ಗಜೇಂದ್ರಗಡ : ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ಸಂಕಲ್ಪ ಮಾಡಿರುವ ಜಾತ್ಯತೀತ ಜನತಾದಳ ಪಕ್ಷವೂ ಇಡೀ ರಾಜ್ಯಾದ್ಯಾಂತ ಜನತಾ ಜಲಧಾರೆ- ಗಂಗಾ ರಥಯಾತ್ರೆ ಹಮ್ಮಿಕೊಂಡಿದ್ದು , ಏ . 26 ರಂದು ರಥಯಾತ್ರೆ ಪಟ್ಟಣಕ್ಕೆ ಆಗಮಿಸಲಿದೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಎಂ.ವೈ. ಮುಧೋಳ ಹೇಳಿದರು.
ನಿತ್ಯ ಗಂಗಾ ಪೂಜೆ: 15 ಹದಿನೈದು ವಾಹನಗಳಲ್ಲಿ 15 ನದಿಗಳಿಂದ ಕಳಸಗಳ ಮೂಲಕ ನದಿ ನೀರನ್ನು ಸಂಗ್ರಹಿಸಿ ಮೆರವಣಿಗೆಯಲ್ಲಿ ಒಯ್ಯಲಾಗುತ್ತದೆ. ಹೀಗೆ ನದಿಗಳಿಂದ ಸಂಗ್ರಹಿಸಲಾದ ನೀರನ್ನು ಒಂದು ಬ್ರಹ್ಮ ಕಳಸದಲ್ಲಿ ಸಂಗ್ರಹಿಸಿ ಗಂಗಾ ಪೂಜೆ ಮಾಡಿ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅದಕ್ಕೆ ಮುಂದಿನ ಒಂದು ವರ್ಷ ನಿತ್ಯ ಬೆಳಿಗ್ಗೆ–ಸಂಜೆ ಗಂಗಾ ಪೂಜೆ ನಡೆಯಲಿದೆ. ಕಾರ್ಯಕ್ರಮದ ಸಮಾರೋಪವಾಗಿ ಮೇ ಮೊದಲ ವಾರದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಂಕಲ್ಪ ಸಮಾವೇಶಕ್ಕೆ ಜೆಡಿಎಸ್
ಉದ್ದೇಶಿಸಿದೆ.
ಈಗಾಗಲೇ ಜನತಾ ಜಲಧಾರೆಗೆ ಚಾಲನೆ ನೀಡಲಾಗಿದ್ದು , ಎಲ್ಲೆಡೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ . ಮುಂಬರುವ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದ ಜನತೆ ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ , ಅಧಿಕಾರ ನೀಡಿದಲ್ಲಿ , ಎಲ್ಲ ನೀರಾವರಿ ಯೋಜನೆಗಳನ್ನು ಜಾರಿ ಮಾಡಿಯೇ ಸಿದ್ಧ ಎನ್ನುವ ಶಪಥ ನಾಡಿನ ಜನತೆ ನೀಡಲಾಗುತ್ತಿದೆ .
ಆ ಮೂಲಕ ರಾಷ್ಟ್ರೀಯ ಪಕ್ಷಗಳ ನೀರಾವರಿ ಯೋಜನೆ ಮೇಲಿನ ಕಾಟ ಜನತೆಗೆ ಗೊತ್ತಾಗಲಿದೆ . ಈ ಹಿನ್ನೆಲೆಯಲ್ಲಿ ಏ . 26 ರಂದು ಬೆಳಗ್ಗೆ 11 ಗಂಟೆಗೆ ಗಜೇಂದ್ರಗಡ ನಗರಕ್ಕೆ ಜನತಾ ಜಲಧಾರೆ ರಥಯಾತ್ರೆ ಆಗಮಿಸಲಿದ್ದು , ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಾ , ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ , ಕಾಲಕಾಲೇಶ್ವರ ವೃತ್ತದಲ್ಲಿ ಸಭೆ ನಡೆಸಲಾಗುವುದು . ರಥಯಾತ್ರೆಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ತಾಲೂಕಾ ಮುಖಂಡರು , ಕಾರ್ಯಕರ್ತರು ಹಾಗೂ ರೈತರು ಭಾಗವಹಿಸಲಿದ್ದಾರೆ ಎಂದರು .
