ಕೊಪ್ಪಳ :(ಮೇ.20):ಕೊಪ್ಪಳದ ಹಿರೇಸಿಂದೋಗಿ ಗ್ರಾಮದ ಚನ್ನಳ್ಳ ತುಂಬಿ ಕಾಟ್ರಳ್ಳಿ ಶಾಲೆಗೆ ನೀರು ನುಗ್ಗಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಅದೇ ರೀತಿ ಚಿತ್ರದುರ್ಗ ಹೊರವಲಯದ ಮಲ್ಲಾಪುರ ಕೆರೆ ಭರ್ತಿಯಾಗಿ ಕೋಡಿ ಬಿದ್ದ ಕಾರಣ ಸಮೀಪದ ಸರ್ಕಾರಿ ಶಾಲೆಗೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಸಿದ್ದು, 2 ದಿನ ಶಾಲೆಗೆ ರಜೆ ಘೋಷಿಸಲಾಗಿದೆ.ಎಲ್ಲಿ, ಏನು ಹಾನಿ?
– ಕೊಪ್ಪಳದಲ್ಲಿ ಸಂಗನಾಳ-ಕರಮುಡಿ ಗ್ರಾಮದ ನಡುವಿನ ಸೇತುವೆ ಕೊಚ್ಚಿಹೋಗಿ 4 ಗ್ರಾಮಗಳ ಸಂಪರ್ಕ ಕಡಿತ
– ಮಂಡ್ಯದಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ನಡುವೆ ಸೇತುವೆ ಕೊಚ್ಚಿಹೋಗಿ ವಾಹನ ಸಂಚಾರ ಅಸ್ತವ್ಯಸ್ತ
– ದಾವಣಗೆರೆಯಲ್ಲಿ 2 ಸಾವಿರ ಎಕರೆಗೂ ಹೆಚ್ಚು ಬೆಳೆ ಹಾನಿ; ಪಂಪ್‌ಸೆಟ್ ರಿಪೇರಿಗೆ ಹೋಗಿದ್ದ ಯುವಕ ಸಾವು
– ದಕ್ಷಿಣ ಕನ್ನಡ, ಮಂಡ್ಯ, ಮೈಸೂರು, ಶಿವಮೊಗ್ಗ ಶಾಲೆಗಳಿಗೆ ನಿನ್ನೆ, ಉಡುಪಿ ಶಾಲೆಗಳಿಗೆ ಇಂದು ರಜೆ ಘೋಷಣೆ
– ಚಿತ್ರದುರ್ಗದ ಮಲ್ಲಾಪುರ ಕೆರೆ ಭರ್ತಿಯಾಗಿ ಕೋಡಿ ಬಿದ್ದು ಸಮೀಪದ ಶಾಲೆಗೆ ನುಗ್ಗಿದ ನೀರು; ಶಾಲೆಗೆ 2 ದಿನ ರಜೆ
ಮಳೆಯಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ, ಮಂಡ್ಯ, ಮೈಸೂರು, ಶಿವಮೊಗ್ಗದಲ್ಲಿ ಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿತ್ತು. ಉಡುಪಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಶುಕ್ರವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ರಸ್ತೆ ಮಧ್ಯೆ ಮಗುಚಿದ ಲಾರಿ:
ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ಉರುಳಿದ ಪರಿಣಾಮ ಮಡಿಕೇರಿ-ಕುಶಾಲನಗರ ಹೆದ್ದಾರಿಯ ಸಿಂಕೋನ ಬಳಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಒಂದು ಗಂಟೆಗಳ ಕಾಲ ರಸ್ತೆ ಬಂದ್ ಆಗಿದ್ದರಿಂದ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲು ನಿಂತಿದ್ದವು.
635 ಹೆಕ್ಟೇರ್ ಬೆಳೆ ಹಾನಿ: ಅಶೋಕ್
ಪೂರ್ವ ಮುಂಗಾರು ಮಳೆಯಿಂದ ರಾಜ್ಯದಲ್ಲಿ 23 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಈವರೆಗೆ ರಾಜ್ಯದಲ್ಲಿ 204 ಹೆಕ್ಟೇರ್ ಕೃಷಿ ಹಾಗೂ 431 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಬೆಳೆ ಹಾನಿಗೆ ಶೀಘ್ರ ಪರಿಹಾರ ವಿತರಿಸಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ. ಅವರು ಮಳೆ ಅನಾಹುತದ ಬಗ್ಗೆ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು.
