Satya Darshana
ಬಿಸಿ ಬಿಸಿ ಸುದ್ದಿ
ಟ್ರೆಂಡ್ಬಿಸಿ ಬಿಸಿ ಸುದ್ದಿಲೈಫ್ ಸ್ಟೈಲ್

ಒಳಮೀಸಲಾತಿಯ ಒಳಜಗತ್ತು – ಒಳಮೀಸಲಾತಿಯ ಚೆಂಡು  ಉರುಳಿ ಬಂದಿದ್ದು ಎಲ್ಲಿಗೆ ? 

ಒಳಮೀಸಲಾತಿಯ ಒಳಜಗತ್ತು

.                    ಒಳಮೀಸಲಾತಿಯ ಚೆಂಡು

.                     ಉರುಳಿ ಬಂದಿದ್ದು ಎಲ್ಲಿಗೆ ?

2023 ವಿಧಾನಸಭಾ ಚುನಾವಣೆಯ ಸಂದರ್ಭ . ಡಾ ಜಿ ಪರಮೇಶ್ವರ್ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ರಚನಾ ಸಮಿತಿಯ ಅಧ್ಯಕ್ಷರು . ಗ್ಯಾರೆಂಟಿಗಳನ್ನು ಪ್ರಣಾಳಿಕೆಗಳ ಮೂಲಕ ಹೇಳಬೇಕಿತ್ತು . ಆದರೆ ಅದಕ್ಕೆ ಅವಕಾಶ ಕೊಡದೆ ಚುನಾವಣಾ ಸಭೆಗಳಲ್ಲೇ ಘೋಷಿಸಲಾಗುತ್ತಿದೆ .

ಹೀಗಾದರೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರಿಗೇನು ಕೆಲಸ ಎಂದು ಸ್ವಲ್ಪ ದಿನ ಡಾ ಪರಮೇಶ್ವರ್ ಮುನಿಸಿಕೊಂಡಿದ್ದರು . ಕೊನೆಗೂ ಪ್ರಣಾಳಿಕೆ ಸಮಿತಿ ಅಧ್ಯಕ್ಷರಿಗೆ ಒಂದು ಬಲವಾದ ಭರವಸೆಯನ್ನು ಘೋಷಿಸುವ ಅವಕಾಶ ಸಿಕ್ಕಿತು . ಒಳ ಮೀಸಲಾತಿಯ ಕುರಿತಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಯಿತು . ‘ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲೇ ನ್ಯಾ ಸದಾಶಿವ ವರದಿಗೆ ಒಪ್ಪಿಗೆ ಕೊಟ್ಟು ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ‘ .

ಕಾಂಗ್ರೆಸ್ ಅಧಿಕಾರಕ್ಕೆ ಬಂತು . ಸಚಿವ ಸಂಪುಟ ಸಭೆಗಳು ನೆಡದೆ ನೆಡದವು . ಒಳ ಮೀಸಲಾತಿ ವಿಷಯ ಪ್ರಸ್ತಾಪವಾಗದೇ ಮೂಲೆ ಸೇರಿತು .

ಅತ್ತ ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ ಮಾದಿಗ ವಿಶ್ವರೂಪಂ ‘ ಸಭೆಯಲ್ಲಿ ಭಾಗವಹಿಸಿ ತೋರಿಸಿದ ಬದ್ಧತೆಗೆ ಕಾಂಗ್ರೆಸ್ ಒಳಗೊಳಗೆ ನಡುಗಿ ಹೋಗಿತ್ತು . ಇತ್ತ ಕರ್ನಾಟಕದಲ್ಲಿ ಆರಂಭವಾದ ಮಾದಿಗ ಮುನ್ನಡೆ ಸಮಾವೇಶಗಳು , ಅದಕ್ಕೆ ಸಿಕ್ಕ ಜನಸ್ಪಂದನದಿಂದಾಗಿ ಕಾಂಗ್ರೆಸ್ ತಾನು ಕೊಟ್ಟ ಪ್ರಣಾಳಿಕೆಯಲ್ಲವಾದಿರಾ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಯಿತು .

ಜನವರಿ 17 , 2024 ಕರ್ನಾಟಕ ಸರ್ಕಾರದ ಸಚಿವ ಸಂಪುಟದ ಸಭೆ . ‘ ಸಂವಿಧಾನದ 341ನೇ ವಿಧಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡಬೇಕು ‘ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸಂಪುಟ ಸಭೆ ನಿರ್ಧರಿಸಿತು . ಸಂಪುಟ ಸಭೆಯ ನಂತರ ಇದನ್ನು ಪತ್ರಕರ್ತರಿಗೆ ವಿವರಿಸಲು ಬಂದ ಸಮಾಜ ಕಲ್ಯಾಣ ಸಚಿವರು ತಡಬಡಾಯಿಸಿದರು .

341ನೇ ವಿಧಿಗೆ ತಿದ್ದುಪಡಿ ಆಗಬೇಕು ಎಂದು ನ್ಯಾ ಉಷಾಮೆಹ್ರಾ ಆಯೋಗ 2008 ರಲ್ಲಿ ಹೇಳಿದ್ದು ನಿಜ . 2008 ರಿಂದ 2013 ರವರಗೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯೂಪಿಎ ಸರ್ಕಾರವೇ ಇತ್ತಲ್ಲ ಆಗೇಕೆ 341ನೇ ವಿಧಿಗೆ ತಿದ್ದುಪಡಿ ಮಾಡಲಿಲ್ಲ ? 2013 ರಿಂದ 2018ರವರಗೆ ಕರ್ನಾಟಕದಲ್ಲಿ ಸಿದ್ಧಾರಾಮಯ್ಯ ನೇತೃತ್ವದ ಬಹುಮತದ ಸರ್ಕಾರವೇ ಇತ್ತಲ್ಲ ಆಗೇಕೆ ಈ ಶಿಫಾರಸ್ಸನ್ನು ಕಳುಹಿಸಲಿಲ್ಲ ? – ಪತ್ರಕರ್ತರ ಪ್ರಶ್ನೆಗೆ ಸಮಾಜ ಕಲ್ಯಾಣ ಸಚಿವರಲ್ಲಿ ಉತ್ತರ ಇರಲಿಲ್ಲ , ಬೆವರೊರಸಿಕೊಂಡು ಎದ್ದ ಸಚಿವರು ‘ ಯಾರೋ ಮೀಡಿಯಾದವರನ್ನೆಲ್ಲ ಟ್ಯೂನ್ ಮಾಡಿ ಕಳುಹಿಸಿದ್ದಾರೆ ‘ ಎಂದು ಗೊಣಗಿಕೊಂಡು ಹೋದರೆಂದು ಹಾಜರಿದ್ದ ಪತ್ರಕರ್ತರೊಬ್ಬರು ಮತ್ತೆಂದೊ ಸಿಕ್ಕಾಗ ಹೇಳಿದರು .

* 2020 ರ ತಮ್ಮ ತೀರ್ಪಿನಲ್ಲೆ ನ್ಯಾ ಅರುಣಮಿಶ್ರಾ ‘ 341ನೇ ವಿಧಿಗೆ ತಿದ್ದುಪಡಿ ತರುವ ವಿಷಯ ಅಪ್ರಸ್ತುತ ‘ ಎಂದು ಸ್ಪಷ್ಟವಾಗಿ ಹೇಳಿದ್ದರು .

* 2023 ರ ಅಕ್ಟೋಬರ್ ನಲ್ಲಿ ಒಳಮೀಸಲಾತಿಯ ವಿಚಾರಣೆಗಾಗಿ ಸುಪ್ರೀಂಕೋರ್ಟ್ ಏಳು ಸದಸ್ಯರ ಪೀಠವನ್ನು ರಚಿಸಿತು .

* ಕೇಂದ್ರ ಸರ್ಕಾರ ಒಳಮೀಸಲಾತಿಯ ಪರವಾಗಿ ವಕಾಲತ್ತು ವಹಿಸಿತು .

* ವಿಚಾರಣೆ ಆರಂಭವಾಗಲು ಕೆಲದಿನಗಳು ಇರುವಾಗ 2024 ಜನವರಿ 17 ರಂದು ಕರ್ನಾಟಕ ಸರ್ಕಾರ ‘ 341 ನೇ ವಿಧಿಗೆ ತಿದ್ದುಪಡಿ ತನ್ನಿ ‘ ಎಂದು ಕೇಂದ್ರಕ್ಕೆ ಪತ್ರ ಬರೆಯಿತು .

ಕರ್ನಾಟಕ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ವಿಷಯದಲ್ಲಿ ಸುಪ್ರೀಂಕೋರ್ಟಿನಲ್ಲಿ ಆಗುತ್ತಿದ್ದ ಬೆಳವಣಿಗೆಗಳ ಬಗ್ಗೆ ಸ್ವಲ್ಪವೂ ನಿಗಾ ಇರಲಿಲ್ಲ . ತಾನು ಏನೋ ಒಂದು ಶಿಫಾರಸು ಮಾಡಿ ಮುಖ ಉಳಿಸಿಕೊಂಡೆ ಎಂಬ ಕಾಟಾಚಾರ ಮಾತ್ರ ಇಡೀ ಬೆಳವಣಿಗೆಯಲ್ಲಿ ಎದ್ದು ಕಾಣುತ್ತಿತ್ತು .

ದುರಂತವೆಂದರೆ ಆಗಸ್ಟ್ 1 ರಂದು ಸುಪ್ರೀಂಕೋರ್ಟಿನ ಐತಿಹಾಸಿಕ ತೀರ್ಪು ಹೊರಬಿತ್ತು . ಆಗಲೂ ನಮ್ಮ ಸಮಾಜ ಕಲ್ಯಾಣ ಸಚಿವರು ಹೇಳಿದ್ದು ‘ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಬೇಕಾಗುತ್ತದೆ ! ‘

ಇಂತಹ ‘ ಬಂಡೆ ‘ ಸರ್ಕಾರದ ಎದುರು ಒಳ ಮೀಸಲಾತಿಯ ಚೆಂಡು ಉರುಳಿ ಬಂದಿದೆಯೇ ?

ಕಾಲವೇ ಉತ್ತರಿಸಬೇಕು .

ಮಂಜುನಾಥ ಬುರಡಿ ಗದಗ ಜಿಲ್ಲಾ ಮಾದಿಗ ದಂಡೋರ ಜಿಲ್ಲಾ ಪ್ರಧಾನ ಕಾರ್ಯದರ್ಶಿ.

Related posts

ಹಿರಿಯ ನಾಗರಿಕರಿಗೆ ಸೂಕ್ತ ಸೌಲಭ್ಯಗಳು ದೊರಕಬೇಕು

satyadarshana

ಸೂಡಿಯ ನಾಗಕುಂಡ ಮೆಟ್ಟಿಲು ಬಾವಿಯ ದತ್ತು ಸ್ವೀಕಾರದ ಒಡಂಬಡಿಕೆ

satyadarshana

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಶ್ರೀ ಮಾರುತೇಶ್ವರ ಮಹಾ ರಥೋತ್ಸವ ಸಂಭ್ರಮದಿಂದ ಜರಗಿತು* “”

satyadarshana

Leave a Comment