ಸುದ್ದಿಮೂಲ ಸತ್ಯದರ್ಶನ
2023ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ದಲಿತರಿಗೆ ಸಿಎಂ ಸ್ಥಾನ ಒಲಿಯಬಹುದೆಂಬ ಕನಸು ಮೂಡಿದೆಯಂತೆ. ಈಗಾಗಲೇ ಕಾಂಗ್ರೆಸ್ ವಿರುದ್ಧ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲಾಗಿದೆ ಎಂಬ ಆರೋಪವಿದೆ. ಸ್ವತಃ ದಲಿತ ಸಮುದಾಯದ ಮತಗಳು ಬೇಸರಗೊಂಡು ಬೇರೆ ಪಕ್ಷಗಳತ್ತ ವಾಲಿವೆ ಎನ್ನಲಾಗಿದೆ.
ಈ ಹಿಂದೆ ಡಾ.ಜಿ ಪರಮೇಶ್ವರ್ ಸಿಎಂ ಗಾದಿಯ ಪ್ರಬಲ ಆಕಾಂಕ್ಷಿಯಾಗಿದ್ದರು. ಪರಮೇಶ್ವರ್ ಎಂಟು ವರ್ಷಗಳ ಕಾಲ ಸತತ ಕೆಪಿಸಿಸಿ ಸಾರಥ್ಯ ನಿಭಾಯಿಸಿದ್ದರು. ಅದೇ ಕಾರಣಕ್ಕೆ ದಲಿತ ಸಮುದಾಯಗಳು ಪರಮೇಶ್ವರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ನಿರೀಕ್ಷೆ ಹೊಂದಿದ್ದವು. ಕಳೆದ 2013 ರಲ್ಲಿ ಕೊರಟಗೆರೆ ಕ್ಷೇತ್ರದಿಂದ ಪರಾಭವಗೊಂಡ ಕಾರಣ ಪರಮೇಶ್ವರ್ಗೆ ಸಿಎಂ ಸ್ಥಾನ ಕೈ ತಪ್ಪಿತು ಎನ್ನಲಾಗಿದೆ. ಕೊನೆಗೆ ಮುಖ್ಯಮಂತ್ರಿ ಖುರ್ಚಿ ಸಿದ್ದರಾಮಯ್ಯಗೆ ಒಲಿದಿತ್ತು. ಈ ಸಂದರ್ಭದಲ್ಲೂ ದೊಡ್ಡ ಮಟ್ಟದಲ್ಲಿ ದಲಿತ ಸಿಎಂ ಕೂಗು ಕೇಳಿ ಬಂದಿತ್ತು.
ಕಳೆದ 2018 ರ ಚುನಾವಣೆ ವೇಳೆಯೂ ದಲಿತ ಸಿಎಂ ಕೂಗು ಕೇಳಿಬಂದಿತ್ತು. ಆದರೆ, ಪೂರ್ಣ ಬಹುಮತ ಬಾರದ ಕಾರಣ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ತು. ಆಗಲೂ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರು ಮುಂಚೂಣಿಗೆ ಬಂದಿತ್ತು. ಖುದ್ದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರಿಂದಲೂ ಸಿಎಂ ಸ್ಥಾನಕ್ಕೆ ಖರ್ಗೆ ಹೆಸರು ಪ್ರಸ್ತಾಪವಾಗಿತ್ತಂತೆ. ಮೈತ್ರಿ ಸರ್ಕಾರದ ಅವಧಿಯಲ್ಲೂ ದಲಿತ ಸಿಎಂ ಆಗಲಿಲ್ಲ ಎಂಬ ಅಸಮಾಧಾನ ದಲಿತ ಸಮುದಾಯಗಳಲ್ಲಿ ಹಾಗೇ ಉಳಿಯಿತು.
ಪಂಜಾಬ್ನಲ್ಲಿ ದಲಿತ ನಾಯಕ ಚರಣ್ ಸಿಂಗ್ ಚನ್ನಿಗೆ ಮುಖ್ಯಮಂತ್ರಿ ಗಾದಿ ಒಲಿದು ಬಂದಿದೆ. ಅಚ್ಚರಿ ರೀತಿಯಲ್ಲಿ ಹೈಕಮಾಂಡ್ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ಕಟ್ಟಿದೆ. ಯಾರೂ ಊಹಿಸದ ರೀತಿಯಲ್ಲಿ ದಲಿತ ಸಮಯದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಒಲಿದುಬಂದಿದೆ. ಹೈಕಮಾಂಡ್ ನಡೆಯಿಂದ ರಾಜ್ಯ ದಲಿತ ನಾಯಕರಲ್ಲೂ ಸಂಚಲನ ಮೂಡಿದೆಯಂತೆ. ರಾಜ್ಯದಲ್ಲೂ ದಲಿತ ನಾಯಕರೊಬ್ಬರನ್ನ ಮುಖ್ಯಮಂತ್ರಿ ಮಾಡಬಹುದೆಂಬ ಕನಸು ಮೂಡಿದೆಯಂತೆ.
