ರೋಣ :- ಗ್ರಾಮ ಪಂಚಾಯತಿ ಅಧ್ಯಕ್ಷರು ಪ್ರಾಮಾಣಿಕತೆ ಯಿಂದ ಅಧಿಕಾರಿಗಳ ಜೊತೆಗೂಡಿ ಕ್ರಿಯಾತ್ಮಕ ವಾಗಿ ಹಾಗೂ ವಿಭಿನ್ನವಾಗಿ ಕೆಲಸ ಮಾಡಿದರೆ ನಿಮ್ಮ ಗ್ರಾಮದ ಜೊತೆಗೆ ದೇಶವೇ ಅಭಿವೃದ್ಧಿ ಹೊಂದಲು ಸಾಧ್ಯ ಅಂತಾ ಪದ್ಮಶ್ರೀ ಪುರಸ್ಕೃತ ಶ್ಯಾಮ ಸುಂದರ ಪಾಲಿವಾಲ ಹೇಳಿದರು.
ರೋಣ ಪಟ್ಟಣದ ತಾಲೂಕ ಪಂಚಾಯತಿ ಸಭಾ ಭವನದಲ್ಲಿ ಜಿಲ್ಲಾ ಪಂಚಾಯತ ಹಾಗೂ ರೋಣ-ಗಜೇಂದ್ರಗಡ ತಾಲೂಕ ಪಂಚಾಯಿತಿ ಸಹಯೋಗದೊಂದಿಗೆ ಗ್ರಾಮ ಪಂಚಾಯತ ಅಧ್ಯಕ್ಷರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಗೆ ನಡೆದ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಾಮ ಅಭಿವೃದ್ಧಿ ಹೊಂದ ಬೇಕಾದರೆ ಗ್ರಾಮದ ಅಧ್ಯಕ್ಷರು ಪ್ರಾಮಾಣಿಕ ಕೆಲಸ ಮಾಡಬೇಕು, ಯಾವಾಗ ನೀವು ಪ್ರಾಮಾಣಿಕ ಕೆಲಸ ಮಾಡುತ್ತಿರೋ ಅವಾಗ ದೇವರಿಗೂ ಸಹ ಹೆದರುವ ಅವಶ್ಯಕತೆ ಇಲ್ಲಾ ಎಂದರು.
ಮೂಲತಃ ರಾಜಸ್ತಾನ ರಾಜ್ಯದ ಉದಯಪುರ ಜಿಲ್ಲೆಯ ಪಿಪಲಾಂತ್ರಿ ಗ್ರಾಮ ಪಂಚಾಯತಿ
ಅಧ್ಯಕ್ಷ ರಾಗಿರುವ ಶ್ಯಾಮಸುಂದರ ಪಾಲಿಮಾರ ಅವರು 30 ವರ್ಷಗಳ ಅವಧಿಯಲ್ಲಿ ಹೆಣ್ಣು ಬ್ರೂಣ ಹತ್ಯೆ, ನೀರಿನ ಸಂರಕ್ಷಣೆ, ಪರಿಸರ ಸಂರಕ್ಷಣೆ ಕುರಿತು ಗ್ರಾಮದಲ್ಲಿ ಸಾಕಷ್ಟು ಕೆಲಸ ಮಾಡಿ ಮಹತ್ವದ ಬದಲಾವಣೆ ಪಡೆದುಕೊಂಡ ದೇಶದ ಪ್ರತಿಷ್ಠಿತ
ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡು ಜನಪ್ರಿಯತೆ ಪಡೆದುಕೊಂಡಿರುತ್ತಾರೆ.
ಕಾರ್ಯಕ್ರಮ ದಲ್ಲಿ ಗ್ರಾಪಂ ಅಧ್ಯಕ್ಷರ ಜೊತೆಗೆ ಸಮಾಲೋಚನೆ ಹಾಗೂ ಸಂವಾದ ನಡೆಸಿ ಮಾತನಾಡಿದ ಅವರು ನಮ್ಮ ಪಿಪಲಾಂತ್ರಿ
ಗ್ರಾಮದಲ್ಲಿ ಹೆಣ್ಣು ಮಗು ಹುಟ್ಟಿದರೆ 111 ಗಿಡಗಳನ್ನು ನೆಡುವ ಮೂಲಕ ಹಬ್ಬದ ವಾತಾವರಣ ಏರ್ಪಡಿಸುತ್ತೇವೆ. ಅದಕ್ಕೆ ಮುಖ್ಯ ಕಾರಣ ಪರಿಸರ ಸಂರಕ್ಷಣೆ ಜೊತೆಗೆ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟವದು ನಮ್ಮ ಪ್ರಮುಖ ಗುರಿಯಾಗಿತ್ತು, ಜೊತೆಗೆ ಪಿಪಲಾಂತ್ರಿ ಗ್ರಾಮದಲ್ಲಿ ಸರ್ಕಾರದ ಯೋಜನೆಗಳನ್ನು ಬಳಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ.ಪರಿಸರ ಸಂರಕ್ಷಣೆ ಯಾವ ಪ್ರಮಾಣದಲ್ಲಿ ಆಗಿದೆ ಅಂದರೆ ಗ್ರಾಮದಲ್ಲಿ ಮೊದಲು 2000 ಅಡಿ ಕೊರಸಿದಾಗ ನೀರು ಬರುತ್ತಿತ್ತು ಸದ್ಯ 15 ರಿಂದ 20 ಅಡಿಗೆ ನೀರು ಬರುತ್ತದೆ ಅಷ್ಟರ ಮಟ್ಟಿಗೆ ಪರಿಸರದ ಜೊತೆಗೆ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದರು.
ಪ್ರತಿ ಗ್ರಾಮ ಪಂಚಾಯತಿ ಅಧ್ಯಕ್ಷರು ಒಂದು ರೂಪಾಯಿ ಮನೆಯಿಂದ ಒಯ್ಯಲುಬಾರದು, ಗ್ರಾಮ ಪಂಚಾಯತ ಯಿಂದ ಬರುವಾಗ ತರಲುಬಾರದು, ಸರ್ಕಾರದ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಪ್ರಾಮಾಣಿಕ ಕೆಲಸ ಮಾಡಿದರೆ ನಿಮ್ಮ ಗ್ರಾಮದಲ್ಲಿ ಎನಾದರೂ ಅಭಿವೃದ್ಧಿ ಮಾಡಲು ಸಾಧ್ಯ ಎಂದರು.
ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಸಿ.ಆರ್.ಮುಂಡರಗಿ ಮಾತನಾಡಿ ಪ್ರತಿ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಹಲವು ರಸ್ತೆ , ಸಮುದಾಯ ಭವನ ಸೇರಿದಂತೆ ಹಲವಾರು ಕೆಲಸ ಎಲ್ಲರೂ ಮಾಡುತ್ತಾರೆ. ಆದರೆ ನೀವು ಮಾಡಿದ ಕೆಲಸ ನಿಮಗೆ ತೃಪ್ತಿ ಕೊಡಬೇಕು ಜೊತೆಗೆ ಮುಂದಿನ ದಿನಗಳಲ್ಲಿ ಅದು ನಾನು ಮಾಡಿದ ಕೆಲಸ ಇದು ಅಂತಾ ಹೇಳುವ ಹಾಗೆ ಆಗಬೇಕು ಎಂದರು. ಉದಾಹರಣೆಗೆ
ಸಾಲು ಮರದ ತಿಮ್ಮಕ್ಕ ತಮ್ಮ ಕೆಲಸವನ್ನು ತಾವು ಮಾಡಿದ್ದಾರೆ, ಆದರೆ ಕೆಲಸ ಅವರನ್ನು ಗುರುತಿಸಿದೆ. ಹಾಗೆ ನೀವು ಸಹ ಉತ್ತಮ ಕೆಲಸ ಮಾಡುವ ಮೂಲಕ ನಿಮ್ಮನ್ನು ಗುರುತಿಸಿಕೊಳ್ಳಿ ಎಂದರು.
ರೋಣ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ರವಿ.ಎ.ಎನ್ ಮಾತನಾಡಿ ಇಂದಿನ ಕಾರ್ಯಕ್ರಮ ಸಮಾಲೋಚನೆ ಮೂಲಕ ಮಾಡಿದ್ದು ಸ್ಪೂರ್ತಿ ತಂದಿದೆ, ಮನುಷ್ಯನಿಗೆ ಸ್ಪೂರ್ತಿ ಬೇಕು. ಇವತ್ತು ಡಾ. ಶ್ಯಾಮ ಸುಂದರ ಅವರ ಮೂಲಕ ನಾವೆಲ್ಲರೂ ಸ್ಪೂರ್ತಿ ಹೊಂದಿದ್ದೇವೆ. ಕೇವಲ ಗ್ರಾಮ ಪಂಚಾಯತಿ ಅಲ್ಲಿ ಕೆಲಸ ಮಾಡಿದ್ದಕ್ಕೆ ಪದ್ಮಶ್ರೀ ಸಿಗಲಿಕ್ಕಿಲ್ಲಾ. ಅವರು ಪರಸರದ ಜೊತೆಗೆ ಸ್ತ್ರೀಯನ್ಮು ಜೊತೆ ಗೂಡಿಸಿ ಕೆಲಸ ಮಾಡಿ ಪರಿಸರ ಹಾಗೂ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಳ್ಳಿಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬೇಕು, ನನ್ನ ಊರಿಗೆ ಯಾವ ಕಾಮಗಾರಿ ಬೇಕು, ಯಾವುದು ಅವಶ್ಯಕತೆ ಇದೆ ಅಂತಾ ಅಧ್ಯಕ್ಷರು ಪರಿಶೀಲಿಸಿ ಅದನ್ನ ಮಾಡದಾಗ ಯಶಸ್ಸು ಸಿಗುತ್ತದೆ ಎಂದರು.
ಜಿಲ್ಲಾ ಪಂಚಾಯತ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಕಿರಣ ಕುಮಾರ ಎಸ್.ಎಚ್ ಮಾತನಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೇಂದ್ರ ಹಾಗು ರಾಜ್ಯ ಸರಕಾರದ ಹಲವಾರು ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ನೀವು ಸಹ ವಿಶೇಷ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಹೆಸರು ಮಾಡಲು ಹೇಳಿದರು.
ಗಜೇಂದ್ರಗಡ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಡಿ.ಮೊಹನ, ಗದಗ ತಾಲೂಕ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಯ್ಯ, ರೋಣ ತಾಲೂಕ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್. ಬಿಳಗಿ, ತಾಲೂಕ ಪಂಚಾಯತ ಯೋಜನಾಧಿಕಾರಿ ಸಿ.ಎಸ್.ನಿಲಗುಂದ, ರೋಣ ತಾಪಂ ಸಹಾಯಕ ನಿರ್ದೇಶಕ ( ಗ್ರಾ. ಊ) ರಿಯಾಜ್ ಖತೀಬ್, ತಾಪಂ ಸಿಬ್ಬಂದಿಗಳು ಹಾಗೂ ನರೇಗಾ ಸಿಬ್ಬಂದಿಗಳು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಜರಿದ್ದರು.
