ಬೆಂಗಳೂರು : ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಮುಂಗಡ ಪತ್ರ ಅರ್ಥವ್ಯವಸ್ಥೆಯನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯುವ ರಾಜ್ಯದ ಎಲ್ಲಾ ವರ್ಗಗಳ ಸೇರ್ಪಡೆ ಮಾಡುವ ಜನಪರ ಬಜೆಟ್. ಪ್ರಾಣಾಳಿಕೆಯಲ್ಲಿ ಘೋಷಿಸಿದ್ದ ಗ್ಯಾರಂಟಿಗಳನ್ನು ಮುಂಗಡಪತ್ರದಲ್ಲಿ ಪ್ರಕಟಿಸಿ, ಕಾಂಗ್ರೆಸ್ ಪಕ್ಷದ ಬದ್ದತೆಯನ್ನು ಸ್ಷಷ್ಟವಾಗಿ ವ್ಯಕ್ತಪಡಿಸಲಾಗಿದೆ. 
ರೂ.೩,೨೪,೪೭೮ ಕೋಟಿ ರೂಗಳ ಮುಂಗಡ ಪತ್ರ.
ಕರ್ನಾಟಕದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದ ದಿಗ್ವಿಜಯ ಯಾತ್ರೆಯನ್ನು ಮತ್ತೆ ಪ್ರಾರಂಭಿಸಿದೆ. ಎಲ್ಲಾ ವಲಯಗಳ/ವರ್ಗಗಳ ಜನಕಲ್ಯಾಣದ ಜವಾಬ್ದಾರಿಯುತ ಮುನ್ನಡೆಯ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.
ಬಡವರು/ದೀನ ದಲಿತರು/ಶೋಷಿತರು/ಶ್ರಮಿಕರು/ಹಿಂದುಳಿದವರು ಮತ್ತು ಇತರೆ ಎಲ್ಲಾ ವರ್ಗಗಳ ಹಿತರಕ್ಷಣೆಯ ಭರವಸೆದಾಯಕ ಮುಂಗಡ ಪತ್ರ, ಸಮಗ್ರ ಅಭಿವೃದಿಯ ಕಲ್ಪನೆಗಳನ್ನು ಅನುಷ್ಠಾನಗೊಳಿಸುವ ಈ ಮುಂಗಡ ಪತ್ರ ನಾಡಿನ ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ಕಾರಣವಾಗಲಿದೆ. ನಗರಾಭಿವೃದ್ದಿ- ಗ್ರಾಮೀಣ ಅಭಿವೃದ್ದಿಯನ್ನು ಸಮಗ್ರವಾಗಿ ಪರಿಗಣಿಸಿರುವ ಮುಂಗಡ ಪತ್ರ ಸಮಾನ ಅಭಿವೃದ್ದಿಯ ಕಲ್ಪನೆಗಳನ್ನು ಸಾಕಾರಗೊಳಿಸಲಿದೆ.
ಗದಗ ವೈದ್ಯಕೀಯ ಕಾಲೇಜಿನ ೪೫೦ ಹಾಸಿಗೆಗಳ ಆಸ್ಪತ್ರೆಯ ಬಾಕಿ ಉಳಿದಿರುವ ಮೂಲಭೂತ ಸೌಕರ್ಯವನ್ನು ಆದ್ಯತೆ ಮೇಲೆ ಪೂರ್ಣಗೊಳಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಉದ್ದೇಶಕ್ಕಾಗಿ ಅಗತ್ಯ ಇರುವ ಹಣಕಾಸನ್ನು ಒದಗಿಸಲಾಗಿದೆ.
ಗದಗ ಜಿಲ್ಲೆಯ ಲಕ್ಕುಂಡಿ, ಮಾಗಡಿ ಪಕ್ಷಿಧಾಮ, ಕಪ್ಪತಗುಡ್ಡ ಮುಂತಾದ ತಾಣಗಳನ್ನು ಪ್ರವಾಸೋದ್ಯಮ ತಾಣಗಳನ್ನಾಗಿ ಸಮಗ್ರವಾಗಿ ಅಭಿವೃದ್ದಿ ಪಡಿಸಲು ಘೋಷಿಸಿದ್ದಾರೆ.
ಗದಗನ ಸರ್ಕಾರಿ ವಸ್ತು ಸಂಗ್ರಹಾಲಯ ಅಭಿವೃದ್ದಿ ಪಡಿಸುವುದಾಗಿ ಮುಂಗಡ ಪತ್ರದಲ್ಲಿ ಘೋಷಣೆ ಮಾಡಲಾಗಿದೆ.
ಜಲಸಂಪನ್ಮೂಲ ಇಲಾಖೆಯ ವತಿಯಿಂದ ರಾಜ್ಯದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ೧೭೨ ಯೋಜನೆಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ ೮೯೯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಗದಗ ಜಿಲ್ಲೆಯ ಎಲ್ಲಾ ದೊಡ್ಡ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಜಾಲನೆ ನೀಡಲಾಗುವುದು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಹೇಳಿದ್ದಾರೆ.
