ಗದಗ -ಸತ್ಯದರ್ಶನ
ಜಿಲ್ಲೆಯ ಸೂಡಿ ಗ್ರಾಮ ಪಂಚಾಯಿತಿಯ ಮುಂದೆ ಇಂದು ಬೆಳಿಗ್ಗೆ ಹಲವಾರು ಮಹಿಳೆಯರು ಜಮಾವಣೆಗೊಂಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಘೇರಾವ್ ಹಾಕಿದ ಘಟನೆ ಜರುಗಿತು .
ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ನೀಡಲು ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವ ರೀತಿಯಲ್ಲಿ ಕೆಲವರಿಗೆ ಮಾತ್ರ ಕೆಲಸ ನೀಡಿ ಬಹುತೇಕರಿಗೆ ಕೆಲಸ ನೀಡದೆ ವಂಚನೆ ಮಾಡುತ್ತಿದ್ದಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.ಕೇವಲ ವಾರ್ಡ್ ನಂಬರ್ 1ರ ಜನರಿಗೆ ಮಾತ್ರ ಕೆಲಸ ನೀಡಿ ವಾರ್ಡ್ ನಂಬರ್ 2ರ ಜನ ಕೆಲಸ ಕೇಳಿದರೆ ನಾಳೆ ನೋಡೋಣ ನಾಡಿದ್ದು ನೋಡೋಣ ಎನ್ನುವ ರೀತಿಯಲ್ಲಿ ಹಾರಿಕೆ ಉತ್ತರ ಗಳನ್ನು ನೀಡುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO)ಇಟಗಿಮಠ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಿಡಿಶಾಪ ಹಾಕಿದರು.
ಜಿಲ್ಲಾದ್ಯಂತವಿರುವ ಗ್ರಾಮಪಂಚಾಯಿತಿಯಲ್ಲಿ 100 ದಿನಗಳ ಕಾಲ ಕೆಲಸ ನೀಡಿ ಗ್ರಾಮಸ್ಥರ ನೆರವಿಗೆ ಧಾವಿಸಿದ್ದಾರೆ ಆದರೆ ಸೂಡಿ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಪಿಡಿಓ ತನಗೆ ತಿಳಿದ ಹಾಗೆ ದರ್ಬಾರ್ ನಡೆಸುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದರು.
ಈ ಸಂದರ್ಭದಲ್ಲಿ ವಾತಾವರಣ ಬಿಗಡಾಯಿಸುತ್ತಿದಂತೆ ಗ್ರಾಮದ ಜನಪ್ರತಿನಿಧಿಗಳಾದ ನಾಗಪ್ಪ ಅರಮನೆ ಮತ್ತು ಚೆನ್ನಪ್ಪ ಎಂಬುವವರು ಆಗಮಿಸಿ ಆಕ್ರೋಶಗೊಂಡಿದ್ದ ಮಹಿಳೆಯರನ್ನು ಸಮಾಧಾನಪಡಿಸಿ ನಾಳೆ ಕೆಲಸ ನೀಡುವ ಭರವಸೆ ನೀಡಿ ಮಹಿಳೆಯರನ್ನು ಮನೆಗೆ ಕಳುಹಿಸಿದರು ಎನ್ನಲಾಗುತ್ತಿದೆ.
ಈ ಕುರಿತು ದೂರವಾಣಿ ಮೂಲಕ ಪತ್ರಿಕೆಯೊಂದಿಗೆ ಮಾತನಾಡಿದ ಪಿಡಿಓ ಇಟಗಿಮಠ ಮಳೆಗಾಲ ಇರುವುದರಿಂದ ಕೆಲಸ ನೀಡಲು ವಿಳಂಬವಾಗುತ್ತಿದೆ ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇನೆ ನಾಳೆ ಎಲ್ಲರಿಗೂ ಕೆಲಸ ನೀಡುವ ಭರವಸೆಯನ್ನು ನೀಡಿದರು.
ವರದಿ :ಮಲ್ಲಪ್ಪ ದೊಡ್ಡಮನಿ.
