ಕೊಪ್ಪಳ :ಆಗಸ್ಟ್ 31 : ಬರ ಪರಿಹಾರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಉನ್ನತ ಶಿಕ್ಷಣ ಸುಧಾರಣೆಗೆ ನಮ್ಮ ಸರ್ಕಾರವು ಬದ್ಧವಾಗಿದೆ ಎಂದು ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತ್ ವತಿಯಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ಆಗಸ್ಟ್ 30ರಂದು ಆಯೋಜಿಸಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ. ಮುಂಬರುವ ದಿನಗಳಲ್ಲಿ ಕೇಂದ್ರದ ಎನ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ಯಲಬುರ್ಗಾ, ಕುಷ್ಟಗಿ, ಕೊಪ್ಪಳ, ಕಾರಟಗಿ ಸೇರಿದಂತೆ ಸುಮಾರು 78 ರಿಂದ 80 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಿ ರೈತರಿಗೆ ಅಗತ್ಯ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಯುವನಿಧಿ ಯೋಜನೆಗಳು ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಳು ನಿರಂತರವಾಗಿ ಜನರಿಗೆ ತಲುಪುತ್ತಿವೆ. ಸಬ್ಸಿಡಿ ಹಾಗೂ ನೇರ ಸೌಲಭ್ಯಗಳಿಗಾಗಿ ಸರ್ಕಾರ ಲಕ್ಷಾಂತರ ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದರು.
ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮುಂದಿನ ಎರಡು ತಿಂಗಳಲ್ಲಿ 3,000 ಸಹಾಯಕ ಪ್ರಾಧ್ಯಾಪಕರನ್ನು ಹಾಗೂ ಸೆಪ್ಟೆಂಬರ್ 5ರೊಳಗೆ 320 ಪ್ರಾಂಶುಪಾಲರನ್ನು ಸಂಪೂರ್ಣ ಪಾರದರ್ಶಕವಾಗಿ ಮೆರಿಟ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ರಾಜ್ಯದಲ್ಲಿ ಸುಮಾರು 249 ನಕಲಿ ಪಿಎಚ್‌ಡಿ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಇಂತಹ ನಕಲಿ ಪ್ರಮಾಣಪತ್ರ ಹೊಂದಿದವರ ವಿರುದ್ಧ ಕ್ರಿಮಿನಲ್ ಕೇಸ್ ಮತ್ತು ಚೀಟಿಂಗ್ ಕೇಸ್ ದಾಖಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇದಲ್ಲದೆ ಬೆಂಗಳೂರಿನಲ್ಲಿ ಐಐಟಿ ಮಾದರಿಯ ವಿಶ್ವವಿದ್ಯಾಲಯ ಸ್ಥಾಪನೆ, ಎಐ ವಿಶ್ವವಿದ್ಯಾಲಯ ಹಾಗೂ ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಆಕರ್ಷಿಸಲು ‘ಗ್ಲೋಬಲ್ ಎಜುಕೇಶನ್ ಸಮ್ಮಿಟ್’ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
*ಕ್ಷೇತ್ರ ಪ್ರವಾಸ:* ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಬಗೆಹರಿಸಲು ಮುಂದಿನ 10 ದಿನಗಳಲ್ಲಿ ಯಲಬುರ್ಗಾ ಕ್ಷೇತ್ರದ ಒಟ್ಟು 36 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ‘ಜನಸಂಪರ್ಕ ಸಭೆ’ಗಳನ್ನು ನಡೆಸಲಾಗುವುದು ಎಂದು ಬಸವರಾಜ ರಾಯರಡ್ಡಿ ಅವರು ತಿಳಿಸಿದರು.

ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಯಾವುದೇ ಕೊರತೆಯಿಲ್ಲ ಎಂಬುದಕ್ಕೆ ಯಲಬುರ್ಗಾದಲ್ಲಿ ರೂ. 31 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆಯೇ ಸಾಕ್ಷಿಯಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿದೆ ಎಂದು ವಿರೋಧ ಪಕ್ಷದವರು ಟೀಕಿಸುತ್ತಾರೆ. ಖಜಾನೆ ಖಾಲಿಯಾಗಿದ್ದರೆ ಇಷ್ಟೊಂದು ದೊಡ್ಡ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಜನರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಮತ್ತೆ ಜನಸಾಮಾನ್ಯರಿಗೆ ತಲುಪಿಸಿ ಅವರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲಾಗುತ್ತಿದೆ ಎಂದರು.
*ಬಸವರಾಜ ರಾಯರಡ್ಡಿ ಅವರ ಅಭಿವೃದ್ಧಿ ಕಾರ್ಯಗಳಿಗೆ ಪ್ರಶಂಸೆ:* ಸಚಿವರಾದ ಬಸವರಾಜ ರಾಯರಡ್ಡಿ ಅವರ ಆಡಳಿತ ದಕ್ಷತೆ ಹಾಗೂ ಅನುಭವ ಅಪಾರವಾಗಿದೆ. ಕುಕನೂರು ಮತ್ತು ಯಲಬುರ್ಗಾ ಭಾಗದಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಜಾಸೌಧ, ಕಲ್ಯಾಣ ಮಂಟಪ ಹಾಗೂ ಶಿಕ್ಷಣ ಸಂಸ್ಥೆಗಳ ಸುಧಾರಣೆ ಮಾಡಿದ್ದಾರೆ. ರಾಜ್ಯ ಬಜೆಟ್ ಮತ್ತು ಆರ್ಥಿಕತೆಯ ಆಳವಾದ ಜ್ಞಾನ ಹೊಂದಿರುವ ರಾಯರಡ್ಡಿ ಅವರು ತಮ್ಮ ಕ್ಷೇತ್ರಕ್ಕೆ ಗರಿಷ್ಠ ಅನುದಾನ ತಂದು ಮಾದರಿ ಕ್ಷೇತ್ರವನ್ನಾಗಿ ರೂಪಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರವು ಸರ್ವರಿಗೂ ಸಮಪಾಲು ಸಮಬಾಳು ಎಂಬ ತತ್ವದಡಿ ಮುನ್ನೆಡೆಯುತ್ತಿದೆ. ವಿಕಾಸಶೀಲ ಹಾಗೂ ಸೌಹಾರ್ದಶೀಲ ಕರ್ನಾಟಕ ನಿರ್ಮಾಣಕ್ಕಾಗಿ ಸಮುದಾಯ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ, ಕ್ರೀಡೆ, ಫಿಟ್‌ನೆಸ್ ಹಾಗೂ ಕೌಶಲ್ಯಾಭಿವೃದ್ಧಿ ಮೂಲಕ ಯುವಜನರನ್ನು ಸಬಲೀಕರಣಗೊಳಿಸಿ, ತಳಮಟ್ಟದ ಆಡಳಿತದಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡುವ ಉದ್ದೇಶದಿಂದ ಭಾರತ್ ಜೋಡೋ ಯುವ ಸಂಘಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದರು.
ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಅವರು ಮಾತನಾಡಿ, ಒಂದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಹೇಗಿರಬೇಕು ಎಂಬುದಕ್ಕೆ ಯಲಬುರ್ಗಾ ಕ್ಷೇತ್ರವೇ ಸಾಕ್ಷಿಯಾಗಿದ್ದು, ಯುವ ರಾಜಕಾರಣಿಗಳು ಸಚಿವ ಬಸವರಾಜ ರಾಯರೆಡ್ಡಿ ಅವರ ಕಾರ್ಯವೈಖರಿಯನ್ನು ಮಾದರಿಯಾಗಿಟ್ಟುಕೊಂಡು ಕಲಿಯಬೇಕು. ಒಂದು ಕ್ಷೇತ್ರದಲ್ಲಿ ಶೈಕ್ಷಣಿಕ, ಕೃಷಿ, ಆರೋಗ್ಯ, ದೇವಾಲಯಗಳು, ಸಮುದಾಯ ಭವನಗಳು, ಶಾಲೆ ಹಾಗೂ ರಸ್ತೆಗಳು ಯಾವ ರೀತಿ ಇರಬೇಕು ಎಂಬುದನ್ನು ನೋಡಲು ಇಡೀ ರಾಜ್ಯದ ಶಾಸಕರು ಹಾಗೂ ನಾಯಕರು ಯಲಬುರ್ಗಾಕ್ಕೆ ಬಂದು ನೋಡಬೇಕು. ಇಲ್ಲಿನ ಪ್ರತಿಯೊಂದು ಕಾಮಗಾರಿಯೂ ಅತ್ಯಂತ ಗುಣಮಟ್ಟದಿಂದ ಕೂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯಲಬುರ್ಗಾ ಪಟ್ಟಣದಲ್ಲಿ ರೂ. 8.50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದ್ದು, ಇದು ಸ್ಥಳೀಯ ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಸಾರ್ವಜನಿಕರಿಗೆ ಕಂದಾಯ, ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಸೇವೆಗಳು ಒಂದೇ ಸೂರಿನಡಿ ದೊರೆಯುವಂತೆ ಮಾಡಲು ರಾಜ್ಯ ಸರ್ಕಾರದ 8 ಕೋಟಿ ಮತ್ತು ಕೆಕೆಆರ್‌ಡಿಬಿಯ 8 ಕೋಟಿ ಅನುದಾನ ಸೇರಿ ರೂ. 16 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗಿನ ಶಾಲೆ-ಕಾಲೇಜುಗಳು, ಕೌಶಲ್ಯ ತರಬೇತಿ ಕೇಂದ್ರಗಳು ಹಾಗೂ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಸಚಿವರು ಒದಗಿಸಿರುವ ಅನುದಾನದಿಂದ ಈ ಕ್ಷೇತ್ರದಲ್ಲಿ ಮೂಲಸೌಕರ್ಯ ಬಲವರ್ಧನೆಗೊಂಡಿದೆ ಎಂದು ಹೇಳಿದರು.

*ಬರ ಪರಿಸ್ಥಿತಿ ಕುರಿತು ವರದಿ:* ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಬೆಳೆ ಹಾನಿಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿದ್ದು, ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಲಾಗಿದೆ. ಈಗಾಗಲೇ ಕುಕನೂರು, ಕನಕಗಿರಿ ಮತ್ತು ಗಂಗಾವತಿ ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ಘೋಷಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಲಬುರ್ಗಾ, ಕೊಪ್ಪಳ, ಕುಷ್ಟಗಿ ಮತ್ತು ಕಾರಟಗಿ ತಾಲೂಕುಗಳನ್ನೂ ಸಹ ಬರಪೀಡಿತ ಪಟ್ಟಿಗೆ ಸೇರಿಸಲು ಪುನಃ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಕೊಪ್ಪಳ ಜಿಲ್ಲಾ ಪೋಲಿಸ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಾಹಿಲ್ ಬಾಗ್ಲಾ, ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪೂರ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಂಜುನಾಥ ಗುಂಡೂರು, ಯಲಬುರ್ಗಾ ತಹಶೀಲ್ದಾರ ಪ್ರಕಾಶ ನಾಸಿ, ತಾ.ಪಂ ಇಓ ನೀಲಗಂಗಾ ಬಬಲಾದ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗೇಶ್ ಸೇರಿದಂತೆ ಇತರೆ ಜನಪ್ರತಿನಿಧಿಗಳು, ಹಲವು ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
*ಕೋಟ್ಯಂತರ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಉದ್ಘಾಟನೆಗೆ ಚಾಲನೆ:* ಯಲಬುರ್ಗಾ ಪಟ್ಟಣದಲ್ಲಿ ರೂ. 850 ಲಕ್ಷಣಗಳ ಅನುದಾನದಲ್ಲಿ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣ ನಿರ್ಮಾಣಕ್ಕೆ ಅಡಿಗಲ್ಲು, ರೂ. 1600 ಲಕ್ಷಣಗಳ ಅನುದಾನದಲ್ಲಿ ಪ್ರಜಾ ಸೌಧ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ, ರೂ. 115 ಲಕ್ಷಣಗಳ ಅನುದಾನದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ ಮೂರ್ತಿ ಪ್ರತಿಷ್ಟಾಪನೆಗೆ ಶಂಕುಸ್ಥಾಪನೆ, ರೂ. 100 ಲಕ್ಷಣಗಳ ಅನುದಾನದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಸಮಾಜ (ಹಿಂದುಳಿದ ಕುರುಬರ ಸಮಾಜ) ಮಂದಿರ ನಿರ್ಮಾಣಕ್ಕೆ ಅಡಿಗಲ್ಲು, ರೂ. 98.4 ಲಕ್ಷಣಗಳ ವೆಚ್ಚದಲ್ಲಿ ನಿರ್ಮಿಸಲಾದ ಸರಕಾರಿ ಪದವಿ ಪೂರ್ವ ಕಾಲೇಜಿನ 4 ಕೊಠಡಿಗಳ ಉದ್ಘಾಟನೆ, ರೂ. 49.5 ಲಕ್ಷಣಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ 2 ಕೊಠಡಿಗಳ ಉದ್ಘಾಟನೆ, ರೂ. 98.4 ಲಕ್ಷಣಗಳ ವೆಚ್ಚದಲ್ಲಿ ನಿರ್ಮಿಸಲಾದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ 4 ಕೊಠಡಿಗಳ ಉದ್ಘಾಟನೆ ಹಾಗೂ ರೂ. 200 ಲಕ್ಷಣಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಸರಕಾರಿ ಉರ್ದು ಪ್ರೌಢ ಶಾಲೆ ಕಟ್ಟಡ ನಿರ್ಮಾಣ ಮತ್ತು ಪಿಠೋಪಕರಣಗಳ ಉದ್ಘಾಟನೆಗೆ ಕಾರ್ಯಕ್ರಮದಲ್ಲಿ ಚಾಲನೆ ದೊರೆಯಿತು.
