸ ಬಸ್‍ಗಳ ಖರೀದಿ 7 ವರ್ಷಗಳಿಂದ ನೇಮಕಾತಿಗಳು ನಡೆದಿರಲಿಲ್ಲ. ಸಧ್ಯ ನಮ್ಮ ಸರ್ಕಾರ 9 ಸಾವಿರ ಹುದ್ದೆ ನೇಮಕಾತಿಗೆ ಅನುಮತಿ ನೀಡಿದ್ದು ನೇಮಕಾತಿ ಜವಾಬ್ದಾರಿಯನ್ನು ಆಯಾ ವಿಭಾಗೀಯ ಸಂಸ್ಥೆಗಳಿಗೆ ನೀಡಲಾಗಿದ್ದು ಈಗಾಗಲೇ 145 ಜನರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗಿದೆ ಎಂದರು.
ನಗರದಲ್ಲಿ ಸೂಕ್ತ ನಿವೇಶನ ಒದಗಿಸಿದ್ದಲ್ಲಿ ಸುಸಜ್ಜಿತ ಟ್ರಕ್ ಟರ್ಮಿನಲ್ ಮಂಜೂರು ಮಾಡಲಗುವುದು ಈ ಕುರಿತು ಮುಂಬರುವ ಆಯವ್ಯಯದಲ್ಲಿ ಈ ವಿಷಯ ಅಳವಡಿಸಲಾಗುವುದು. ಜಿಲ್ಲೆಗಳಲ್ಲಿ ಚಾಲನಾ ಪರವಾನಿಗೆ ನೀಡುವ ಕ್ಯಾಂಪ್‍ಗಳನ್ನು ಆಯೋಜಿಸಲು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ಎಂದು ತಿಳಿಸಿದರು. ರಾಜ್ಯದಲ್ಲಿ ಸುಸಜ್ಜಿತವಾದಂತಹ ಬಸ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳ ನಿರ್ವಹಣೆ ಮಾಡಬೇಕಾಗಿರುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಸಚಿವರಾದ ರಾಮಲಿಂಗಾ ರೆಡ್ಡಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಅವರು ನಗದು ರಹಿತ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿ ನಗರದ ಹೊಸ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಔಷಧಿ, ಪುಸ್ತಕ ವ್ಯವಸ್ಥೆ, ರೈಲ್ವೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ ವಸ್ತುಗಳು ಇಲ್ಲೇ ಸಿಗುವಂತಾಗಬೇಕು ಎಂದರು. ವಿಮಾನ ನಿಲ್ದಾಣದಲ್ಲಿ ಸಿಗುವ ವ್ಯವಸ್ಥೆಯಂತೆ ಬಸ್ ನಿಲ್ದಾಣದಲ್ಲಿಯೂ ಸಿಗುವಂತಾಗಬೇಕು. ಇಪ್ಪತ್ತೈದು ಲಕ್ಷ ರೂ. ವೆಚ್ಚ ಮಾಡಿದ್ದಲ್ಲಿ ಈ ನಿಲ್ದಾಣವು ಭವ್ಯವಾಗಲಿದೆ ಈ ಕುರಿತು ಅಧಿಕಾರಿಗಳು ಗಮನ ಹರಿಸುವಂತೆ ಸೂಚಿಸಿದರು.
ಸಾರಿಗೆ ಇಲಾಖೆಯಿಂದ ಗದಗ ಜಿಲ್ಲೆಗೆ ಕಡಿಮೆ ಕೆಲಸ ಆಗಿದೆ. ಜಿಲ್ಲೆಗೆ ಟ್ರಕ್ ಟರ್ಮಿನಲ್ ಅನ್ನು ಆದಷ್ಟು ಬೇಗ ಮಂಜೂರು ಮಾಡಬೇಕು ಎಂದು ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಸಚಿವ ಎಚ್.ಕೆ. ಪಾಟೀಲ ಮನವಿ ಮಾಡಿದರು. ಗದಗ ನಗರದಲ್ಲಿ ಕೆಲವಡೆ ಮಿನಿ ಬಸ್ ನಿಲ್ದಾಣಗಳನ್ನು ಮಂಜೂರು ಮಾಡಲು, ವಿಭಾಗೀಯ ಚಾಲಕ ತರಬೇತಿ ಕೇಂದ್ರ, ಅಶ್ವಮೇಧ ಬಸ್ ವ್ಯವಸ್ಥೆ, ಇನ್ನೂ ಹೆಚ್ಚಿನ ಬಸ್ ವ್ಯವಸ್ಥೆ ಮಂಜೂರು, ಲೈಸೆನ್ಸ್ ನೀಡುವ ಪ್ರಕ್ರಿಯೆ ಅತ್ಯಾಧುನಿಕರಣ, ಚಾಲನಾ ಪರವಾನಿಗೆ ನಿಡುವ ಕ್ಯಾಂಪಗಳ ಆಯೋಜನೆ ಸೇರಿದಂತೆ ಹಲವು ಮನವಿಗಳನ್ನು ಸಚಿವ ಎಚ್.ಕೆ. ಮಾಡಿದರು.
ವಾಕರಸಾಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ಮಾತನಾಡಿ, ಶಕ್ತಿ ಯೋಜನೆಯನ್ನು ವಿಭಾಗದ ಆರು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಇಲ್ಲಿಯವರೆಗೆ ಹುಬ್ಬಳ್ಳಿ ವಿಭಾಗದ 6 ಜಿಲ್ಲೆಯಲ್ಲಿ ಅಂದಾಜು 34 ಕೋಟಿ ಜನ ಸಂಚರಿಸಿದ್ದಾರೆ. ರಾಜ್ಯದಲ್ಲಿ ಹೊಸ ಬಸ್ ಖರೀದಿಗೆ ಸರ್ಕಾರ 500 ಕೋಟಿ ಮೀಸಲಿಟ್ಟು ವಾಕರಸಾಸಂಸ್ಥೆಗೆ 150 ಕೋಟಿ ನೀಡಿದೆ. ಈ ಪೈಕಿ ಮೊದಲ ಹಂತದ 20 ಕೋಟಿ ವೆಚ್ಚದಲ್ಲಿ 50 ಬಸ್ ಖರೀದಿಸಲಾಗಿದೆ. ಸರ್ಕಾರ 20 ಸಾವಿರ ಹುದ್ದೆಗಳನ್ನು ಬರ್ತಿ ಮಾಡಿಕೊಳ್ಳಲು ಅನುಮತಿ ನೀಡಿದ್ದು ಅಪಘಾತ ರಹಿತ ಸೇವೆ ನಮ್ಮ ಸಂಸ್ಥೆಯ ಉದ್ದೇಶ ಆಗಿದೆ. ಅಪಘಾತ ರಹಿತ ಸೇವೆ ಸಲ್ಲಿಸಿದ 48 ಜನರಿಗೆ ಇಂದು ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪಘಾತ ರಹಿತ ಸೇವೆ ಸಲ್ಲಿಸಿದ 48 ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಲಾಯಿತು. ಮಾಜಿ ಶಾಸಕ ಡಿ.ಆರ್. ಪಾಟೀಲ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಸೀನಪ್ಪ, ಗಣ್ಯರುಗಳಾದ ಬಿ.ಬಿ. ಅಸೂಟಿ, ಗುರಣ್ಣ ಬಳಗಾನೂರ, ಸಿದ್ದು ಪಾಟೀಲ ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಮುಖ್ಯ ಕಾರ್ಮಿಕ ಕಲ್ಯಾಣ ಅದಿಕಾರಿ ಪಿ.ವಾಯ್ ನಾಯಕ ಸ್ವಾಗತಿಸಿದರು. ಮುಖ್ಯ ಸಂಚಾರಿ ವ್ಯವಸ್ಥಾಪಕರಾದ ವಿಶ್ವಜ್ ವಂದಿಸಿದರು.
