ಬೆಳಗಾವಿ .ಡಿ.16.ರಾಜ್ಯದ ಕಾನೂನು ಬಾಹಿರವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದರೆ ತಕ್ಷಣವೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ತಿಳಿಸಿದ್ದಾರೆ. ಪ್ರಶ್ನೋತ್ತರ ಅವಯಲ್ಲಿ ಶಾಸಕ ಬಸವರಾಜ್ ಗದ್ದಲ್ ಅವರು, ಗ್ರಾಮೀಣ ಭಾಗಗಳಲ್ಲಿ ಕಿರಾಣಿ ಮತ್ತು ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಶಿಕ್ಷಣ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಶಾಸಕರಾದ ತುಕರಾಮ್, ರೂಪಾ ಶಿಶಕಲಾ, ನಂಜೇಗೌಡ, ನಾರಾಯಣಸ್ವಾಮಿ ಸೇರಿದಂತೆ ಮತ್ತಿತರ ಶಾಸಕರು ದನಿಗೂಡಿಸಿ, ಗ್ರಾಮೀಣ ಭಾಗಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವವ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದರು.
ಇದಕ್ಕೆ ಗೋಪಾಲಯ್ಯ ಉತ್ತರಿಸಿ, ಗ್ರಾಮೀಣ ಭಾಗಗಳಲ್ಲಿ ಸರ್ಕಾರದ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದರೆ ತಕ್ಷಣವೇ ಕ್ರಮ ಕೈಗೊಳ್ಳುತ್ತೇನೆ. ಈ ಸಂಬಂಧ ಅಕಾರಿಗಳಿಗೂ ಸೂಚನೆ ಕೊಡುವುದಾಗಿ ಹೇಳಿದರು. ಸರ್ಕಾರದಿಂದ ಲೈಸೆನ್ಸ್ ಪಡೆದು ಮಾರಾಟ ಮಾಡಬೇಕು. ಅದನ್ನು ಹೊರತುಪಡಿಸಿ ಚಿಲ್ಲರೆ ಅಂಗಡಿ, ದಿನಸಿ ಅಂಗಡಿಗಳಲ್ಲಿ ಮಾರಾಟ ಮಾಡಲು ಅವಕಾಶವಿಲ್ಲ. ಎಲ್ಲೆಲ್ಲಿ ಇದನ್ನು ಮಾರಾಟ ಮಾಡುತ್ತಿದ್ದಾರೋ ಅವೆಲ್ಲವನ್ನು ಪತ್ತೆಹಚ್ಚಿ ಎಂದು ಅಕಾರಿಗಳಿಗೆ ಸೂಚಿಸಿದರು.
ಸದಸ್ಯರು ಕೆಲವು ಕಡೆ ಮದ್ಯದ ಜೊತೆಗೆ ಕಲಬೆರಕೆಯ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ. ನಾನು ತಕ್ಷಣವೇ ಇದನ್ನು ಪತ್ತೆಹಚ್ಚಲು ಅಕಾರಿಗಳಿಗೆ ಸೂಚಿಸುವೆ. ಅಲ್ಲದೆ ಎಲ್ಲಿ ಅಕ್ರಮವಾಗಿ ಕಲಬೆರಕೆ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೋ ಗೌಪ್ಯವಾಗಿ ನಾನೇ ಖುದ್ದು ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ನಾವು ಎಂಎಸ್‍ಎಲ್ ಇಷ್ಟು ಪ್ರಮಾಣದಲ್ಲಿ ಮದ್ಯ ಮಾರಾಟ ಮಾಡಬೇಕೆಂದು ಗುರಿ ನಿಗದಿಪಡಿಸುತ್ತೇವೆ. ಹಾಗಂತ ಕಾನೂನುಬಾಹಿರವಾಗಿ ಇಲ್ಲವೇ ಗ್ರಾಮೀಣ ಭಾಗಗಳಲ್ಲಿ ಮಾರಾಟ ಮಾಡಬೇಕೆಂದು ಸೂಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಒಟ್ಟು 900 ಎಂಎಸ್‍ಎಲ್ ಮಳಿಗೆಗಳಿವೆ. ಕಳೆದ ಮೂರು ವರ್ಷಗಳಲ್ಲಿ ಸಿಎಲ್9ಗೆ ಮಾತ್ರ ಅವಕಾಶ ಕೊಟ್ಟಿದ್ದೇವೆ. ಸಿಎಲ್7ಗೆ ಅವಕಾಶ ಕೊಟ್ಟಿಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಶಾಸಕ ಬಸವರಾಜ್ ಗದ್ದಲ್ ಮಾತನಾಡಿ, ರಾಯಚೂರು ಗಡಿಭಾಗಗಳಲ್ಲಿ ಎಂಎಸ್‍ಎಲ್ ಮಳಿಗೆಗಳ ಮೂಲಕ ಅಕ್ರಮವಾಗಿ ಮದ್ಯವನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಹಳ್ಳಿಹಳ್ಳಿಗಳಲ್ಲೂ ಕೂಡ ಮಾರಾಟ ಮಾಡುತ್ತಿರುವುದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರಿದೆ.
ನೀವು ಇಷ್ಟು ಪ್ರಮಾಣದಲ್ಲಿ ಮಾರಾಟ ಮಾಡಬೇಕೆಂದು ಗುರಿ ನೀಡುವುದರಿಂದಲೇ ಇಂತಹ ಚಟುವಟಿಕೆಗಳು ನಡೆಯುತ್ತವೆ ಎಂದು ದೂರಿದರು. ಇದಕ್ಕೆ ಶಾಸಕ ನಾರಾಯಣಸ್ವಾಮಿ, ರೂಪಾ ಶಶಿಕಲಾ, ನಂಜೇಗೌಡ ದನಿಗೂಡಿಸಿದರು. ಹಳ್ಳಿಗಳಲ್ಲಿ ಕುಡಿತದ ಪರಿಣಾಮದಿಂದ ಅನೇಕ ಸಂಸಾರಗಳೇ ಹಾಳಾಗಿವೆ. ಅನೇಕರು ಸಾವನ್ನಪ್ಪಿದ್ದಾರೆ. ಸರ್ಕಾರ ಬಿಗಿಯಾದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಗ ಗೋಪಾಲಯ್ಯನವರು ಬಾರ್‍ಗಳಿಗೆ ಲೈಸೆನ್ಸ್ ನೀಡುವಾಗ ಕೆಲವು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಸೂಚನೆ ಕೊಟ್ಟಿರುತ್ತೇವೆ. ಶಿಕ್ಷಣ ಸಂಸ್ಥೆಗಳು, ಶಾಲಾ ಕಾಲೇಜುಗಳು, ಎಸ್ಸಿಎಸ್ಟಿ ಜನಾಂಗ ವಾಸ ಮಾಡುವ ಕಾಲೋನಿಗಳು ಸೇರಿದಂತೆ ಎಲ್ಲರೂ ಈ ನಿಯಮಗಳನ್ನು ಪಾಲನೆ ಮಾಡಬೇಕೆಂದು ಸೂಚಿಸಿದರು. ಒಂದು ವೇಳೆ ರ್ನಿಷ್ಟ ಪ್ರಕರಣಗಳಿದ್ದರೆ ನನ್ನ ಗಮನಕ್ಕೆ ತನ್ನಿ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
