ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ ಆರೋಪದ ಮೇರೆಗೆ ಬಂಧಿಸಲಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಸದ್ಯ ಎನ್‍ಸಿಬಿ ಕಸ್ಟಡಿಯಲ್ಲಿದ್ದಾರೆ. ಪುತ್ರನನ್ನ ಪ್ರಕರಣದಿಂದ ಪಾರು ಮಾಡೋದಕ್ಕೆ ಶಾರುಖ್ ಖಾನ್, ಖ್ಯಾತ ವಕೀಲ ಸತೀಶ್ ಮಾನಶಿಂಧೆ ಮೊರೆ ಹೋಗಿದ್ದಾರೆ.
ಸದ್ಯ ಡ್ರಗ್ಸ್ ಕೇಸಲ್ಲಿ ಅರೆಸ್ಟ್ ಆಗಿರುವ ಆರ್ಯನ್ನನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಈಗ ವಿಚಾರಣೆ ನಡೆಸಿದ ಕೋರ್ಟ್ ಒಂದು ದಿನ ಎನ್‍ಸಿಬಿ ಪೊಲೀಸ್ ಕಸ್ಟಡಿಗೆ ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಸೇರಿ ಒಟ್ಟು 8 ಮಂದಿಯನ್ನ ಎನ್‍ಸಿಬಿ ಪೊಲೀಸರು ಬಂಧಿಸಿದ್ದಾರೆ.
ಸದ್ಯ ಡ್ರಗ್ಸ್ ಪಾರ್ಟಿಗೂ ಆರ್ಯನ್ ಖಾನ್‌ಗೂ ಯಾವುದೇ ಸಂಬಂಧವಿಲ್ಲ ಅಂತ ವಾದ ಮಂಡಿಸಿ, ಮೊದಲ ದಿನದಲ್ಲೇ ಶಾರುಖ್ ಕುಟುಂಬಕ್ಕೆ ಸತೀಶ್ ಮಾನಶಿಂಧೆ ಒಂದು ಹಂತದ ಗೆಲುವು ತಂದುಕೊಟ್ಟಿದ್ದಾರೆ. ನಿನ್ನೆ ಸಂಜೆ ನ್ಯಾಯಾಲಯಕ್ಕೆ ಶಾರುಖ್ ಪುತ್ರನನ್ನ ಹಾಜರುಪಡಿಸಿದಾಗ, ಅವರ ವಕೀಲ ಸತೀಶ್ ಮಾನಶಿಂಧೆ ಆರ್ಯ್ನ್ ಖಾನ್ ಕ್ರೂಸ್ನಲ್ಲಿ ನಡೆದ ಪಾರ್ಟಿಗೆ ಒಬ್ಬ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದು ಅವರನ್ನ ಎರಡೆರಡು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವಾದಿಸಿದ್ದಾರೆ.
ಈ ವೇಳೆ ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಧಿಕಾರಿಗಳು ಅವರ ಲಗೇಜ್ ಜೊತೆಗೆ ಸ್ನೇಹಿತರನ್ನೂ ಪರೀಕ್ಷಿಸಿದ್ದಾರೆ. ಯಾವುದೇ ಮಾದಕ ವಸ್ತುವಿನ ಕುರಿತಾಗಿ ಮಾಹಿತಿ ಲಭ್ಯವಾಗಿಲ್ಲ ಎಂದು ಮಾನಶಿಂಧೆ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.
