ಬೆಂಗಳೂರು: ದೇಶದ ಗ್ರಾಮೀಣ ಭಾಗಗಳ ಬದುಕು, ಬವಣೆ ಹಾಗೂ ಸರಕಾರದ ಯೋಜನೆಗಳಿಗೆ ಸಂಬಂಧಿಸಿದ ಸಂಶೋಧನಾತ್ಮಕ ವರದಿಗಳಿಂದ ಗುರುತಿಸಿಕೊಂಡಿರು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರು 'ಬಸವಶ್ರೀ ಪ್ರಶಸ್ತಿ' ವಾಪಸ್ ಮಾಡುವುದಾಗಿ ಘೋಷಿಸಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದಿಂದ 2016ನೇ ಸಾಲಿನ ಬಸವಶ್ರೀ ಪ್ರಶಸ್ತಿಗೆ ಪಿ.ಸಾಯಿನಾಥ್ ಅವರನ್ನು ಆಯ್ಕೆ ಮಾಡಿದ್ದ, ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಿದ್ದರು. ಅವರಿಗೆ ಪ್ರಶಸ್ತಿ ಫಲಕ, ಐದು ಲಕ್ಷ ರೂಪಾಯಿ ಮೊತ್ತದ ಚೆಕ್ ನೀಡಿ ಗೌರವಿಸಲಾಗಿತ್ತು.
ಪೋಕ್ಸೋ ಕಾಯ್ದೆಯಡಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ನ್ಯಾಯಾಲಯವು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ ಬೆನ್ನಲ್ಲೇ ಸಾಯಿನಾಥ್ ಅವರು ಪ್ರಶಸ್ತಿ ವಾಪಸ್ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ.
‘ಶಿವಮೂರ್ತಿ ಮುರುಘಾ ಶರಣರ ಮೇಲೆ ಪ್ರೌಢಶಾಲೆ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಗಳು, ಪೋಕ್ಸೋ ಮತ್ತು ಎಸ್ಸಿ/ಎಸ್ಟಿ ಪ್ರಕರಣಗಳು ದಾಖಲಾಗಿರುವ ಕುರಿತ ಬೆಳವಣಿಗೆಳನ್ನು ಮಾಧ್ಯಮಗಳ ವರದಿಗಳಿಂದ ತಿಳಿದು ಮನಸ್ಸಿಗೆ ಘಾಸಿಯಾಗಿದೆ. ಮಕ್ಕಳ ಮೇಲೆ ಅಂಥ ದೌರ್ಜನ್ಯಗಳನ್ನು ಖಂಡಿಸಲು ಪದಗಳು ಸಾಕಾಗುವುದಿಲ್ಲ. ಈ ಪ್ರಕರಣದಲ್ಲಿ ಸಂತ್ರಸ್ತರ ಪರವಾಗಿ ನ್ಯಾಯಕ್ಕಾಗಿ ನಿಲ್ಲುತ್ತೇನೆ, ಹಾಗೇ 2017ರಲ್ಲಿ ಮಠದಿಂದ ಪ್ರದಾನ ಮಾಡಲಾಗಿದ್ದ ‘ಬಸವಶ್ರೀ ಪ್ರಶಸ್ತಿ’ಯನ್ನು (ಐದು ಲಕ್ಷ ರೂಪಾಯಿ ನಗದು, ಚೆಕ್ ಮೂಲಕ ಬಂದಿದ್ದು) ಹಿಂದಿರುಗಿಸುತ್ತಿದ್ದೇನೆ,’ ಎಂದು ಪಿ.ಸಾಯಿನಾಥ್ ಪ್ರಕಟಿಸಿದ್ದಾರೆ
ಇಂಥ ಪ್ರಕರಣವನ್ನು ಬೆಳಕಿಗೆ ತರಲು ನೆರವಾದ ಮೈಸೂರು ಮೂಲದ ಎನ್ಜಿಒ ‘ಒಡನಾಡಿ’ ಯತ್ನವನ್ನು ಶ್ಲಾಘಿಸಿದ್ದು, ಸಮಗ್ರವಾಗಿ ತನಿಖೆ ನಡೆಸುವಂತೆ ಕರ್ನಾಟಕ ಸರಕಾರವನ್ನು ಆಗ್ರಹಿಸಿದ್ದಾರೆ.
