ಗದಗ ( ಸತ್ಯದರ್ಶನ )ನವಂಬರ್ 15: ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿ ಪ್ರಕಟಣೆ ಕುರಿತು ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 8 ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ತಿಳಿಸಿದರು
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಕರಡು ಮತದಾರರ ಪಟ್ಟಿ ಕುರಿತು ಜರುಗಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕರಡು ಮತದಾರರ ಯಾದಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಹಶೀಲ್ದಾರರ ಕಚೇರಿ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ವೆಬ್ ಸೈಟ್ www.ceokarnataka.kar.nic.in ರಲ್ಲಿ ಪ್ರಕಟಿಸಲಾಗಿದೆ. ಕರಡು ಮತದಾರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು VHA Mobile App ಮುಖಾಂತರ ಅಥವಾ www.nvsp.in ಮುಖಾಂತರ ಅಥವಾ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ), ಉಪವಿಭಾಗಾಧಿಕಾರಿಗಳ ಕಾರ್ಯಾಲಯ ( ಇಆರ್‍ಓ), ಸಂಬಂಧಪಟ್ಟ ತಹಶೀಲ್ದಾರರ ಕಾರ್ಯಾಲಯಗಳಲ್ಲಿ (ಎಇಆರ್‍ಓ ) ಸ್ವೀಕರಿಸಲಾಗುವುದು. ಈ ಬಗ್ಗೆ ರಾಜಕೀಯ ಪಕ್ಷದ ಪ್ರತಿನಿಧಿಗಳು ಆಕ್ಷೇಪಣೆಗಳಿದ್ದಲ್ಲಿ ಲಿಖಿತವಾಗಿ ಸಲ್ಲಿಸಬೇಕು ಎಂದರು. 
ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ. ಮಾತನಾಡಿ ಜಿಲ್ಲಾಡಳಿತದಿಂದ ನವೆಂಬರ್ 20, ಡಿಸೆಂಬರ್ 3 ಹಾಗೂ 4 ರಂದು ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ವಿಶೇಷ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಅರ್ಹ ನಾಗರಿಕರು ಹಾಗೂ 18 ವರ್ಷ ವಯೋಮಾನದ ಯುವ ಮತದಾರರು ತಮ್ಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ನಮೂನೆ 6 ರಲ್ಲಿ ಸಂಬಂಧಿಸಿದ ಬಿ.ಎಲ್.ಓಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ . ಈ ಅವಕಾಶವನ್ನು ಜಿಲ್ಲೆಯ ಅರ್ಹ ಯುವಕರು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬಹುದು .
ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ನಮೂನೆ 7 ರಲ್ಲಿ ಅರ್ಜಿ ಸಲ್ಲಿಸಬೇಕು. ಮತದಾರರ ನಿವಾಸ ಬದಲಾವಣೆಯಿದ್ದಲ್ಲಿ (ಮತದಾರ ಪಟ್ಟಿಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸ್ಥಳಾಂತರವಾಗಿದ್ದಲ್ಲಿ) ಪ್ರಸ್ತುತ ಮತದಾರರ ಪಟ್ಟಿಯಲ್ಲಿರುವ ನಮೂದುಗಳ ಸರಿಪಡಿಸಬೇಕಾಗಿದ್ದಲ್ಲಿ, ಯಾವುದೇ ತಿದ್ದುಪಡಿಗಳಿಲ್ಲದೇ ಬದಲಿ ಮತದಾರರ ಗುರುತಿನ ಚೀಟಿ (ಎಪಿಕ) ಅವಶ್ಯಕತೆ ಇದ್ದಲ್ಲಿ ಅಥವಾ ಅಂಗವಿಕಲ ವ್ಯಕ್ತಿ ಎಂದು ಗುರುತಿಸುವುದಕ್ಕೆ ಮನವಿ ಸಲ್ಲಿಸಬೇಕಾಗಿದ್ದಲ್ಲಿ ನಮೂನೆ 8 ರಲ್ಲಿ ಮೇಲ್ಕಾಣಿಸಿದ ಅವಧಿಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದರು.
ಉಪವಿಭಾಗಾಧಿಕಾರಿ ಅನ್ನಪೂರ್ಣ ಎಂ. ಮಾತನಾಡಿ ದಿ: 1-1-2023 ಕ್ಕೆ 18 ವರ್ಷ ಪೂರ್ಣಗೊಂಡಿರುವವರು ಮತದಾರರ ಯಾದಿಗಳಲ್ಲಿ ಹೆಸರು ಇಲ್ಲದವರು ಈ ಅವಧಿಯಲ್ಲಿ ತಮ್ಮ ಹೆಸರುಗಳನ್ನು ನಮೂನೆ ನಂ.6 ರಲ್ಲಿ ಸಲ್ಲಿಸಬಹುದು. 2023 ನೇ ವರ್ಷದ ಅರ್ಹತಾ ದಿನಾಂಕಗಳಾದ 1 ನೇ ಎಪ್ರಿಲ್ , 2023 , 1 ನೇ ಜುಲೈ 2023 ಅಥವಾ 1 ನೇ ಅಕ್ಟೋಬರ್ 2023 ನೇದ್ದಕ್ಕೆ 18 ವರ್ಷ ವಯಸ್ಸು ಪೂರ್ಣಗೊಳ್ಳುವವರು, ಕರಡು ಮತದಾರ ಪಟ್ಟಿ ಪ್ರಕಟಣೆ ದಿನಾಂಕದಿಂದ ನಮೂನೆ 6 ರಲ್ಲಿ ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ಅರ್ಜಿಗಳನ್ನು ಆಯಾ ತ್ರೈಮಾಸಿಕಗಳಲ್ಲಿ ಅರ್ಹತೆಯನ್ನು ಪರಿಶೀಲಿಸಿ ನಿಯಮಾನುಸಾರ ನೊಂದಣಿ ಮಾಡಿಕೊಳ್ಳಲಾಗುವುದು. ಮತದಾರ ಪಟ್ಟಿಯಲ್ಲಿ ಹೊಸದಾಗಿ ಹೆಸರನ್ನು ಸೇರ್ಪಡೆ ಮಾಡಲು ನಮೂನೆ 6ರಲ್ಲಿ ಅರ್ಜಿ ಸಲ್ಲಿಸುವ ಅರ್ಜಿದಾರರು ಅರ್ಜಿಗೆ ಇತ್ತೀಚಿನ ಪಾಸ್‍ಪೋರ್ಟ ಸೈಜ್ ಫೋಟೋ ಹಾಗೂ ವಿಳಾಸದ ಬಗ್ಗೆ ದಾಖಲೆಗಳು ಹಾಗೂ ವಯಸ್ಸಿನ ಬಗ್ಗೆ ದಾಖಲೆಗಳನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರಡು ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಹಸ್ತಾಂತರಿಸಿ ಅವರಿಗೆ ತಿಳುವಳಿಕೆ ನೀಡಲಾಯಿತು.
ಸಭೆಯಲ್ಲಿ ಮುಂಡರಗಿ ತಹಶೀಲ್ದಾರ ಶೃತಿ, ಚುನಾವಣಾ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು ಇದ್ದರು.
