ಕಲಬುರಗಿ (ನ. 02): ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಅಮಾನುಷ ಘಟನೆ ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯ ಕೊರಳ್ಳಿ ಗ್ರಾಮದ ಹೊರವಲಯದಲ್ಲಿ ನಿನ್ನೆ (ನ.01) ಸಂಜೆ ನಡೆದಿದೆ. ಅಪ್ರಾಪ್ತ ಬಾಲಕರು ಅತ್ಯಾಚಾರವೆಸಗಿ ಕೊಲೆಗೈದಿದ್ದಾರೆ. ಅಪ್ರಾಪ್ತ ಬಾಲಕರು ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದರು, ಮೊಬೈಲ್ ನಲ್ಲಿ ಅಶ್ಲೀಲ ದೃಶ್ಯಗಳನ್ನ ಕಂಡು ಅತ್ಯಾಚಾರ ಗೈದಿದ್ದಾರಂತೆ. ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 
ಬಹಿರ್ದೆಸೆಗೆ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರ ಸಾಯಂಕಾಲ ಹೊತ್ತು ಬಹಿರ್ದೆಸೆಗೆಂದು ಹೊಲ ಕಡೆಗೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಆಕೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಆಕೆಯ ಶವ ಪತ್ತೆಯಾಗಿದ್ದು, ಆಕೆಯ ಕೈಕಾಲು ಕಟ್ಟಿ ಅತ್ಯಾಚಾರವೆಸಗಿ ಬಳಿಕ ಆರೋಪಿಗಳು ವೇಲ್ನಿಂದ ಕತ್ತು ಹಿಸುಕಿ ಕೊಲೆಗೈದಿರಬಹುದು ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಕಲಬುರಗಿ ಎಸ್ಪಿ ಇಶಾ ಪಂತ್ ಭೇಟಿ
ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಕಲಬುರಗಿ ಎಸ್ಪಿ ಇಶಾ ಪಂತ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಭೇಟಿ ನೀಡಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕುರಿತು ಬೇಸರ ವ್ಯಕ್ತಪಡಿಸಿರೋ ಕಲಬುರಗಿ ಎಸ್ಪಿ ಇಶಾ ಪಂತ್, ಕಾಮುಕರ ಬಂಧನಕ್ಕೆ ಆಳಂದ ಡಿವೈಎಸ್ಪಿ ಮತ್ತು ಅಫಜಲಪುರ ಆಳಂದ ಸಿಪಿಐ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿಸಲಾಗಿದ್ದು, ಶೀಘ್ರವೇ ಚಾರ್ಜ್ಶಿಟ್ ಸಲ್ಲಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.
