ಗದಗ : ಅ.09: ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ರವಿವಾರದಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಶಾಸಕರಾದ ಎಚ್.ಕೆ.ಪಾಟೀಲ, ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ಗದಗ-ಬೆಟಗೇರಿ ನಗರ ಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿದ್ಧಪ್ಪ ಪಲ್ಲೇದ್ ಅವರುಗಳು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.
ಶಾಸಕರಾದ ಎಚ್.ಕೆ.ಪಾಟೀಲ ಅವರು ಮಾತನಾಡಿ ಇಂದಿನ ದಿನಮಾನಗಳಲ್ಲಿ ಮಹರ್ಷಿ ವಾಲ್ಮೀಕಿ ಅವರು ಹೆಚ್ಚು ಪ್ರಚಲಿತದಲ್ಲಿದ್ದಾರೆ.
ಇಂದು ಜರುಗುತ್ತಿರುವ ಉಕ್ರೇನ ಯುದ್ದ, ತೀವ್ರ ಭಯೋತ್ಪಾದನೆ ಹಾಗೂ ಆಂತರಿಕ ಅಶಾಂತಿಗಳನ್ನು ನಿಯಂತ್ರಿಸುವ ಶಕ್ತಿ ಮಹರ್ಷಿ ವಾಲ್ಮೀಕಿಯವರ ರಾಮಾಯಣಕ್ಕೆ ಇದೆ ಎಂದರು. ದೇಶದಲ್ಲಿ ಪ್ರತಿಯೊಬ್ಬರು ಅಣ್ಣ ತಮ್ಮಂದಿರ ಹಾಗೆ ಬದುಕುವ ಕುರಿತು ಸಂದೇಶ ಸಾರಿದ ರಾವಣನ ಕೊನೆ ಗಳಿಗೆಯ ನಿದರ್ಶನ ನೀಡಿದ ಅವರು ರಾಮಾಯಣದಲ್ಲಿನ ಮೌಲ್ಯಗಳನ್ನು ಅರಿತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಧೃಢ ರಾಷ್ಟ್ರ ನಿರ್ಮಾಣ ಮಾಡಲು ಮುಂದಾಗುವಂತೆ ಶಾಸಕರಾದ ಎಚ್.ಕೆ.ಪಾಟೀಲ ಕರೇ ನೀಡಿದರು.
ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ವಾಲ್ಮೀಕಿಯವರ ಜೀವನ ಚರಿತ್ರೆ ಹಾಗೂ ರಾಮಾಯಣ ಒದುವುದು ಅವಶ್ಯಕವಾಗಿದೆ. ಮನುಷ್ಯ ತಪ್ಪು ಮಾಡುವದು ಸಹಜ ಆದರೆ ತಪ್ಪುಗಳನ್ನು ತಿದ್ದಿ ನಡೆಯುವದು ಅಷ್ಟೇ ಮುಖ್ಯವಾಗಿದೆ. ವಾಲ್ಮಿಕಿಯವರು ದರೋಡೆ ನಡೆಸಿ ತಮ್ಮ ಜೀವನ ಸಾಗುಸುತ್ತಿದ್ದರು ಇದು ತಪ್ಪು ದಾರಿ ಎಂದು ಸಪ್ತಋಷಿಗಳು ಹೇಳಿದಾಗ ಆ ತಪ್ಪನ್ನು ತಿದ್ದಿಕೊಂಡು ರಾಮಾಯಣ ರಚಿಸಿದಂತಹ ಮಹನೀಯರು, ಅದೇ ರೀತಿ ಇಂದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿನ ತಪ್ಪುಗಳನ್ನು ತಿದ್ದುಕೊಂಡು ಉತ್ತಮ ಜೀವನ ನಡೆಸಲು ಮುಂದಾಗುವಂತೆ ತಿಳಿಸಿದರು. ರಾಮಾಯಣದಲ್ಲಿನ ಮಾನವೀಯ ಮೌಲ್ಯಗಳನ್ನು ಅರಿತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವದರ ಮೂಲಕ ಸುಂದರ ಸಮಾಜ ನಿರ್ಮಾಣಕ್ಕೆ ಮುಂಗಾಗಬೇಕು. ಪರಿಶಿಷ್ಟ ಪಂಗಡದವರ ಮೀಸಲಾತಿ ಹೆಚ್ಚಳ ಕುರಿತಂತೆ ಬಹುದಿನಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿದೆ. ಸಮಾಜ ಬೆಳೆಯಬೇಕೆಂದರೆ ಶಿಕ್ಷಣ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು 100 ಡಾ. ಬಿ.ಆರ್.ಅಂಬೇಢ್ಕರ ವಸತಿ ಶಾಲೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತವಾಗಿದ್ದು ಸಮಾಜದ ಬಾಂಧವರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವಂತೆ ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿ.ಪಂ. ಸಿ.ಇ.ಓ ಡಾ.ಸುಶೀಲಾ ಬಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಉಪವಿಭಾಗಾಧಿಕಾರಿ ಅನ್ನಪೂರ್ಣ ಸೇರಿದಂತೆ ಸಮಾಜದ ಮುಖಂಡರು, ಗಣ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಸಮಾಜ ಬಾಂಧವರು ಹಾಜರಿದ್ದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಪ್ರಶಾಂತ ವರಗಪ್ಪನವರ ಅವರು ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಲೋಕೊಪಯೋಗಿ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ ಅವರ ಸಂದೇಶವನ್ನು ವಾಚಿಸಿದರು.
ಇದೇ ಸಂದರ್ಭದಲ್ಲಿ 2021-22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಾನಸಾ ರವಿ ಪಾಳಸೇಕರ ಅವರಿಗೆ ಒಂದು ಲಕ್ಷ ರೂ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಪ್ರಬಂಧ ಹಾಗೂ ಭಾಷಣ ಸ್ಪರ್ಧೇಯಲ್ಲಿ ವಿಜೇತ ವಿಧ್ಯಾರ್ಥಿಗಳಿಗೆ ಗೌರವಿಸಲಾಯಿತು.
