ಬೆಂಗಳೂರು: ಹಿಜಬ್ ತೀರ್ಪು ಪ್ರಕಟಿಸಿದ ಹೈಕೋರ್ಟ್ ನ್ಯಾಯಾಧೀಶರಿಗೆ ತಮಿಳುನಾಡು ಮೂಲದ ಮತೀಯ ಸಂಘಟನೆಯೊಂದು ಕೊಲೆ ಬೆದರಿಕೆ ಹಾಕಿದೆ.
ತೌಹೀದ್ ಜಮಾತ್ ಸಂಘಟನೆ ಬೆದರಿಕೆ ಹಾಕಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಬೆನ್ನಲೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸಂಘಟನೆ ವಿರುದ್ಧ ಪ್ರಕರಣ ದಾಖಲಾಗಿದೆ.
ಜಡ್ಜ್ಗೆ ಬೆದರಿಕೆ ಹಾಕಿದ ಸಂಬಂಧ ತನಿಖೆ ನಡೆಸುವಂತೆ ಒತ್ತಾಯಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಮನವಿ ಮಾಡಿದ್ದಾರೆ.
ತೌಹೀದ್ ಜಮಾತ್ ಸಂಘಟನೆಯ ಮುಖಂಡ ಆರ್.ರೆಹ್ಮತ್ವುಲ್ಲಾ ಮಧುರೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಿಜಬ್ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ ಪರೋಕ್ಷವಾಗಿ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಆಧಾರಿಸಿ ವಕೀಲ, ಸುಧಾ ಕಟ್ವ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 506(ಬೆದರಿಕೆ), 501(1)(ಮಾನಹಾನಿ), 503(ಕ್ರಿಮಿನಲ್ ಬೆದರಿಕೆ), 109(ಪ್ರಚೋದನೆ), 504(ಶಾಂತಿ ಭಂಗ), 505(ಸಾರ್ವಜನಿಕ ಕಿಡಿಗೇಡಿತನ) ಸೇರಿದಂತೆ ವಿವಿಧ ಸೆಕ್ಷನ್ಗಳಲ್ಲಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
