ಸತ್ಯದರ್ಶನ
ಬೆಂಗಳೂರು: ಹಂಪಿ ವಿಶ್ವ ವಿದ್ಯಾಲಯದಲ್ಲಿ ನಡೆಯುತ್ತಿರುವ ಹಗರಣಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಪತ್ರದಲ್ಲಿ ಏನಿದೆ?
1991ರಲ್ಲಿ ಹಂಪಿಯಲ್ಲಿರುವ ‘ಕನ್ನಡ ವಿಶ್ವವಿದ್ಯಾಲಯ’ ವನ್ನು ವಿಶೇಷ ನಿಯಮಗಳನ್ನು ರೂಪಿಸಿ ಸ್ಥಾಪಿಸಲಾಗಿದೆ. ನಾಡಿನ ಎಲ್ಲ ವಿಶ್ವವಿದ್ಯಾಲಯಗಳು ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಕಲಿಸುವ ಕೆಲಸ ಮಾಡುತ್ತವೆ ಆದರೆ ಹಂಪಿಯಲ್ಲಿರುವ ಈ ವಿಶ್ವ ವಿದ್ಯಾಲಯವನ್ನು “ಜ್ಞಾನ ಸೃಷ್ಟಿಯ” ಕೆಲಸ ಮಾಡುವ ವಿಶಿಷ್ಟ ಉದ್ದೇಶದಿಂದ ಸ್ಥಾಪಿಸಲಾಗಿದೆ. 1991 ರಿಂದ ಈ ವಿಶ್ವವಿದ್ಯಾಲಯದಲ್ಲಿ ನಾಡಿನ ಅನೇಕ ಧೀಮಂತ ವಿದ್ವಾಂಸರು ಕೆಲಸ ಮಾಡಿದ್ದಾರೆ. ಹಾಗಾಗಿ ಈ ವಿ.ವಿಯಲ್ಲಿ ಅತ್ಯುತ್ತಮ ಕೆಲಸವೂ ಆಗಿದೆ. ವಿಜ್ಞಾನ, ತಾಂತ್ರಿಕ ಶಿಕ್ಷಣವೂ ಸೇರಿದಂತೆ ಅನೇಕ ವಿಷಯಗಳಿಗೆ ಕನ್ನಡದಲ್ಲಿ ಪಠ್ಯ ಪುಸ್ತಕಗಳನ್ನು ರೂಪಿಸುವ ಕೆಲಸವನ್ನೂ ಈ ವಿ.ವಿ ಮಾಡಿದೆ.
ಇಡೀ ದೇಶದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಗುಣಮಟ್ಟ ಕುಸಿದು ಹೋಗುತ್ತಿದೆ ಎಂಬ ಗಂಭೀರ ಆರೋಪ ವಿದ್ವತ್ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಅಪವಾದವೆಂಬಂತೆ ಕನ್ನಡ ವಿಶ್ವವಿದ್ಯಾಲಯವು ಮೌಲ್ಯಯುತ ಸಂಶೋಧನಾ ಕೆಲಸಗಳನ್ನು ಮಾಡುತ್ತಿದೆ. ಆದರೆ ಹಂಪಿಯ ಕನ್ನಡ ವಿಶ್ವ ವಿದ್ಯಾಲಯವೂ ಸೇರಿದಂತೆ ನಾಡಿನ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ಗುಣಮಟ್ಟದ ನೇಮಕಾತಿಗಳು ನಡೆಯದ ಕಾರಣದಿಂದ ಉತ್ತಮ ವಿದ್ವಾಂಸರುಗಳು, ಬೋಧಕರು ಲಭ್ಯವಾಗುತ್ತಿಲ್ಲ. ಉನ್ನತ ಶಿಕ್ಷಣವು ತನ್ನ ಗುಣಮಟ್ಟವನ್ನು ಕಳೆದುಕೊಂಡರೆ, ನಾಡಿನ ಸಮಸ್ತ ವಿಭಾಗಗಳೂ ಕುಸಿದು ಬೀಳುತ್ತವೆ. ಉನ್ನತ ಶಿಕ್ಷಣ ಸರಿಯಾಗಿದ್ದರೆ ಮಾತ್ರ ಉತ್ತಮ ಪ್ರಾಥಮಿಕ, ಪ್ರೌಢ ಶಿಕ್ಷಣ ಸಿಗಲು ಸಾಧ್ಯ. ಜ್ಞಾನವಂತ, ಸೂಕ್ಷ ಮತ್ತು ಮಾನವೀಯ ಸಂವೇದನೆಯ ಸಮಾಜದ ನಿರ್ಮಾಣದಲ್ಲಿ ಉನ್ನತ ಶಿಕ್ಷಣದ ಪಾತ್ರ ಬಹಳ ದೊಡ್ಡದು. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ವಿಶ್ವವಿದ್ಯಾಲಯವು ಭ್ರಷ್ಟಾಚಾರ, ಕಮಿಷನ್ ದಂಧೆ ಮುಂತಾದ ಕೆಟ್ಟ ಕಾರಣಗಳಿಂದ ಸುದ್ದಿಯಲ್ಲಿದೆ. ತೀವ್ರವಾದ ಹಗರಣಗಳ ಆರೋಪಗಳು ಈ ವಿಶ್ವವಿದ್ಯಾಲಯದ ಘನತೆಯನ್ನು ಗುಡಿಸಿ ಹಾಕುತ್ತಿವೆ.
ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಹಗರಣಗಳು:
ಇತ್ತೀಚೆಗೆ ವಿವಿಯಲ್ಲಿ ಕೆಲವು ಬೋಧಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪತ್ರಿಕೆಗಳ ಪ್ರಕಾರ ಪ್ರತಿ ಹುದ್ದೆಗೆ 50 ಲಕ್ಷ ರೂಪಾಯಿಗಳನ್ನು ನಿಗಧಿಪಡಿಸಿ, ಹರಾಜು ಮಾಡಲಾಗುತ್ತಿದೆಯೆಂದು ವರದಿ ಮಾಡಲಾಗಿದೆ. ಹಣ ಕೊಟ್ಟವರಿಗೆ ಪರೀಕ್ಷೆಗೆ ಮುನ್ನವೆ ಪ್ರಶ್ನೆ ಪತ್ರಿಕೆ ನೀಡಲಾಗುತ್ತಿದೆಯೆಂಬ ಗಂಭೀರ ಆರೋಪಗಳಿವೆಯೆಂದು ಪತ್ರಿಕೆ ವರದಿ ಮಾಡಿದೆ. ವಿಶ್ವವಿದ್ಯಾಲಯಗಳು ಹುದ್ದೆಗಳನ್ನು ಹರಾಜಿಗಿಟ್ಟರೆ ಬಡತನದ ಹಿನ್ನೆಲೆಗಳಿಂದ ಬರುವ ಪ್ರತಿಭಾವಂತರು ಆಯ್ಕೆಯಾಗಲು ಸಾಧ್ಯವೆ? ಪ್ರತಿಭಾವಂತರು ವಿವಿ ಗಳಲ್ಲಿ ಇಲ್ಲವಾದರೆ ಯಾವ ದೇಶವೂ ಉದ್ಧಾರವಾಗಲು ಸಾಧ್ಯವೆ?.
ಕನ್ನಡ ವಿವಿಯು ವಿವಿಧ ಹುದ್ದೆಗಳನ್ನು ತುಂಬಿಸಲು ಹೊರಡಿಸಿರುವ ಅಧಿಸೂಚನೆಯಲ್ಲಿ ಮೀಸಲಾತಿ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ ಎಂಬ ಆರೋಪವಿದೆ. ಜೊತೆಗೆ ಹಿಂದೆ ನೇಮಕವಾದ ಬೋಧಕ, ಬೋಧಕೇತರ ಸಿಬ್ಬಂದಿಗಳ ಪ್ರೊಬೆಷನರಿ ಅವಧಿಯನ್ನು ಘೋಷಿಸಲೂ ಸಹ ಕಮಿಷನ್ ನಿಗಧಿಗೊಳಿಸಲಾಗಿದೆ ಮತ್ತು ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ಆದ್ದರಿಂದ ಕೂಡಲೆ ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಿ ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಬೇಕು. ರಾಜ್ಯದಲ್ಲಿರುವ ಪ್ರತಿಭಾವಂತರ ಪಟ್ಟಿಯನ್ನು ವಿಷಯವಾರು ತಯಾರಿಸಿ ಅವರುಗಳನ್ನು ಯುಜಿಸಿ ನಿಯಮಾವಳಿಗಳಂತೆ ವಿಶ್ವವಿದ್ಯಾಲಯಗಳಿಗೆ ಕರೆತರುವ ಕೆಲಸ ಮಾಡಬೇಕು.
ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಬಳ ನೀಡಲು, ಪಿಂಚಣಿ ನಿಗಧಿಪಡಿಸಲು, ಪಿಂಚಣಿ ಬಿಡುಗಡೆ ಮಾಡಲೂ ಕಮಿಷನ್ ನಿಗಧಿಗೊಳಿಸಲಾಗಿದೆ, ಕಮಿಷನ್ ನೀಡದೆ ಯಾವ ಕಡತಗಳಿಗೂ ಜೀವ ಬರುವುದಿಲ್ಲವೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಕುರಿತಂತೆ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರುಗಳು ವಿಶ್ವ ವಿದ್ಯಾಲಯದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
