Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಗದಗ ಜಿಲ್ಲಾ ವಿಪತ್ತು ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸಮೀಕ್ಷೆ ನಡೆಸಿ ಪರಿಹಾರ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ

ಗದಗ : ಸೆಪ್ಟೆಂಬರ್ 7: ಜಿಲ್ಲಾದ್ಯಂತ ಅತಿಯಾದ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು ಈ ಪ್ರವಾಹ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಿಭಾಯಿಸುವಂತೆ ಜಿಲ್ಲಾ ವಿಪತ್ತು ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
           ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಮಂಗಳವಾರ ಸಂಜೆ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅತಿಯಾದ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ರಸ್ತೆ , ಕೆರೆ, ಕಟ್ಟಡ, ಮನೆ, ಬೆಳೆ ಹಾನಿಗೊಳಗಾಗಿವೆ. ಅವುಗಳನ್ನು ಎಸ್.ಡಿ.ಆರ್.ಎಫ್. ಹಾಗೂ ಎನ್.ಡಿ.ಆರ್.ಎಫ್.ಮಾರ್ಗಸೂಚಿಗಳನ್ವಯ ಸಮೀಕ್ಷೆ ನಡೆಸಿ ಪರಿಹಾರ ಕಾರ್ಯ ಕೈಗೊಳ್ಳಲು ಸೂಚಿಸಿದರು.
         ಪ್ರತಿ ತಾಲೂಕಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದ್ದು, ನಿಯೋಜಿತ ಅಧಿಕಾರಿಗಳು ತಮ್ಮ ವ್ಯಾಪ್ತಿಯ ತಾಲೂಕಿನಲ್ಲಿ ತಾಲೂಕಾ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕು. ಈ ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಕಾಳಜಿ ತೋರುವ ಇಲಾಖಾಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
         ತಾಲೂಕಾಡಳಿತಗಳು ಪ್ರವಾಹ ಪರಿಸ್ಥಿತಿಯನ್ನು ಅಗ್ನಿಶಾಮಕ ಇಲಾಖೆ, ಪೊಲೀಸ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವಿವಿಧ ಹಂತದ ಅಧಿಕಾರಿ ಸಿಬ್ಬಂದಿಗಳ ಸಮನ್ವಯತೆಯೊಂದಿಗೆ ನಿರ್ವಹಿಸಬೇಕು. ಎಲ್ಲ ನೌಕರರು ಕೇಂದ್ರ ಸ್ಥಾನದಲ್ಲಿದ್ದು ಪ್ರವಾಹ ಪರಿಸ್ಥಿತಿ ನಿಭಾವಣೆಗೆ ಸಿದ್ಧರಿರುವುದರೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದರು.
         ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಶೀಲಾ ಬಿ. ಮಾತನಾಡಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಳೆಯಿಂದಾಗಿ ಕಟ್ಟಿದ ಚರಂಡಿಗಳ ಸ್ವಚ್ಛತೆ ಮಾಡುವುದರ ಮೂಲಕ ಮಳೆ ನೀರು ಸರಾಗವಾಗಿ ಮುಂದೆ ಸಾಗಲು ಅನುವು ಮಾಡಬೇಕು. ಪ್ರವಾಹಕ್ಕೆ ತುತ್ತಾದ ಕುಟುಂಬಗಳನ್ನು ಹತ್ತಿರದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಕಾಳಜಿ ಕೇಂದ್ರಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳು ಇರುವಂತೆ ನಿಯೋಜಿತ ನೋಡಲ್ ಅಧಿಕಾರಿಗಳು ಕ್ರಮ ವಹಿಸಬೇಕು.
        ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಇತರೆ ಇಲಾಖಾಧಿಕಾರಿಗಳು ತಾಲೂಕಾ ಆಡಳಿತಗಳೊಂದಿಗೆ ಸಮನ್ವಯತೆ ಸಾಧಿಸಿ ನಿರಂತರ ಸಂಪರ್ಕದಲ್ಲಿದ್ದು ಪ್ರವಾಹ ಪರಿಸ್ಥಿತಿ ಎದುರಿಸಬೇಕು. ಎಲ್ಲ ಹಂತದ ಅಧಿಕಾರಿಗಳು ಪರಿಸ್ಥಿತಿಗನುಗುಣವಾಗಿ ಕರ್ತವ್ಯ ಪ್ರಜ್ಞೆ ಹೊಂದಬೇಕು. ಯಾವುದೇ ತರಹದ ಅವಘಡ ಅಥವಾ ಪರಿಸ್ಥಿತಿ ನಿಭಾಯಿಸಲು ತಕ್ಷಣ ದೂರವಾಣಿಗೆ ಲಭ್ಯವಿರುವಂತೆ ಸೂಚಿಸಿದರು.
      ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಶಿವಪ್ರಕಾಶ ದೇವರಾಜ ಮಾತನಾಡಿ ಮಾನವ ಜೀವ ಸಂರಕ್ಷಣೆ ಪ್ರಥಮಾದ್ಯತೆಯಾಗಿರಬೇಕು. ನಂತರ ಜಾನುವಾರು, ಆಸ್ತಿ ಸಂರಕ್ಷಣೆ ನಂತರದ್ದಾಗಿರಬೇಕು. ಯಾವುದೇ ಪರಿಸ್ಥಿತಿಯಲ್ಲೂ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಸಾರ್ವಜನಿಕರಿಗೆ ಸ್ಪಂದಿಸಬೇಕು. ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಎಲ್ಲ ಇಲಾಖಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿದ್ದು ಕಾರ್ಯ ನಿರ್ವಹಿಸಲು ತಿಳಿಸಿದರು.
        ಸಭೆಯಲ್ಲಿ ತಾಲೂಕಾವಾರು ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲಾಯಿತು.
ರೋಣ: ಹೊಳೆಆಲೂರ- ಮೆಣಸಗಿ, ನರಗುಂದ-ರೋಣ, ಸವಡಿ-ಗದಗ, ರಸ್ತೆಗಳು ಪ್ರವಾಹದಿಂದಾಗಿ ತಾತ್ಕಾಲಿಕ ಸ್ಥಗಿತಗೊಂಡಿವೆ. ಸಂದಿಗವಾಡದಲ್ಲಿ ಕಾಳಜಿಕೇಂದ್ರ ತೆರೆಯಲಾಗಿದೆ.
ಗಜೇಂದ್ರಗಡ: ಮುಶಿಗೇರಿಯಲ್ಲಿ ಕೆರೆ ಉಕ್ಕಿ ನೀರು ಹರಿದು ಮನೆಗಳಿಗೆ ನುಗ್ಗಿದ್ದು ತಾತ್ಕಾಲಿಕ ವ್ಯವಸ್ತೆ ಮಾಡಲಾಗಿದೆ. ಅದರಂತೆ ಲಕ್ಕನಕಟ್ಟಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಸಿಡಿಲಿಗೆ ಒಂದು ಆಕಳು ಬಲಿಯಾಗಿದ್ದು ತಾಲೂಕಿನಲ್ಲಿ 25 ಅಧಿಕ ಮನೆಗಳು ಭಾಗಶ: ಹಾನಿಗೊಳಗಾಗಿವೆ.
ಲಕ್ಷ್ಮೇಶ್ವರ :ಮಾಡಳ್ಳಿ ಬಿಡ್ಜ್ ಸಂಚಾರ ಸ್ಥಗಿತವಾಗಿತ್ತು. ಯತ್ನಳ್ಳಿಯಲ್ಲಿ 60 ರಿಂದ 70 ಮನೆಗಳಿಗೆ ನೀರು ನುಗ್ಗಿತ್ತು. ಬಟ್ಟೂರು ಶೆಟ್ಟಿಕೇರಿಯಲ್ಲಿ ಪ್ರವಾಹದಿಂದಾಗಿ 15 ಕುಟುಂಬಗಳನ್ನು ತಾತ್ಕಾಲಿಕ ಸ್ಥಳಾಂತರಗೊಳಿಸಿದೆ. ಲಕ್ಷ್ಮೇಶ್ವರನಗರದಲ್ಲಿ ಕೆಂಚಲಾಪುರ, ಅಂಬೇಡ್ಕರ್ ನಗರ, ಬಸವೇಶ್ವರ ನಗರದಲ್ಲಿ ರೇಶನ್ ಕಿಟ್‍ಗಳನ್ನು ನೀಡಲಾಗುತ್ತಿದೆ.
ಶಿರಹಟ್ಟಿ: ತಾಲೂಕಿನಾದ್ಯಂತ 87 ಮನೆಗಳು ಭಾಗಶ: ಹಾನಿಗೊಳಗಾಗಿವೆ. ಬನ್ನಿಕೊಪ್ಪದಲ್ಲಿ ಕೋಳಿ ಫಾರ್ಮ ಹಾನಿಗೀಡಾಗಿದೆ. 75 ಮನೆಗಳಿಗೂ ನೀರು ನುಗ್ಗಿತ್ತು. ಮುಂಡರಗಿ: ಡೋಣಿ ಗ್ರಾಮದ 35 ಕ್ಕೂ ಹೆಚ್ಚು ಮನೆಗಳಿಗೆ ಪ್ರವಾಹದಿಂದಾಗಿ ನೀರು ಒಳನುಗ್ಗಿತ್ತು. ಹಳ್ಳಿಕೇರಿ ಗ್ರಾಮದಲ್ಲಿ 1 ಮಾನವ ಜೀವ ಹಾನಿ ಸಂಭವಿಸಿದೆ. ಡಂಬಳದಲ್ಲಿಯೂ ಮನೆಗಳಿಗೆ ನೀರು ನುಗ್ಗಿದ ವರದಿಯಾಗಿದೆ.
ಗದಗ: ಕಲ್ಲೂರು, ಕಣವಿ, ಹರ್ತಿ, ಬೆಳದಡಿಯಲ್ಲಿ ತಗ್ಗುಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದೆ. ತಾಲೂಕಿನಲ್ಲಿ 9 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು 6 ನಗರ ಪ್ರದೇಶ , 3 ಗ್ರಾಮೀಣ ಪ್ರದೇಶದಲ್ಲಿ ತೆರೆದು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಯಾ ತಾಲೂಕಿನ ನೋಡಲ್ ಅಧಿಕಾರಿಗಳು ಹಾಗೂ ತಹಶೀಲ್ದಾರರು ಸಭೆಯ ಗಮನಕ್ಕೆ ತರುವ ಮೂಲಕ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಿದರು. ಬೆಳೆ ಹಾಗೂ ಮನೆ ಹಾನಿ ಕುರಿತಂತೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದ್ದು ಶೀಘ್ರವೇ ಹಾನಿ ಅಂದಾಜಿಸಲಾಗುವುದು ಎಂದರು. 
          ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಡಿಡಿಪಿಐ ಬಸವಲಿಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಕೃಷಿ ಇಲಾಖೆಯ ಉಪನಿರ್ದೇಶಕ ಕರಿಯಪ್ಪ , ಆಹಾರ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ನಗರಾಬಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಕಾರ್ಮಿಕ ಇಲಾಖೆಯ ಅಧಿಕಾರಿ ಸುಧಾ ಗರಗ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ ನುಚ್ಚಿನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಲ್ಲೇದ ಸೇರಿದಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಆಯಾ ತಾಲೂಕಾ ತಹಶೀಲ್ದಾರರು , ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. 
      ಸಭೆಗೂ ಮುನ್ನ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿಗಳು ಜಿಲ್ಲೆಯಾದ್ಯಂತ ಪ್ರವಾಹದಿಂದಾಗಿರುವ ಹಾನಿ ಕುರಿತು ಅವಲೋಕಿಸಲು ಕ್ಷೇತ್ರ ಭೇಟಿ ನಡೆಸಿದರು. ಲಕ್ಷ್ಮೇಶ್ವರ ನಗರ , ಹೊಂಬಳದಲ್ಲಿನ ಬೆಳೆ ಹಾಗೂ ಮನೆ ಹಾನಿ, ಹಿರೇಹಂದಿಗೋಳದಲ್ಲಿನ ರಸ್ತೆಹಾನಿ, ಕುರ್ಲಗೇರಿ ಕೊಣ್ಣೂರು ಗ್ರಾಮಗಳಲ್ಲಿನ ಪ್ರವಾಹದಿಂದಾದ ಹಾನಿ ವೀಕ್ಷಿಸಿ ಸ್ಥಳೀಯ ಹಂತದ ಅಧಿಕಾರಿಗಳು ಪ್ರವಾಹ ಪರಿಸ್ಥಿತಿ ಸಮರ್ಥ ನಿರ್ವಹಣೆಗೆ ನಿರ್ದೇಶನ ನೀಡಿದರು.

Related posts

ಬಾಗಲಕೋಟೆ ಒಟ್ಟು 23 ವಿದ್ಯುತ್ ವಿತರಣಾ ಕೇಂದ್ರ 400 ಕಿ. ವ್ಯಾ. ಸಾಮರ್ಥ್ಯದ ಲೋಕಾಪೂರ ವಿದ್ಯುತ್ ಸ್ವೀಕರಣಾ ಕೇಂದ್ರ

satyadarshana

ಕರ್ತವ್ಯ ಲೋಪ ಮಾಡದೇ ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಇಲಾಖಾಧಿಕಾರಿಗಳು ಕರ್ತವ್ಯ ನಿರ್ವಹಿಸಿ.}ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ

satyadarshana

ಎಲ್ಲಾ ಹಳ್ಳಗಳಿಗೆ ಸಮರ್ಪಕ ಬಸ್ ಬಿಡಲು ಒತ್ತಾಯಿಸಿ ವಿದ್ಯಾರ್ಥಿಗಳು ದಿಢೀರ್ ಹೋರಾಟ

satyadarshana