ಮರೆಯಲಾಗದ ಮಾಣಿಕ್ಯ ಡಾ.ಬಾಬಾ ಸಾಹೇಬ್ ಅಂಬೇಡ್ಕರವರು…
ವಿಶ್ವಜ್ಞಾನಿ,ವಿಶ್ವ ರತ್ನ,ಸಂವಿಧಾನ ಶಿಲ್ಪಿ,ಈ ದೇಶ ಕಂಡ ಮಹಾ ಮೇಧಾವಿ,ರಾಜಕಿಯ ಮುತ್ಸದ್ದಿ ಡಾ.ಬಾಬಾ ಸಾಹೇಬ ಅಂಬೇಡ್ಕರವರ ಹುಟ್ಟುದಿನದ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತ ಅವರ ಕುರಿತಾಗಿ ಕೃತಜ್ಞಾ ಪೂರ್ವಕ ನುಡಿಗಳನ್ನು ತಮಗರ್ಪಿಸುವೆನು.
ಆತ್ಮೀಯರೆ, ಶಾಶ್ವತವಾದ ಬದುಕು ಇಲ್ಲ ನಿಜ. ಆದರೆ ಶಾಶ್ವತವಾದ ಬದುಕನ್ನು ಬದುಕಬಹುದು ಎನ್ನುವ ನುಡಿಯನ್ನು ಸಾರ್ಥಕ ಮಾಡಿಕೊಂಡಿರುವ ಸಾಧಕರಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರವರು ಒಬ್ಬರು.ಅವರೇ ಹೇಳಿರುವಂತೆ ‘ಜೀವನ ದೀರ್ಘವಾಗಿರುವುದಕ್ಕಿಂತೆ ಶ್ರೇಷ್ಟವಾಗಿರಬೇಕು’ ಎಂದು.ಶ್ರೇಷ್ಠ ಮತ್ತು ಸ್ಪಷ್ಟ ಜೀವನವನ್ನು ಅನುಭವಿಸಿದ ಮಹಾದಾಶರ್ನಿಕ.ಇಂತಹ ಮಹಾನಾಯಕನನ್ನು ಓದುವುದು,ಬರೆಯುವುದು ಅವರ ಕುರಿತು ತಿಳಿದುಕೊಳ್ಳುವುದೆಂದರೆ ‘ಕುರುಡರು ಗಜದ ಒಂದು ಭಾಗ ಮುಟ್ಟಿ ತಪ್ಪು ಅಂದಾಜಿಸಿಸುವಂತಾಗುತ್ತದೆ.
ಡಾ.ಬಾಬಾಸಾಹೇಬ್ ಅಂಬೇಡ್ಕರವರ 134ನೇ ಜಯಂತಿ.ಎಪ್ರಿಲ್ ೧೪ ಬಾಬಾರು ಹುಟ್ಟಿದ ಈ ದಿನವನ್ನು ವಿಶ್ವ ಶ್ರೇಷ್ಟ ದಿನ ಅಂತಲೂ ಕರೆಯುತ್ತಾರೆ.ಇಂದು ಕೇವಲ ದಲಿತ ದಮನಿತರಷ್ಟೇ ಅಲ್ಲದೇ ದೇಶ-ವಿದೇಶದಲ್ಲಿನ ಪ್ರತಿಯೊಬ್ಬ ನಾಗರಿಕನೂ ಕೃತಜ್ಞತೆ ಅರ್ಪಿಸಬೇಕಾದ ದಿನ.ಸಾವಿರ-ಸಾವಿರ ವರ್ಷಗಳಿಂದ ನೊಂದು ನಲುಗಿದ ಅಸ್ಪೃಷ್ಯ ಸಮಾಜಕ್ಕೆ ಹಾಗೂ ಎಲ್ಲ ಸಮುದಾಯದ ಏಳ್ಗೆಗೆ ಬುದ್ಧ-ಬಸವನ ನಂತರ ಮತ್ತೊಬ್ಬ ಯುಗಪುರುಷ ಅವತರಿಸಬೇಕಾಗಿತ್ತೆನೋ ನಾನರಿಯೆ.ಶ್ರೇಷ್ಠ ದಂಪತಿಗಳಾದ ರಾಮ್ ಜಿ ಸಕ್ಪಾಲ್ ಮತ್ತು ಭೀಮಾಬಾಯಿವರ ಉದರದಲ್ಲಿ 14 ನೇ ಮಗುವಾಗಿ ಜನ್ಮ ತಳೆದು ಬಂದ ‘ಭೀವಾ’.ದಲಿತ ದಮನಿತರ ಪಾಲಿಗೆ ಸಂಜೀವಿನಿಯಾಗಿದ್ದಂತೂ ನಿಜ.ಜೀವನಪೂರ್ತಿ ಕಷ್ಟ-ಕೋಟಲೆಗಳ ದಾಟಿ,ಜ್ಞಾನದ ಮೇರುಪರ್ವತವಾದ ಬಾಬಾಸಾಹೇಬರು ಲಕ್ಷ-ಕೋಟಿ ಜನಕೆ ಭರವಸೆಯ ಬೆಳಕಾದ ದಿವ್ಯಚೈತನ್ಯಸ್ವರೂಪಿ ಎಂದರೆ ಅತಿಶಯೋಕ್ತಿಯಾಗಲಾರದು.
ಆತ್ಮಿಯರೆ,ಡಾ.ಬಾಬಾ ಸಾಹೇಬರು ಯಾವಾಗಲೂ ತಮ್ಮ ಭಾಷಣ ಮತ್ತು ಬರಹಗಳಲ್ಲಿ ಈ ಒಂದು ಮಾತನ್ನು ಸೂಚ್ಯವಾಗಿ ಹೇಳುವುದರ ಜೊತೆಗೆ ತಾವೇ ಬಹುದೊಡ್ಡ ಮಾರ್ಗದರ್ಶಿಯಾಗಿ ನಿಲ್ಲತ್ತಾರೆ.ಅವರು ಹೇಳುವಂತೆಯೇ “ನನ್ನ ಬಗ್ಗೆ ಅನಾವಶ್ಯಕ ಪ್ರಶಂಸೆ ಮಾಡಿ ನನಗೆ ದೇವರನ್ನಾಗಿ ಮಾಡಬೇಡಿ. ಯಾವುದೋ ವ್ಯಕ್ತಿಗೆ ದೇವರನ್ನಾಗಿ ಮಾಡಿ, ಅಂಥ ಭಕ್ತರಂತೆ ಅವರ ಹಿಂದೆ ಹೋಗುವುದು ಅಶಕ್ತತೆಯ ಲಕ್ಷಣವೆಂದು ಕಂಡು ಬರುತ್ತದೆ. ಅದರ ಬದಲಾಗಿ ನೀವುಗಳು ಸಂಘಟನೆ ಮಾಡಿಕೊಂಡು ಆ ಮೂಲಕ ಶಾಸನಬದ್ಧ ಮತ್ತು ಧೈರ್ಯದಿಂದ ನಿಮ್ಮ ದಾರಿಯಲ್ಲಿ ನಡೆದು ನೀವುಗಳೇ ಸರ್ವಾಂಗೀಣ ಉನ್ನತಿ ಮಾಡಿಕೊಳ್ಳಿ.”ಎಂದರು.ಆದಾಗ್ಯೂ ನಾವು ನಮ್ಮ ಆಡಂಭರದ ದುಂದು ವೆಚ್ಛದ ಆಚರಣೆಗಳು ಬಿಟ್ಟಿಲ್ಲ.ಮೆರವಣಿಗೆ,ಉತ್ಸವ,ಅತೀರೇಖದ ಬಾಂಡು-ಭಾಜನಗಳು,ಡಿಜೆಗಳು ತಪ್ಪಿಲ್ಲ. ಹುಚ್ಛೆದ್ದು ಕುಣಿಯುವುದು ನಿಂತಿಲ್ಲ.ಸಾಹೇಬರ ಜಯಂತಿಯ ಹೆಸರು ಹಲವಾರು ಸಂಘ-ಸಂಘಟನೆಗಳು ಹೇಳಿ ಚಂದಾ ಎತ್ತಿ ದುರುಪಯೋಗ ಮಾಡಿಕೊಂಡ ಪರಿಯಂತು ಹೇಳತೀರದು.ಇವೆಲ್ಲ ಗಮನಿಸಿದಾಗ ನಿಜವಾಗಲೂ ನಾವು ಬಾಬಾ ಸಾಹೇಬರ ಕುಡಿಗಳಾ? ಸ್ವಾಭಿಮಾನಿಗಳಾ? ಸ್ವಾವಲಂಬಿಗಳಾ? ಎನ್ನುವ ಆತಂಕ ನನ್ನನ್ನು ಸದಾ ಕಾಡುತ್ತದೆ.ಇವುಗಳ ಮಧ್ಯ ಅವರ ಬದುಕು-ಬರಹಗಳ ಕುರಿತು ಚರ್ಚಾಕೂಟ,ಜ್ಞಾನಾತ್ಮಕ ಚಟುವಟಿಕೆಗಳು,ವಿಚಾರ ಸಂಕೀರ್ಣಗಳು,ಚಿಂತನೆಗಳು,ಬರಹಗಳು,ಗೋಷ್ಟಿಗಳು.ಸಮ್ಮೇಳನಗಳನ್ನು ಮಾಡಿದರೆ ಎಷ್ಟೊಂದು ಅರ್ಥಪೂರ್ಣ ನೀವೇ ಹೇಳಿ! ಅವರು ಬಗ್ಗೆ ಬೊಗಸೆಯಷ್ಟು ನಾವು ತಿಳಿದುಕೊಂಡಿದ್ದೇವೆಯೋ ಇಲ್ಲವೋ ಗೊತ್ತಿಲ್ಲ.ಆದರೆ ಬಾಹ್ಯ ಆಚರಣೆಗಳಲ್ಲಿ ತಲ್ಲಿನರಾಗಿದ್ದಂತೂ ನಿಜ.ಹಾಗಂತ ಬುದ್ಧಿ ಹೇಳುತ್ತಿಲ್ಲ.ಅಂತರಂಗದ ನಿವೇದನೆಯನ್ನು ಹೇಳಿಕೊಳ್ಳತ್ತಿದ್ದೇನೆ ಅಷ್ಟೆ.ಅವರ ವಿಚಾರಗಳ ವಿರುದ್ಧವಾಗಿಯೇ ಆಚರಣೆಗಿಳಿದಿದ್ದೇವೆ ಹೊರತು ಪಾಲಿಸಲಾಗುತ್ತಿಲ್ಲ.ಅಂಧಾಭಿಮಾನ ಮಾತ್ರ ಜೀವಂತ ಇಟ್ಟಿದ್ದೇವೆ.ನಿಜವಾಗಿಯೂ ಡಾ.ಬಾಬಾ ಸಾಹೇಬರನ್ನು ನಾವು ಇಟ್ಟುಕೊಳ್ಳಬೇಕಾಗಿರುವುದು ನಮ್ಮ ಹೃದಯದಲ್ಲಿ,ಅವರನ್ನು ಜೀವಂತವಾಗಿರಿಸಿಕೊಳ್ಳಬೇಕಾಗಿರುವುದು ನಮ್ಮ ಚಿಂತನ-ಮಂಥನಗಳಲ್ಲಿ ಹಾಗೂ ನಮ್ಮ ಸಾರ್ಥಕತೆಯ ಸಾಧನೆಯಲ್ಲಿ.ಇದು ನಮ್ಮ ಧ್ಯೇಯವಾಗಿರಬೇಕೆಂಬುದೇ ನನ್ನ ಸದಾಶಯ.
ಅಸ್ಪೃಷ್ಯರು,ಶೋಷಿತರು ಶಿಕ್ಷಣ ಕಲಿತು ಉನ್ನತ ಅಧಿಕಾರಿಗಳಾಗುವುದು,ಉತ್ತಮ ರಾಜಕಾರಣಿಗಳಾಗುವುದು,ಉನ್ನತವಾದದ್ದನ್ನು ಸಾಧಿಸಿವುದು ಎಂದರೆ ಬಾಬಾ ಸಾಹೇಬರಿಗೆ ತುಂಬ ಖುಷಿ.ಶಿಕ್ಷಣ-ಸಂಘಟನೆ-ಹೋರಾಟವೇ ನಮ್ಮ ಮೂಲಮಂತ್ರ ಎಂದು ಸದಾ ಎಚ್ಚರಿಸುವುದರ ಜೊತೆಗೆ ಪ್ರೇರಣದಾಯಕ ಮಾತುಗಳನ್ನು ಅವರು ಹಲವಾರು ಸಭೆ ಸಮಾರಂಭ ಮತ್ತು ಬರವಣಿಗೆಯಲ್ಲಿ ಹೇಳಿಕೊಂಡಿದ್ದಾರೆ.ನಾವು ಆ ನಿಟ್ಟಿನಲ್ಲಿ ಹೋಗಿ ಸಾಧನೆಯನ್ನು ಮಾಡಿದಾಗ ಮಾತ್ರ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ವಿನಃ ಅನ್ಯ ಆಚರಣೆಗಳಿಂದಲ್ಲ ಎನ್ನುವುದು ನಮ್ಮ ಮನದಲ್ಲಿದ್ದರೆ ಅದಕ್ಕಿಂತ ಗೌರವ,ಪ್ರೀತಿ,ಅಭಿಮಾನ ಇನ್ನೆಲ್ಲೂ ಇರದು.
ಬಾಬಾ ಸಾಹೇಬರು ಹುಟ್ಟು ಹಬ್ಬದ ಕುರಿತಾಗಿ ಹೀಗೆ ಹೇಳುತ್ತಾರೆ.”ಒಂದು ದೃಷ್ಟಿಯಿಂದ ನೋಡಿದರೆ ಹುಟ್ಟುಹಬ್ಬದ ಆಚರಣೆಗಳು ಅಷ್ಟೇನೂ ಸಂತೋಷ ಕೊಡುವುದಿಲ್ಲ.ನಿಮಗೆ ಗೊತ್ತಿರುವಂತೆ ಮನುಷ್ಯ ಜೀವನ ನಶ್ವರ.ಒಂದಲ್ಲ ಒಂದು ದಿನ ಅವನು ಸಾಯಲೇಬೇಕು.ಈ ಜೀವನದಲ್ಲಿ ವರ್ಷಗಳು ಒಂದೊಂದಾಗಿ ಕಳೆದು ಹೋಗುತ್ತವೆ ಎಂಬುದನ್ನು ಹುಟ್ಟುಹಬ್ಬಗಳು ನೆನಪಿಗೆ ತರುತ್ತವೆ. ಹೌದು, ಈ ವ್ಯವಕಲನಕ್ಕಾಗಿ ಯಾರೂ ವಿಷಾದ ಪಡಬೇಕಾಗಿಲ್ಲ. ಏಕೆಂದರೆ ಮನುಷ್ಯ ತನ್ನ ಜೀವನವನ್ನು ಸವೆಸಬೇಕಾಗಿರುವುದು ಪ್ರಕೃತಿ ನಿಯಮ. ಆದರೂ ವ್ಯಕ್ತಿಯ ಜೀವನ ಸಾರ್ವಜನಿಕ ಉದ್ದೇಶಕ್ಕಾಗಿ ಮುಡುಪಾಗಿದ್ದರೆ ಅದನ್ನು ಸ್ವಲ್ಪ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ನಿಜವಾಗಿಯೂ ಡಾ.ಬಾಬಾ ಸಾಹೇಬ ಅಂಬೇಡ್ಕರವರು ಬದುಕಿದ ರೀತಿ ವಿಭಿನ್ನ.ಬುದ್ಧನ ಜ್ಞಾನ,ವಿವೇಕ,ನೀತಿ,ಕರುಣೆ ಮತ್ತು ಮೈತ್ರಿ ತಮ್ಮ ಎದೆಯಲ್ಲಿ ತುಂಬಿಕೊಂಡ ಬಾಬಾರು ‘ಬಹುಜನ ಹಿತಾಯ,ಬಹುಜನ ಸುಖಾಯ ಲೋಕಾನುಕಂಪಾಯ’ಎಂದು ಸರ್ವರ ಹಿತಕ್ಕೆ ಬಾಳಿದ ಮಹಾಚೇತನ. ಅವರ ಕೆಲವೊಂದು ಮೇರು ವ್ಯಕಿತ್ವದ ವಿಶೇಷಗಳು ಓದಿದರೆ ಎಂತಹವರಿಗಾದರೂ ಪ್ರೇರಣೆಯಾಗಬಲ್ಲವು.ಅವುಗಳನ್ನೆ ಇಲ್ಲಿ ನೆನಪಿಸುವೆ.
ಡಾ.ಬಾಬಾ ಸಾಹೇಬರ ಜೀವನದ ವಿಶೇತೆಗಳು:
-ಡಾ.ಬಾಬಾ ಸಾಹೇಬರು ಕುಡಿಯುವ ನೀರಿಗಾಗಿ ಚಳುವಳಿ ಮಾಡಿರುವ ಪ್ರಪಂಚದ ಏಕೈಕ ಮಹಾಪುರುಷ.
-ಲಂಡನ್ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿರುವ ಸಂಪೂರ್ಣ ಪುಸ್ತಕಗಳನ್ನು ಬಳಕೆ ಮಾಡಿ ಮಾಹಿತಿ ಸಂಗ್ರಹಿಸಿರುವ ಮಹಾಮಾನವ.-ವಿಶ್ವದ ನಾಲ್ಕು ಸುಪ್ರಿಸಿದ್ದ ಜ್ಞಾನಿಗಳಲ್ಲಿ ಮೊದಲನೆ ಸ್ಥಾನದಲ್ಲಿರುವ ವಿಶ್ವಜ್ಞಾನಿ. -ಪ್ರಪಂಚದಲ್ಲಿಯೇ ಹೆಚ್ಚಿನ ಪ್ರತಿಗಳಿರುವ ಏಕೈಕ ಮಹಾಪುರುಷ. -ಲಂಡನ್ ವಿಶ್ವವಿದ್ಯಾಲಯದಲ್ಲಿ ಡಿ.ಎಸ್.ಸಿ ಪದವಿ ಪಡೆದ ಮೊದಲ ಮತ್ತು ಕೊನೆಯ ಭಾರತಿಯ ವಿದ್ವಾನ. -ಲಂಡನ್ ವಿಶ್ವವಿದ್ಯಾಲಯದ ಎಂಟು ವರ್ಷದ ಪಠ್ಯಕ್ರಮವನ್ನು ಮೂರೇ ವರ್ಷದಲ್ಲಿ ಪೂರೈಸಿರುವ ಜ್ಞಾನದಾಹಿ. -ಅಮೇರಿಕಾದ ನ್ಯೂಯಾರ್ಕ ನಗರದಲ್ಲಿರುವ ಲೇಮಾ ಗ್ರಂಥಾಲಯದಲ್ಲಿ ಪ್ರತಿಮೆ ಇರುವ ಏಕೈಕ ಮಹಾಮಾನವ.-2015ರಲ್ಲಿ ಬಾಬಾಸಾಹೆಬರು ಎಮ್.ಎ. ಪದವಿ ಪಡೆದು 100 ವರ್ಷದ ನೆನಪಿಗಾಗಿ ಕೋಲಂಬಿಯಾ ವಿಶ್ವವಿದ್ಯಾಲಯದ ದ್ವಾರದಲ್ಲಿ ಪ್ರತಿಮೆ ಸ್ಥಾಪಿಸಲಾಗಿದೆ; ಅದರ ಮೇಲೆ ‘ಸಿಂಬಾಲ್ ಆಫ್ ನಾಲೇಡ್ಜ’ ಎಂದು ಬರೆಯಲಾಗಿದೆ.
-14ನೇ ಎಪ್ರೀಲ್ 2016ರಂದು ವಿಶ್ವ ಸಂಸ್ಥೆಯು ಬಾಬಾಸಾಹೇಬರ ದಿನಾಚರಣೆಯನ್ನು ಆಚರಣೆ ಮಾಡಿ ಆ ದಿನವನ್ನು “ವರ್ಲ್ಡ್ ನಾಲೇಡ್ಜ ದಿನ’ ವೆಂದು ಆಚರಿಸಲು ಆರಂಬಿಸಿದೆ.ಮತ್ತು ತನ್ನ 193 ಸದಸ್ಯ ರಾಷ್ಟ್ರಗಳಲ್ಲಿ ದಿನಾಚರಣೆ ಆಚರಿಸುವ ಮೂಲಕ ಬಾಬಾಸಾಹೇಬರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ. -15ನೇ ಅಕ್ಟೋಬರ್ 1956ರಂದು ಏಕಕಾಲಕ್ಕೆ ಐದು ಲಕ್ಷಕ್ಕಿಂತಲೂ ಹೆಚ್ಚಿನ ಜನರನ್ನು ಬೌದ್ಧಧಮ್ಮಕ್ಕೆ ಧರ್ಮಾಂತರ ಮಾಡಿರುವ ಯುಗಪುರುಷ. -ಮತ್ತು ಒಬ್ಬನೇ ಮಹಾ ಪುರುಷನ ಬಗ್ಗೆ ಲಕ್ಷಾಂತರ ಲೇಖಕರು ಬರೆದಿರುವ ಮಹಾ ಜ್ಞಾನಿ ಎಂದರೆ ಬಾಬಾಸಾಹೇಬರು.ಈ ರೀತಿಯಾಗಿ ನಮಗೆ ಬಾಬಾ ಸಾಹೇಬರು ಕಲಿಯುಗದ ಜ್ಞಾನದ ಕಲ್ಪವೃಕ್ಷವಾಗಿ ಕಾಣಿಸುವಂತಹದ್ದು ಸಹಜ.
ಸಾಧನೆ ಮತ್ತು ಬಿರುದುಗಳು:
ಹಾಡು ಮುಟ್ಟದ ಸೊಪ್ಪಿಲ್ಲ ಬಾಬಾ ಸಾಹೇಬರು ಮುಟ್ಟದ ಅಧ್ಯಯನ ಕ್ಷೇತ್ರಗಳಿಲ್ಲ ಅಂತಹ ಬಹುಮುಖ ಪ್ರತಿಭೆ ಬಾಬಾಸಾಹೆಬರದು.ಮಾನವಿಕ ವಿಷಯಗಳಾದ ಸಮಾಜ ಶಾಸ್ತ್ರ,ಇತಿಹಾಸ, ಅರ್ಥಶಾಸ್ತ್ರ, ವಿಜ್ಞಾನ ಕಾನೂನು,ಧರ್ಮ ಹೀಗೆ ಹೇಳುತ್ತ ಹೊರಟರೆ ವಿದ್ಯಾರ್ಹತೆಗಳು ಬೆಳೆಯುತ್ತಲೇ ಹೋಗುತ್ತವೆ. ಎಮ್.ಎ.,ಎಮ್ ಎಸ್ ಸಿ.,ಪಿ.ಎಚ್ ಡಿ.,ಡಿ.ಎಸ್ಸಿ, ಡಿ.ಲಿಟ್,ಬಾರ್ ಎಟ್ ಲಾ, ಎಲ್.ಎಲ್.ಡಿ.ಇಂತಹ ಹಲವಾರು ಉನ್ನತ ಶಿಕ್ಷಣ ಕ್ಷೇತ್ರಗಳ ಸಾಧನಾರ್ಹತೆಯ ಜೊತೆಗೆ ರಾಜಕೀಯ ಕ್ಷೇತ್ರದಲ್ಲೂ ತಮ್ಮ ಅನವರತ ಶ್ರದ್ಧೆ,ಬದ್ಧತೆ ಮತ್ತು ವಿದ್ವತ್ತಿನಿಂದ ಅಘಾದವಾದ,ಸಮರ್ಪಕವಾದ ‘ಸಂವಿಧಾನ’ ಬರೆದು ಅದ್ಭುತ ಸಾಧನೆಯನ್ನು ಮಾಡಿದ ಕೀರ್ತಿ ಸಾಹೇಬರಿಗೆ ಸಲ್ಲುತ್ತದೆ.ಸಾಹೇಬರಿಗೆ ನೀಡಿದ ಭಾರತ ಭಾಗ್ಯವಿಧಾತ,ಸಂವಿಧಾನದ ಪಿತಾಮಹ ಎಂಬ ಬಿರುದುಗಳಂತು ರವಿ-ಚಂದ್ರರಿರುವರೆಗೂ ಅಜರಾಮರ.ಮೂಕನಾಯಕ,ಭಹಿಷ್ಕ್ರತ ಭಾರತ ಸಮತಾ ಇಂತಹ ವಿಚಾರಕ್ರಾಂತಿ ಪತ್ರಿಕೆಗಳ ಮೂಲಕ ಸಮಾಜವನ್ನು ಎಚ್ಚರಿಸುವ ಮಹತ್ಕಾರ್ಯವನ್ನು ಬಾಬಾರು ಮಾಡಿದರು.ಅಷ್ಟೇ ಅಲ್ಲದೇ ಸುಮಾರು ಒಂಭತ್ತು ಭಾಷೆಯಲ್ಲಿ ಪ್ರವೀಣ್ಯತೆ ಸಾಧಿಸಿದ್ದರೆಂದರೆ ಅದು ಅವರಿಗೆ ಅವರೇ ಸಾಟಿ. ಭವಿಷ್ಯ ಇಷ್ಟು ತರಕ್ಕೆ ಯಾರು ಏರಲಾರರೆಂದೇ ನನ್ನ ಭಾವನೆ.ಆದ್ದರಿಂದಲೇ ಬಾಬಾಸಾಹೇಬರಿಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸನ್ಮಾನಗಳು ಅವರ ಮುಡಿಗೇರಿದವು.ಅವುಗಳಿಗೆ ಅರ್ಹರ ಕೂಡ.ಭಾರತ ರತ್ನ, ದ ಗ್ರೇಟೆಸ್ಟ್ ಮ್ಯಾನ್ ಇನ್ ದ ವರ್ಲ್ಡ್ (ಕೋಲಂಬಿಯಾ),ದ ಯುನಿವರ್ಷ ಮೇಕರ್ (ಆಕ್ಸ್ಫರ್ಡ್ ಯುನಿವರ್ಸಿಟಿ),ದ ಗ್ರೇಟೆಸ್ಟ್ ಇಂಡಿಯನ್ ( ಸಿ.ಎನ್.ಬಿ,& ಐ,ಬಿ.ಎನ್. & ಹಿಸ್ಟೋರಿ
ಟಿ.ವಿ),ದ ಸಿಂಬಾಲ್ ಆಫ್ ನಾಲೇಜ್ ( ಅಮೇರಿಕಾ ಕೊಲಂಬಿಯಾ), ವರ್ಲ್ಡ್ ನಾಲೇಡ್ಜ ಪರ್ಸನ್ (ವಿಶ್ವ ಸಂಸ್ಥೆ- ವರ್ಲ್ಡ್ ನಾಲೇಜ್ ಡೇ 14ನೇ ಎಪ್ರಿಲ್). ಇಂತಹ ಹಲವಾರು ಶ್ರೇಷ್ಟ ಪ್ರಶಸ್ತಿಗಳು ಸಂದವು.
ಡಾ.ಬಾಬಾ ಸಾಹೇಬರು ಮತ್ರು ಬುದ್ಧಧಮ್ಮ:
ಡಬಕ್ ಚಾಳಾದ ಜನರು ಡಾ॥ ಅಂಬೇಡ್ಕರ್ರವರನ್ನು ಮ್ಯಾಟ್ರಿಕ್ ಪಾಸಾದ ಪ್ರಯುಕ್ತ ಸನ್ಮಾನ ಮಾಡಿದರು. ಇದರ ಅಧ್ಯಕ್ಷತೆಯನ್ನು ಸೀತಾರಾಮ್ ಕೇಶವ ಭೋಲೆ”ಯವರು ವಹಿಸಿಕೊಂಡಿದ್ದರು ಆ ಸಂದರ್ಭದಲ್ಲಿ ಸಾಹಿತಿ ಅರ್ಜುನ್ ಕೇಲೋಸ್ಕರ್ವರಿಂದ ‘ಗೌತಮ ಬುದ್ಧ’ ಪುಸ್ತಕ ಕಾಣಿಕೆಯಾಗಿ ಕೊಟ್ಟರು.ಅದನ್ನು ಸ್ವೀಕರಿಸಿ ಓದಿದ ಬಾಬಾ ಸಾಹೇಬರಿಗೆ ಬುದ್ಧನ ವಿಚಾರಧಾರೆಗಳು ಪ್ರಭಾವ ಬೀರಿದವು.ಉತ್ತಮ ವೈಚಾರಿಕ ಮತ್ತು ಉನ್ನತ ವೈಜ್ಞಾನಿಕ ಧಮ್ಮದ ಹುಡುಕಾಟದಲ್ಲಿರುವ ಸಾಹೇಬರಿಗೆ ಬುದ್ಧ ಮತ್ತು ಆತನ ಧಮ್ಮವು ದೊರೆತಿದ್ದು ವಿಶೇಷವೇ ಸರಿ. ಇಂತಹ ಧಮ್ಮವನ್ನು ಅಧ್ಯಯನಿಸಿ,ಸಂಶೋಧಿಸಿ,ಪರಿಷ್ಕರಿಸಿ ಬಹಜನ ಸಮಾಜಕ್ಕೆ ಈ ಮೂಲ ಧಮ್ಮವನ್ನು ಪರಿಚಯಿಸಿರುವುದು ನವ ಇತಿಹಾಸವೆಂದರೆ ತಪ್ಪಾಗಲಾರದು.ಆದ್ದರಿಂದಲೇ ಇದೊಂದು ಬಹುಜನರ ಪಾಲಿಗೆ ‘ನವಯಾನ’, ನವ ಮನ್ವಂತರ ಹಾಗೂ ನವ ಜೀವನ ರೂಪಿಸಿಕೊಳ್ಳುವ ಮಹಾಮಾರ್ಗವನ್ನು ಬಾಬಾ ಸಾಹೇಬರು ಕಲ್ಪಿಸಿಕೊಟ್ಟರು.ಅಲ್ಲದೇ 15ನೇ ಅಕ್ಟೋಬರ್ 1956ರಂದು ಏಕ ಕಾಲಕ್ಕೆ ಐದು ಲಕ್ಷಕ್ಕಿಂತಲೂ ಹೆಚ್ಚಿನ ಜನರನ್ನು ಬೌದ್ಧ ಧಮ್ಮಕ್ಕೆ ಧರ್ಮಾಂತರ ಮಾಡಿರುವ ಯುಗಪುರುಷರು ಹೌದು. ಡಾ.ಬಾಬಾ ಸಾಹೇಬರು ಇನ್ನೊಂದಿಷ್ಟು ಕಾಲಗಳು ಇದ್ದಿದ್ದರೆ ಇಂದು ಬುದ್ಧ-ಬಸವ ಸಾರಿರುವ ಸ್ವಾತಂತ್ರ,ಸಮಾನತೆ ಮತ್ತು ಭಾತೃತ್ವದ ಪ್ರಬುದ್ಧ ದೇಶವಾಗಿ,ಬುದ್ಧ-ಭಾರತವಾಗಿ ಹೊರಹೊಮ್ಮಿ ಬೆಳಗುತಿತ್ತು.ಸಂವಿಧಾನಕ್ಕೆ ಇನ್ನೂ ಒಂದಿಷ್ಟು ಪುಷ್ಟಿ ದೊರೆತು ವಿಶ್ವಕ್ಕೆ ಮಾದರಿಯಾಗತಿತ್ತೆನ್ನುವುದು ನನ್ನ ಅಭಿಪ್ರಾಯ.ಆತ್ಮೀಯರೆ, ನಾನು ಬಾಬಾ ಸಾಹೇಬರನ್ನು ಮತ್ತೆ ಹುಟ್ಟಿ ಬನ್ನಿ ಎನ್ನಲಾರೆ.ಈ ದೇಶಕ್ಕೆ ನೀಡಿದ ಮಾನವೀಯತೆಯ ಮಹಾ ಸಂವಿಧಾನ ಹಾಗೂ ಹಾಕಿ ಕೊಟ್ಟ ಬುದ್ಧ ಧಮ್ಮದ ಚಿಂತನೆಗಳು ಈ ದೇಶದ ಜನ ಉಳಿಸಿ-ಬೆಳೆಸಿಕೊಂಡರೆ ಅವರ ಆತ್ಮಕ್ಕೆ ಶಾಂತಿ.
-ಶ್ರೀ ಸೋಮನಾಥ.ಡಿ ಉಳೆನೂರು.
