Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಟ್ರೆಂಡ್ಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಐಎಂಎ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ; ಸಮಾಜಕ್ಕೆ ಮರಳಿ ಕೊಡುವ ವೈದ್ಯರ ಸೇವೆ ಶ್ಲಾಘನೀಯ ಜಿಲ್ಲಾಧಿಕಾರಿ ಸಿ ಎನ್. ಶ್ರೀಧರ

ಗದಗ  :ಜೂನ್ 16: ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಲ್ಲಿ 10ನೇ ತರಗತಿಯು ಅತ್ಯಂತ ಪ್ರಮುಖ ಘಟ್ಟವಾಗಿದೆ. ಇಡೀ ರಾಜ್ಯದ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಎದುರಿಸುವ ಈ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ನಗರದ ಭಾರತೀಯ ವೈದ್ಯಕೀಯ ಸಂಘ,ಹಾಗೂ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಇವರ ಸಹಯೋಗದಲ್ಲಿ “ಶತಮಾನೋತ್ಸವ ಸಂಭ್ರಮ”ನಿಮಿತ್ಯ ಮಂಗಳವಾರ ಜೂನ್ (16) ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ 2025-26ನೇ ಸಾಲಿನ ಪ್ರತಿಭಾವಂತ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗದಗದ ಐಎಂಎ ಸಂಸ್ಥೆಗೆ 100 ವರ್ಷಗಳಿಗಿಂತಲೂ ಹೆಚ್ಚಿನ ಸುದೀರ್ಘ ಇತಿಹಾಸವಿದೆ. ಅಖಿಲ ಭಾರತ ಐಎಂಎ ಸಂಸ್ಥೆ ಅಸ್ತಿತ್ವಕ್ಕೆ ಬರುವುದಕ್ಕಿಂತ ಎರಡು ವರ್ಷಗಳ ಮುಂಚಿತವಾಗಿಯೇ ಗದಗ್‌ನಲ್ಲಿ ವೈದ್ಯರು ಒಟ್ಟಾಗಿ ಸೇರಿ ಈ ಸಂಸ್ಥೆಯನ್ನು ಕಟ್ಟಿದ್ದರು ಎಂಬುದು ಹೆಮ್ಮೆಯ ಸಂಗತಿ. ಅಂದಿನ ಕಾಲದ ವೈದ್ಯರು ಕೇವಲ ವೃತ್ತಿಗಷ್ಟೇ ಸೀಮಿತವಾಗದೆ, ಸಮಾಜಕ್ಕೆ ಮರಳಿ ಏನನ್ನಾದರೂ ನೀಡಬೇಕು (Giving back to society) ಎಂಬ ದೊಡ್ಡ ದೂರದೃಷ್ಟಿ ಹೊಂದಿದ್ದರು. ಅಂತಹ ಐತಿಹಾಸಿಕ ನೆಲದಲ್ಲಿ ಅಂದಿನಿಂದ ಇಂದಿನವರೆಗೂ ವೈದ್ಯರು ತಮ್ಮ ಸಾಮಾಜಿಕ ಸೇವೆಯ ಪರಂಪರೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ” ಎಂದರು.

“ಸಮಾಜಕ್ಕೆ ಕೊಡುಗೆ ನೀಡುವುದರಲ್ಲಿ ಸಿಗುವ ಆತ್ಮಸಂತೋಷ ಮತ್ತು ಆತ್ಮತೃಪ್ತಿ ಅತ್ಯಂತ ದೊಡ್ಡದು. ಗದಗ್ ಐಎಂಎ ವೈದ್ಯರು ಕೇವಲ ವೈಯಕ್ತಿಕವಾಗಿ ವೃತ್ತಿ ನಡೆಸದೆ, ಒಂದು ಜೀವಂತ ಘಟಕವಾಗಿ ಒಟ್ಟಾಗಿ ಸೇರಿ ನಗರದ ಸುಧಾರಣೆ, ಗ್ರಾಮೀಣ ಆರೋಗ್ಯದ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹತ್ತು ಹಲವು ಯೋಜನೆಗಳ ಮೂಲಕ ಶ್ರಮಿಸುತ್ತಿರುವುದು ಶ್ಲಾಘನೀಯ” ಎಂದು ಕೊಂಡಾಡಿದರು.

ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಲ್ಲಿ 10ನೇ ತರಗತಿಯು ಅತ್ಯಂತ ಪ್ರಮುಖ ಘಟ್ಟವಾಗಿದೆ. ಇಡೀ ರಾಜ್ಯದ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಎದುರಿಸುವ ಈ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. ಸಾಧಕ ವಿದ್ಯಾರ್ಥಿಗಳಿಗೆ ಐಎಂಎ ಸಂಸ್ಥೆಯು ಪ್ರೋತ್ಸಾಹಧನ ನೀಡಿ ಗೌರವಿಸುತ್ತಿರುವುದು, ‘ನಾವು ನಿಮ್ಮ ಸಾಧನೆಯ ಹಾದಿಯಲ್ಲಿ ಜೊತೆಗಿದ್ದೇವೆ’ ಎಂಬ ಧೈರ್ಯ ತುಂಬುವ ಉತ್ತಮ ಕೆಲಸವಾಗಿದೆ” ಎಂದರು.

ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಅವರು, “ನಿಮ್ಮ ಸಾಧನೆಯ ಹಾದಿ ಇಲ್ಲಿಗೇ ಮುಗಿಯಬಾರದು. ಯಶಸ್ಸಿನ ಶಿಖರದಲ್ಲಿ ನಿಮ್ಮ ಸ್ಥಾನವನ್ನು ಸದಾ ಕಾಯ್ದುಕೊಳ್ಳಿ. ನಿಮ್ಮ ಪಕ್ಕದಲ್ಲಿ ಇನ್ನೂ ಹಲವರು ಬಂದು ನಿಂತರೂ ಚಿಂತೆಯಿಲ್ಲ, ಆದರೆ ನೀವು ಸಾಧನೆಯ ಮೊದಲ ಸ್ಥಾನದಿಂದ ಕೆಳಗಿಳಿಯಬೇಡಿ. ನಿಮ್ಮಲ್ಲಿ ಸಾಧನೆಯ ಛಲ ಸದಾ ಜಾಗೃತವಾಗಿರಲಿ” ಎಂದು ಕರೆ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಹಾಗೂ ಕುಲಸಚಿವ ಪ್ರೊ ಡಾ.ಸುರೇಶ ನಾಡಗೌಡರ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕೇವಲ ಅಂಕಗಳನ್ನು ಗಳಿಸುವುದು ಮಾತ್ರ ಮುಖ್ಯವಲ್ಲ. ಅದರೊಂದಿಗೆ ಉತ್ತಮ ನಡತೆ (ಆಟಿಟ್ಯೂಡ್) ಮತ್ತು ಕೃತಜ್ಞತಾ ಭಾವ (ಗ್ರ್ಯಾಟಿಟ್ಯೂಡ್) ಇರಬೇಕು. ನಮ್ಮನ್ನು ಬೆಳೆಸಿದ ಪೋಷಕರಿಗೆ ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಸದಾ ಕೃತಜ್ಞರಾಗಿದ್ದಾಗ ಮಾತ್ರ ಜೀವನದಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲು ಸಾಧ್ಯ” ಎಂದು ಹೇಳಿದರು.

“ಗದಗ ಜಿಲ್ಲೆಯ ವಿವಿಧ ತಾಲೂಕುಗಳ ಶಾಲೆಗಳಲ್ಲಿ ವಿಶೇಷ ಸ್ಥಾನ ಪಡೆದು, ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳ ಸಾಧನೆ ಹೆಮ್ಮೆಯ ವಿಷಯವಾಗಿದೆ. ಇಂದಿನ ದಿನಗಳಲ್ಲಿ ಕೇವಲ ಮೆಡಿಕಲ್ ಅಥವಾ ಇಂಜಿನಿಯರಿಂಗ್ ಕ್ಷೇತ್ರ ಮಾತ್ರವಲ್ಲದೆ ಕಾನೂನು, ಉದ್ಯಮ, ಸಮಾಜ ಸೇವೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರತಿಭಾವಂತರಿಗೆ ಅಪಾರ ಅವಕಾಶಗಳಿವೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಜ್ಞಾನವನ್ನು ವಿಸ್ತರಿಸಿಕೊಂಡು ದೇಶದ ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸಬೇಕು” ಎಂದು ಕರೆ ನೀಡಿದರು.

“ಇಂದಿನ ಜಾಗತೀಕರಣದ ಯುಗದಲ್ಲಿ ಕೇವಲ ಅಂಕಗಳು ಅಥವಾ ಪದವಿ ಪ್ರಮಾಣ ಪತ್ರಗಳಿದ್ದರೆ ಸಾಲದು, ಉತ್ತಮ ಉದ್ಯೋಗ ಗಿಟ್ಟಿಸಿಕೊಳ್ಳಲು ಕೌಶಲ್ಯಗಳು ಹಾಗೂ ಸಂವಹನ ಕಲೆ ಅತ್ಯಗತ್ಯ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಿಂದ ಬಂದು, ಮಾತೃಭಾಷೆಯಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಅಪಾರ ಜ್ಞಾನವಿದ್ದರೂ, ಸಂವಹನ ಕಲೆಯ ಕೊರತೆಯಿಂದಾಗಿ ಹಿಂಜರಿಯುತ್ತಾರೆ. ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳ ಮೇಲೆಯೂ ಪ್ರಭುತ್ವ ಸಾಧಿಸಿ, ತಮ್ಮ ಸಂವಹನ ಕಲೆಯನ್ನು ಉತ್ತಮ ಪಡಿಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದೆ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಯಲ್ಲಿ ಅತಿ ಹೆಚ್ಚು ಅಂಕ ಪಡೆದು ಜಿಲ್ಲೆ ಹಾಗೂ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು.

ವೆಂಕಟೇಶ ಆಲ್ಕೋಡ ಹಾಗೂ ತಂಡದಿಂದ ನಾಡಗೀತೆ ಪ್ರಸ್ತುತ ಪಡಿಸಿದರು. ಐಎಂಎ ಅಧ್ಯಕ್ಷ ಡಾ.ಶ್ರೀಧರ ಕುರಡಗಿ ಅವರು ಸರ್ವರನ್ನು ಸ್ವಾಗತಿಸಿದರು. ಅಕ್ಷತಾ ಕಟ್ನಳ್ಳಿಮತ್ತು ಶಿವಕುಮಾರ ಹೊಸಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಐಎಂಎ ಶತಮಾನೋತ್ಸವದ ಅಧ್ಯಕ್ಷ ಎಸ್.ಆರ್.ನಾಗನೂರು, ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಡಾ. ಪವನ್ ಪಾಟೀಲ ಹಾಗೂ ಐಎಂಎ ಕಾರ್ಯದರ್ಶಿ ಡಾ. ರಾಹುಲ್ ಶಿರೋಳ, ಡಾ.ಪ್ರಭಾ ದೇಸಾಯಿ, ಡಾ.ರೇಷ್ಮಾ ಪದ್ಮಶ್ರೀ ಪುರಸ್ಕೃತ ವಿ.ಆರ್. ಗೌರಿಶಂಕರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರುಡಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ವಿದ್ಯಾರ್ಥಿಗಳ ಗೊಳಿಗೆ ಶಾಶ್ವತ ಪರಿಹಾರ ಸಿಗಲಿ.ಸಾರಿಗೆ ಇಲಾಖೆ ಮೂಗಿಗೆ ತುಪ್ಪ ಸವರದಿರಲಿ.

satyadarshana

ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ.

satyadarshana

ಹಸೆಮಣೆ ಏರಬೇಕಾದ ಯುವಕ ಮಸಣಕ್ಕೆ-ಮದುವೆ ಕಾಗದ ಹಂಚಲು ಹೋದಾಗ ಟ್ರ್ಯಾಕ್ಟರ್ ಡಿಕ್ಕಿ

satyadarshana

Leave a Comment