ಗದಗ : ನವೆಂಬರ್ 4 : ಪ.ಜಾ/ಪ.ಪಂ. ಉಪಹಂಚಿಕೆ ಯೋಜನೆಯಡಿ ಅನುಷ್ಟಾನಿತ ವಿವಿಧ ಕಾಮಗಾರಿಗಳು ನಿಗದಿತ ಕಾಲಮಿತಿಯಲ್ಲಿಯೇ ಪೂರ್ಣಗೊಳ್ಳಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ನಿಗದಿತ ಕಾಲಾವಧಿಯಲ್ಲಿಯೇ ದೊರಕುವಂತಾಗಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. 
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ.ಜಾ/ಪ.ಪಂ. ಉಪಹಂಚಿಕೆ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳ ಆಯ್ಕೆ ಮಾಡುವಾಗ ಪಾರದರ್ಶಕತೆಯಿರಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ವಿಳಂಬವಾಗದೇ ಶೀಘ್ರಗತಿಯಲ್ಲಿ ತಲುಪುವಂತಾಗಬೇಕು. ಸದರಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಇಲಾಖಾವಾರು ಸಾಧಿಸಿದ ಪ್ರಗತಿ ವಿವರವನ್ನು ಇಲಾಖೆ ಅಂತರ್ಜಾಲದಲ್ಲಿ ತಪ್ಪದೇ ಅಪ್‍ಡೇಟ್ ಮಾಡಬೇಕು ಎಂದು ಸೂಚಿಸಿದರು. ಎಸ್.ಸಿ/ಎಸ್.ಟಿ. ಕಾಲೋನಿಗಳಲ್ಲಿ ಕೈಗೊಂಡ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಜನಜಾಗೃತಿ ಕಾರ್ಯಕ್ರಮಗಳು ವಿಳಂಬವಿಲ್ಲದೇ ಜರುಗಬೇಕು. ಅಂದಾಗ ಮಾತ್ರ ಅರ್ಹ ಫಲಾನುಭವಿಗಳಿಗೆ ಯೋಜನೆ ಸೌಲಭ್ಯ ದೊರಕಲು ಸಾಧ್ಯವಾಗುತ್ತದೆ ಎಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ 2022-23ನೇ ಸಾಲಿನ ಪರಿಶಿಷ್ಟ ಜಾತಿ ಉಪ ಹಂಚಿಕೆ (ಎಸ್‍ಸಿಎಸ್‍ಪಿ) ಯೋಜನೆಯಡಿ ಡಿಸೆಂಬರ್ ಅಂತ್ಯದವರೆಗೆ ವಿವಿಧ ಇಲಾಖೆಗಳಡಿ ಒಟ್ಟಾರೆ 5478.19 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು ಆ ಪೈಕಿ 3896.75 ಲಕ್ಷ ರೂ.ಖರ್ಚಾಗಿದೆ. 172104 ಫಲಾನುಭವಿಗಳು ಯೋಜನೆಯ ಸೌಲಭ್ಯ ಪಡೆದಿದ್ದು ಶೇ.71 ರಷ್ಟು ಪ್ರಗತಿಯಾಗಿದೆ. ಪರಿಶಿಷ್ಟ ಪಂಗಡ ಉಪಹಂಚಿಕೆ (ಟಿಎಸ್‍ಪಿ) ಯೋಜನೆಯಡಿ ವಿವಿಧ ಇಲಾಖೆಗಳಡಿ 1845.48 ಲಕ್ಷ ರೂ.ಬಿಡುಗಡೆಯಾಗಿದ್ದು ಆ ಪೈಕಿ 951 ಲಕ್ಷ ರೂ. ಲಕ್ಷ ರೂ. ಖರ್ಚಾಗಿದೆ. 62752 ಫಲಾನುಭವಿಗಳು ಯೋಜನೆಯ ಸೌಲಭ್ಯ ಪಡೆದಿದ್ದು ಶೇ. 52 ರಷ್ಟು ಪ್ರಗತಿಯಾಗಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಆಹಾರ ಇಲಾಖೆಯ ಉಪನಿರ್ದೇಶಕ ಎಂ.ಗಂಗಪ್ಪ, ಅಕ್ಷರ ದಾಸೋಹ ಅಧಿಕಾರಿ ಮಂಗಳಾ ತಾಪಸ್ಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ ನುಚ್ಚಿನ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಾಂಬ್ಳೆ , ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಮಲ್ಲೂರ ಬಸವರಾಜ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ, ಕಾರ್ಮಿಕ ಇಲಾಖೆ ಅಧಿಕಾರಿ ಸುಧಾ ಗರಗ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಆರ್ಥಿಕ ಹಾಗೂ ಭೌತಿಕ ಪ್ರಗತಿ ವಿವರವನ್ನು ಸಭೆಯ ಗಮನಕ್ಕೆ ತಂದರು.
