ಗದಗ: ಮೇ 5: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವಲ್ಲಿ ಮತದಾರರ ಪಾತ್ರ ಪ್ರಮುಖವಾಗಿದ್ದು ಮೇ 10 ರಂದು ವಿಧಾನಸಭಾ ಚುನಾವಣೆ ನಿಮಿತ್ತ ಮತದಾನವು ಜರುಗಲಿದ್ದು ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ತಪ್ಪದೇ ಮತ ಚಲಾಯಿಸುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶುಕ್ರವಾರದಂದು ಜಿಲ್ಲಾಡಳಿತ ಭವನದ ಆವರಣದಿಂದ ಸರ್ಕಾರಿ ನೌಕರರ ಬೃಹತ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಡಾ.ಸುಶೀಲಾ ಬಿ. ಅವರುಗಳು ಜಿಲ್ಲಾಡಳಿತ ಭವನದಿಂದ ಪ್ರಾರಂಗೊಂಡಂತಹ ಸರ್ಕಾರಿ ನೌಕರರ ಬೈಕ ರ್ಯಾಲಿಗೆ ಚಾಲನೇ ನೀಡಿ ಬೈಕ್ ಸವಾರಿ ಮಾಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕರಿಗಳಾದ ವೈಶಾಲಿ ಎಂ.ಎಲ್ ಅವರು ಮಾತನಾಡಿ ಮತದಾರರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ, ಪಾರದರ್ಶಕವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಗೆ ಭದ್ರ ಬುನಾದಿ ಹಾಕಬೇಕು ಎಂದರು. ಶಾಂತಿ ಹಾಗೂ ಸುವ್ಯವಸ್ಥಿತ ಚುನಾವಣೆಗಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ನೀತಿ ಸಂಹಿತೆ ಉಲ್ಲಂಘನೆಯಾಗುವದು ಕಂಡು ಬಂದಲ್ಲಿ ಸಾರ್ವಜನಿಕರು ಸಹಾಯವಾಣಿ ಕೇಂದ್ರ 1950 ಅಥವಾ ಸಿ-ವಿಜಿಲ್ ಆಪ್ ಮೂಲಕ ನಿರ್ಭಿತರಾಗಿ ದೂರು ದಾಖಲಿಸುವಂತೆ ತಿಳಸಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ. ಸಿ.ಇ.ಓ ಡಾ.ಸುಶೀಲಾ ಬಿ ಮಾತನಾಡಿ ಮತದಾನ ಪ್ರತಿಯೊಬ್ಬ ಅರ್ಹ ಮತದಾರರನ ಹಕ್ಕಾಗಿದ್ದು ಪ್ರತಿಯೊಬ್ಬ ಅರ್ಹ ಮತದಾರನು ಯಾವುದೇ ಆಮಿಷುಗಳಿಗೆ ಒಳಗಾಗದೇ ನಿರ್ಭಿತಿಯಾಗಿ ಮತದಾನ ಮಾಡುವಂತೆ ನುಡಿದರು. ಮತದಾರರ ಜಾಗೃತಿಗಾಗಿ ಈಗಾಗಲೇ ಜಿಲ್ಲಾದ್ಯಂತ ಅನೇಕ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅರ್ಹ ಮತದಾರರು ತಾವು ಮತ ಚಲಾಯಿಸಿ ಬೇರೋಬ್ಬ ಅರ್ಹ ಮತದಾರನು ಮತ ಚಲಾಯಿಸುವಂತೆ ಪ್ರೇರೇಪಿಸುವ ಮೂಲಕ ಯಾವೊಬ್ಬ ಮತದಾರನು ಮತದಾನದಿಂದ ದೂರ ಉಳಿಯದಂತೆ ಪ್ರತಿಯೊಬ್ಬರು ಮುಂದಾಗುವಂತೆ ಕರೇ ನೀಡಿದರು.
ಬೈಕ ರ್ಯಾಲಿಯಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರವಿ ಗುಂಜಿಕರ, ಜಿಲ್ಲಾ ಸ್ವೀಪ್ ಸಮಿತಿ ರಾಯಭಾರಿ ಪ್ರೇಮಾ ಹುಚ್ಚಣ್ಣವರ, ಯುವಜನ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾ ನಿರ್ದೇಶಕ ವಾಗೀಶ ಶಿವಾಚಾರ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.
ಜಿಲ್ಲಾಡಳಿತ ಭವನದಿಂದ ಪ್ರಾರಂಭವಾದ ಬೈಕ್ ರ್ಯಾಲಿಯು ಮುಳಗುಂದನಾಕಾ, ಸಿದ್ಧಲಿಂಗನಗರ ಫಸ್ಟ್ ಕ್ರಾಸ್, ಬಸವೇಶ್ವರ ಪ್ರಾಥಮಿಕ ಶಾಲೆ, ಕಳಸಾಪೂರ ರಸ್ತೆ, ಸಿದ್ಧರಾಮೇಶ್ವರ ನಗರ, ಶ್ರೀ ದತ್ತಾತ್ರೇಯ ರಸ್ತೆ, ಶ್ರೀ ಬಸವೇಶ್ವರ ಸರ್ಕಲ್, ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಪುತ್ಥಳಿ, ಎ.ಪಿ.ಎಂ.ಸಿ. ರಸ್ತೆ, ಶ್ರೀ ಮಾರುತಿ ದೇವಸ್ತಾನ, ಪಂಚಾಕ್ಷರಿ ನಗರ (ಶುದ್ಧ ನೀರಿನ ಘಟಕ), ಪಂಚಾಕ್ಷರಿ ನಗರ (ಮೊದಲನೇಕ್ರಾಸ್-ಸಜ್ಜನ್ ಆಸ್ಪತ್ರೆ) ಚರ್ಚ ರಸ್ತೆ , ರಾಜೀವ ಗಾಂಧಿ ನಗರ (ಪೊಲೀಸ ಠಾಣೆ), ಕಲಾ ಮಂದಿರ ರಸ್ತೆ, ಶ್ರೀ ಸಾಯಿ ಬಾಬಾ ದೇವಸ್ಥಾನ, ಹಾತಲಗೇರಿ ನಾಕಾ, ಜೆ.ಟಿ. ಕಾಲೇಜ ರಸ್ತೆ, ಬಳ್ಳಾರಿ ಗೇಟ್,ಶ್ರೀ ನೀಲಕಂಠೇಶ್ವರ ಮಠ, ಟೆಂಗಿನಕಾಯಿ ಬಜಾರ ರಸ್ತೆ , ಪಾಲಾ ಬಾದಾಮಿ ರಸ್ತೆ, ಜರ್ಮನ್ ಆಸ್ಪತ್ರೆ , ಹಾಕಿ ಕ್ರೀಡಾಂಗಣ, ಹಳೇ ಕೋರ್ಟ ( ಡಿ.ಸಿ. ಮಿಲ್ ರಸ್ತೆ), ಗಂಗಾಪೂರ ಪೇಟೆ ಸರ್ಕಲ್, ವಿ.ಎನ್.ಟಿ. ರಸ್ತೆ (ಹಳೇ ಸರಾಫ್ ಬಜಾರ್ ರಸ್ತೆ), ಜುಮ್ಮಾ ಮಸೀದಿ, ಶ್ರೀ ಜೋಡು ಮಾರುತಿ ದೇವಸ್ಥಾನ, ಹಳೇಕಚೇರಿ ರಸ್ತೆ, ಪ್ರವಾಸಿ ಮಂದಿರ, ಮುಳಗುಂದ ನಾಕಾಕ್ಕೆ ಬಂದು ಮುಕ್ತಾಯಗೊಂಡಿತು.

ಚುನಾವಣಾ ಜಾಹೀರಾತು : ಪೂರ್ವಾನುಮತಿ ಕಡ್ಡಾಯ
ಗದಗ(ಕರ್ನಾಟಕ ವಾರ್ತೆ) ಮೇ 5: ಕರ್ನಾಟಕ ವಿಧಾನಸಭೆ ಚುನಾವಣೆ 2023 ಅಂಗವಾಗಿ ಮೇ 10, 2023 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೇ 9 ಹಾಗೂ 10 ರಂದು ಅಭ್ಯರ್ಥಿಗಳು/ ಸಂಸ್ಥೆಗಳು ಅಥವಾ ಯಾವುದೇ ವ್ಯಕ್ತಿಯು ದಿನಪತ್ರಿಕೆಗಳಲ್ಲಿ ಯಾವುದೇ ರೀತಿಯ ಚುನಾವಣಾ ಜಾಹೀರಾತು ಪ್ರಕಟಿಸಬೇಕಾದರೆ ಸದರಿ ಜಾಹೀರಾತಿಗೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯ ( ಎಂಸಿಎಂಸಿ) ಕಡೆಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಚುನಾವಣಾ ಜಾಹೀರಾತು ಪ್ರಕಟಿಸಲು ಬಯಸುವ ಅಭ್ಯರ್ಥಿಗಳು ಮೇ 9 ಹಾಗೂ 10 ರಂದು ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಬೇಕಾದರೆ ಸದರಿ ಜಾಹೀರಾತಿನ ಎರಡು ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಮೇ 7 ರೊಳಗೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ ( ಎಂಸಿಎಂಸಿ) ಗೆ ಅರ್ಜಿ ಸಲ್ಲಿಸಬೇಕು.
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಜಾಹೀರಾತುಗಳನ್ನು ಪ್ರಕಟಿಸಲು ಜಿಲ್ಲಾಮಟ್ಟದ ಎಂಸಿಎಂಸಿ ಕಡೆಯಿಂದ ಪೂರ್ವಾನುಮತಿ ಪಡೆಯದ ಅಭ್ಯರ್ಥಿಗಳ ಜಾಹೀರಾತುಗಳನ್ನು ಸ್ಥಳೀಯ, ಜಿಲ್ಲಾ , ರಾಜ್ಯ ಹಾಗೂ ರಾಷ್ಟ್ರ ಮಟ್ಟದ ದಿನಪತ್ರಿಕೆಗಳು ಪ್ರಕಟಿಸಬಾರದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಪೂರ್ವಾನುಮತಿಗೆ ಅರ್ಜಿ ಲಭ್ಯ :
ಮೇ 9 ಹಾಗೂ ಮೇ 10 ರಂದು ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಲು ಅಗತ್ಯವಿರುವ ನಿಗದಿತ ನಮೂನೆಯ ಅರ್ಜಿ ನಮೂನೆಗಳನ್ನು ಗದಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಿಂದ ಪಡೆಯಬಹುದು.
ಎಲೆಕ್ಟ್ರಾನಿಕ್ಸ್ ಮಾಧ್ಯಮಗಳಿಗೆ ಮಾರ್ಗಸೂಚಿ: ಮತದಾನಕ್ಕೆ ನಿಗದಿಪಡಿಸಿರುವ ಅವಧಿ ಕೊನೆಗೊಳ್ಳುವ 48 ಗಂಟೆಗಳ ಮುಂಚೆ ಎಲೆಕ್ಟ್ರಾನಿಕ್ಸ್ ಮಾಧ್ಯಮಗಳಲ್ಲಿ (ಟಿ.ವಿ. ಸಿನಿಮಾಟೋಗ್ರಾಫ್, ದೃಶ್ಯ ಶ್ರವಣ) ಚುನಾವಣಾ ಸಂಬಂಧಿ ವಿಷಯಗಳ ಪ್ರಸಾರವನ್ನು ಪ್ರಜಾಪ್ರತಿನಿಧಿ ಕಾಯ್ದೆ 1951 ರ ಕಲಂ 126 ರ ಪ್ರಕಾರ ನಿಷೇಧಿಸಲಾಗಿದೆ.
ಚುನಾವಣಾ ಸಂಬಂಧಿ ವಿಷಯ ಎಂದರೆ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಅಥವಾ ಪರಿಣಾಮ ಬೀರುವಂತಹ ವಿಷಯಗಳಾಗಿರುತ್ತವೆ. ಈ ಕಾಯ್ದೆಯನ್ನು ಉಲ್ಲಂಘಿಸುವವರಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ ಅಥವಾ ದಂಡ ಅಥವಾ ದಂಡ ಮತ್ತು ಶಿಕ್ಷೆ ಎರಡನ್ನೂ ವಿಧಿಸಬಹುದಾಗಿದೆ. ಟಿ.ವಿ/ ರೇಡಿಯೋ/ ಕೇಬಲ್ ನೆಟವರ್ಕ ಮತ್ತು ಎಲ್ಲ ಡಿಜಿಟಲ್ ಮಾಧ್ಯಮಗಳು ಮತದಾನ ಪೂರ್ವ 48 ಗಂಟೆಗಳ ಅವಧಿಯಲ್ಲಿ ಚುನಾವಣೆ ಸಂಬಂಧಿ ವಿಷಯಗಳು ಪ್ರಸಾರ ಮಾಡದಂತೆ ಕ್ರಮ ವಹಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವವರು ( ಪ್ಯಾನಲಿಸ್ಟ್ ) ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರ ಅಥವಾ ವಿರೋಧವಾಗಿರುವ ಅಭಿಪ್ರಾಯಗಳು/ ಮನವಿಗಳು ಮತ್ತು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವಂತಹ ವಿಷಯಗಳನ್ನು ಕೂಡ ಪ್ರಸಾರ ಮಾಡಕೂಡದು. ನಿಗದಿತ 48 ಗಂಟೆಗಳ ಅವಧಿಯಲ್ಲಿ ಓಪಿನಿಯನ್ ಪೋಲ್ ಫಲಿತಾಂಶ ಪ್ರಕಟಿಸುವುದು. ಚರ್ಚೆ ಅಥವಾ ವಿಶ್ಲೇಷಣೆ ಏರ್ಪಡಿಸುವುದು, ಅದೇ ರೀತಿ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡುವುದು ಕೂಡ ಪ್ರಜಾಪ್ರತಿನಿಧಿ ಕಾಯ್ದೆ 1951 ರ ಕಲಂ 126 ರ ವ್ಯಾಪ್ತಿಯಲ್ಲಿ ಬರುತ್ತದೆ.
ಕರ್ನಾಟಕ ವಿಧಾನಸಭೆ ಚುನಾವಣೆ-2023 ರ ಅಂಗವಾಗಿ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಆದ್ದರಿಂದ ಎಲ್ಲ ಎಲೆಕ್ಟ್ರಾನಿಕ್ಸ್ ಹಾಗೂ ಡಿಜಿಟಲ್ ಮಾಧ್ಯಮಗಳು ಮೇ 8 ರ ಸಂಜೆ 6 ಗಂಟೆಯಿಂದ ಮೇ 10 ರ ಸಂಜೆ 6.30 ಗಂಟೆಯವರೆಗೆ ನಿರ್ದೇಶನಗಳನ್ನು ಪಾಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.
