ಕೇಂದ್ರ ಸರ್ಕಾರದ ವಿರುದ್ದ ತಾರಾಸಿಂಗ್ ರಾಠೋಡ ಆಕ್ರೋಶ
ಗಜೇಂದ್ರಗಡ: ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ₹3 , ಮತ್ತು ಸಿಎನ್‌ಜಿ ಬೆಲೆ ₹3 ಹಾಗೂ ಅಡುಗೆ ಅನಿಲದ ಬೆಲೆಗಳು ಸೇರಿದಂತೆ ಇತರೆ ಅಗತ್ಯವುಗಳ ಬೆಲೆ ಹೆಚ್ಚಿಸುವ ಮೂಲಕ ಬಡವರ, ಮಧ್ಯಮ ವರ್ಗದ ಜನರನ್ನು ಕೇಂದ್ರ ಸರ್ಕಾರ ಶೋಷಿಸುತ್ತಿದೆ ಎಂದು ಗಜೇಂದ್ರಗಡ ತಾಲ್ಲೂಕು ಬಂಜಾರ ಸಮಾಜದ ಹಿರಿಯ ಮುಖಂಡ ತಾರಾಸಿಂಗ್ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಹಲವು ವರ್ಷಗಳಿಂದ ಜಾಗತಿಕ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ ಅದರ ಲಾಭವನ್ನು ಗ್ರಾಹಕರಿಗೆ ನೀಡಿಲ್ಲ. ಇದೀಗ ಹೆಚ್ಚು ಶುಲ್ಕ ವಿಧಿಸಿ ಗ್ರಾಹಕರ ನಿತ್ಯ ಬದುಕಿನ ಜೊತೆಗೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 2014ಕ್ಕೂ ಮೊದಲು ₹413 ಇದ್ದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಈಗ ₹1,000 ದಾಟಿದೆ. ನಿತ್ಯದ ಬೆಲೆ ಹೆಚ್ಚಳಕ್ಕೂ ಕಾರಣವಾಗಿದೆ. ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ ಎಂದು ದೂರಿದರು.
ಬೆಲೆ ಏರಿಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆಯಾಗಿದೆ. ಅಂತರರಾಷ್ಟ್ರೀಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮೋದಿಯವರು ವಿಫಲರಾಗಿದ್ದಾರೆ. ಎಲ್ಲಾಕಡೆ ಚುನಾವಣೆಗಳು ಮುಗಿದಿವೆ, ಮೋದಿಯವರ ಚೇತರಿಕೆ ಪ್ರಾರಂಭವಾಗಿದೆ ಮತ್ತು ಜನರ ಬದುಕು ದುಸ್ತರ ಆರಂಭವಾಗಿದೆ. ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ನಂತರ ಕೇಂದ್ರ ಸರ್ಕಾರ ದರ ಹೆಚ್ಚಳ ಮಾಡುವ ನಿರೀಕ್ಷೆ ಇತ್ತು ಎಂದರು.
ನರೇಂದ್ರ ಮೋದಿ ದೇಶದ ಪ್ರಧಾನಿಯಾದ ನಂತರ ಹಲವು ಬಾರಿ ತೈಲ ದರಗಳನ್ನು ಹೆಚ್ಚಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರವು ಈಗಾಗಲೇ ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳಿಂದ ಬಳಲುತ್ತಿರುವ ನಾಗರಿಕರ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡವನ್ನು ಹೇರುತ್ತಿದೆ ಎಂದರು.
ಎಲ್‌ಪಿಜಿ ಸಿಲಿಂಡರ್ ಪೂರೈಕೆಯ ವ್ಯತ್ಯಯದಿಂದ ಪರದಾಡುತ್ತಿರುವ ಜನರನ್ನು ಬೆಲೆ ಏರಿಕೆ ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ. ಈ ಬೆಲೆ ಏರಿಕೆ ಹಾಗೂ ಬಂಗಾರದ ಮೇಲೆ ತೆರಿಗೆ ಹೆಚ್ಚುವರಿಯು ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದ್ದು, ಕಾರ್ಮಿಕರು, ರೈತರು, ಬಡವರ ಬದುಕು ದುಸ್ತರವಾಗಲಿದೆ ಎಂದರು. ಈ ಕೂಡಲೆ ಬೆಲೆ ಏರಿಕೆಯನ್ನು ಹಿಂಪಡೆದು ಜನರ ಸಾಮಾನ್ಯ ಬದುಕಿಗೆ ಅನಕೂಲತೆ ಮಾಡಿಕೊಡಬೇಕು ಇಲ್ಲವಾದರೆ ದೇಶಾದ್ಯಂತ ಜನರು ಕೇಂದ್ರ ಸರ್ಕಾರದ ವಿರುದ್ದ ಹೋರಾಟಕ್ಕೆ ಮುಂದಾಗುತ್ತಾರೆ ಎಂದು ಎಚ್ಚರಿಸಿದರು
ತಾರಾಸಿಂಗ್ ರಾಠೋಡ
