ಗದಗ( ಸತ್ಯ ದರ್ಶನ )ಸೆ. 20: ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ಸಧೃಢ ಆರೋಗ್ಯ ಹೊಂದಿ ಸಶಕ್ತ ರಾಷ್ಟ್ರ ನಿರ್ಮಾಣ ಮಾಡುವುದರ ಮೂಲಕ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕಿ ಹಾರಿಸುವಂತೆ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿದ್ದಪ್ಪ ಪಲ್ಲೇದ ನುಡಿದರು.
ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜರುಗಿದ ಬೆಳಗಾವಿ ವಿಭಾಗ ಮಟ್ಟದ ದಸರಾ ಸಿ.ಎಮ್.ಕಪ್ ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವದರ ಮೂಲಕ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ಅನುದಾನವನ್ನು ಒದಗಿಸುತ್ತಿದೆ. ಜೊತೆ ಜೊತೆಗೆ ನೂತನ ಕ್ರೀಡಾ ನೀತಿಯನ್ನು ಜಾರಿಗೊಳಿಸುವುದರ ಮೂಲಕ ಕ್ರೀಡಾಕೂಟಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ನೀಡುತ್ತಿದೆ ಎಂದರು. ಇದರ ಸದುಪಯೋಗ ಪಡೆದುಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಹ ದೇಶದ ಕೀರ್ತಿಯನ್ನು ತರುವಂತೆ ನುಡಿದರು.
ಗದಗ ಜಿಲ್ಲೆಯ ಕ್ರಿಕೆಟ್ ಕ್ರೀಡಾಪಟು ಸುನೀಲ ಜೋಶಿ ಸೇರಿದಂತೆ ಜಿಲ್ಲೆಯ ಅನೇಕ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳುವ ಮೂಲಕ ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅದರಂತೆ ಎಲ್ಲ ಕ್ರೀಡಾಪಟುಗಳು ಸಾಧನೆಗೈಯುವಂತೆ ನುಡಿದರು.
ಯುವಸಂಘಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ರವಿಕಾಂತ ಅಂಗಡಿ ಕಾರ್ಯಕ್ರಮ ಉದ್ಘಾಟಿಸಿ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿ ರಾಷ್ಟ್ರವನ್ನು ಸಶಕ್ತ ರಾಷ್ಟ್ರವನ್ನಾಗಿಸಲು ಕ್ರೀಡೆಯು ಮಹತ್ವದ ಪಾತ್ರ ವಹಿಸುತ್ತದೆ.
ಇಂದಿನ ಯುವ ಜನತೆ ಮೊಬೈಲ ಗೀಳಿನಿಂದ ಹೊರಬಂದು ದೈಹಿಕವಾಗಿ ಕ್ರೀಡೆಗಳಲ್ಲಿ ಭಾಗವಹಿಸುವದರ ಮೂಲಕ ಉತ್ತಮ ಆರೋಗ್ಯ ಪಡೆದು ಸಶಕ್ತ ರಾಷ್ಟ್ರ ನಿರ್ಮಾಣ ಮಾಡಲು ಮಂದಾಗುವಂತೆ ಕರೆ ನೀಡಿದರು. ಅವರು ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯೊಂದಿಗೆ ಪಾಲ್ಗೊಳ್ಳುವದರ ಮೂಲಕ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ತಮ್ಮ ಕ್ರೀಡಾ ಕೌಶಲ್ಯದಿಂದ ರಾಜ್ಯ ರಾಷ್ಟ್ರಮಟ್ಟದಲ್ಲಿಯೂ ಮಿಂಚುವಂತೆ ಕರೆ ನೀಡಿದರು.
ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಗದಗ ಜಿಲ್ಲಾ ಮಟ್ಟದಲ್ಲಿ ಈಗಾಗಲೇ ದಸರಾ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆರವೇರಿಸಿದೆ. ಈ ಕ್ರೀಡಾಕೂಟದಲ್ಲಿ ಸಾಧನೆಗೈದವರು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಬೆಳಗಾವಿ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಈ ಭಾಗದ 7 ಜಿಲ್ಲೆಗಳ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.
ಗದಗ ಜಿಲ್ಲೆಯಲ್ಲಿ ವಿಭಾಗ ಮಟ್ಟದ ದಸರಾ ಸಿ.ಎಮ್. ಕ್ರೀಡಾಕೂಟ ಏರ್ಪಡಿಸಿದ್ದು ಖೋಖೋ, ಟೆಕ್ವಾಂಡೋ ಹಾಗೂ ನೆಟಬಾಲ್ ಸ್ಪರ್ಧೆಗಳು ನಡೆಯಲಿವೆ. ನಿರ್ಣಾಯಕರಾಗಿ ಅನುಭವಿಗಳನ್ನು ನಿಯೋಜಿಸಲಾಗಿದೆ. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದ್ದು ನಿರ್ಣಾಯಕರೂ ಸಹ ಪಕ್ಷಪಾತ ಮಾಡದೇ ಆರೋಗ್ಯಯುತ ಕ್ರೀಡಾ ಸ್ಪೂರ್ತಿ ಮೆರೆಯುವ ಉತ್ತಮ ನಿರ್ಣಯ ನೀಡಲಿದ್ದಾರೆ ಎಂಬ ವಿಶ್ವಾಸ ಹೊಂದಿದ್ದೇವೆ. ಕ್ರೀಡಾಪಟುಗಳಿಗೆ ನಿರ್ಣಾಯಕರ ತೀರ್ಮಾನದ ಕುರಿತು ಅನುಮಾನಗಳಿದ್ದಲ್ಲಿ ತಕ್ಷಣ ಲಿಖಿತವಾಗಿ ಸಲ್ಲಿಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕು.ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲ ಸ್ಪರ್ಧಾಳುಗಳಿಗೆ ಶುಭವಾಗಲಿ ಎಂದರು. 
ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ವಸಂತ ಮಡ್ಲೂರ, ನಿರ್ಣಾಯಕರುಗಳಾದ ಶ್ರೀಪಾದ ರವಿರಾವ್, ಪ್ರಭಾಕರ ಶೇಡಬಾಳ, ಪರಪ್ಪ ಕ್ಷೇತ್ರತೇಜ,ವಾಯ.ಎಫ್ ಕಲಕಂಬಿ, ವಾಯ್.ಕೆ.ಚೌಡಾಪುರ, ಎಚ್.ಜಿ.ಕಾಂಬಳೇಕರ, ಎಸ್.ಬಿ.ಪೂಜಾರ, ಎಸ್.ಬಿ.ಆಲೂರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಉಪಸ್ಥಿತರಿದ್ದರು..ಪಿ.ಪಿ.ಜಿ. ಸಂಗೀತ ಮಹಾವಿದ್ಯಾಲಯದ ವಿದ್ಯ್ಯಾರ್ಥಿಗಳು ನಾಡಗೀತೆ ಪ್ರಚುರ ಪಡಿಸಿದರು.
