Satya Darshana
ಬಿಸಿ ಬಿಸಿ ಸುದ್ದಿ
ಸಿನಿಮಾ

ಬಹುಬೇಡಿಕೆಯ ಪೋಷಕ ನಟನಾಗಿದ್ದ ಸತ್ಯಜಿತ್ ಬಾರದ ಲೋಕಕ್ಕೆ..

ಸುದ್ದಿಮೂಲ ಸತ್ಯದರ್ಶನ

ಬೆಂಗಳೂರು:ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪೋಷಕ ನಟನಾಗಿದ್ದ ಸತ್ಯಜಿತ್​ ಅವರು ಭಾನುವಾರ (ಅ.10) ಕೊನೆಯುಸಿರೆಳೆದರು. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಆ ಮೂಲಕ ಚಿತ್ರರಂಗದಲ್ಲಿ ಅಪಾರ ಅನುಭವ ಪಡೆದುಕೊಂಡಿದ್ದರು. ಚಂದನವನದ ಹಲವಾರು ಸ್ಟಾರ್​ ಕಲಾವಿದರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಕೈಕೊಟ್ಟಿದ್ದರಿಂದ ಅವರು ನಟನೆಯಿಂದ ದೂರ ಉಳಿಯಬೇಕಾಯಿತು. ಇಹಲೋಕ ತ್ಯಜಿಸಿರುವ ಹಿರಿಯ ನಟನಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಸತ್ಯಜಿತ್​ ಯಾವುದೇ ಫಿಲ್ಮೀ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ಮೂರೂವರೆ ದಶಕಗಳ ಹಿಂದೆ ಅವರು ಹುಬ್ಬಳ್ಳಿಯಲ್ಲಿ ಬಸ್​ ಡ್ರೈವರ್​ ಆಗಿದ್ದರು. ಕೆಎಸ್​ಆರ್​ಟಿಸಿ ಬಸ್​ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗಲೇ ಅವರಿಗೆ ನಟನೆ ಬಗ್ಗೆ ಅಪಾರ ಪ್ರೀತಿ ಇತ್ತು. ಹಾಗಾಗಿ ಹವ್ಯಾಸಿ ನಾಟಕ ತಂಡಗಳ ಜೊತೆ ಗುರುತಿಸಿಕೊಂಡಿದ್ದರು. ಅನೇಕ ಊರುಗಳಿಗೆ ತೆರಳಿ ಹಲವು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಆ ಮೂಲಕ ಅವರಿಗೆ ಬಣ್ಣದ ಸಹವಾಸ ಅಂಟಿಕೊಂಡಿತು. ಅದು ಅವರನ್ನು ಬಾಲಿವುಡ್​ವರೆಗೆ ಕರೆದುಕೊಂಡು ಹೋಯಿತು ಎಂಬುದೇ ಅಚ್ಚರಿ.

ಸತ್ಯಜಿತ್​ ಅವರ ಮೂಲ ಹೆಸರು ಸಯ್ಯದ್​ ನಿಜಾಮುದ್ದೀನ್​. ಆದರೆ ಚಿತ್ರರಂಗಕ್ಕೆ ಕಾಲಿಟ್ಟಾಗ ಅವರು ಹೆಸರು ಬದಲಾಯಿಸಿಕೊಂಡರು. ಸತ್ಯಜಿತ್​ ಎಂಬ ಹೆಸರಿನಿಂದಲೇ ಅವರು ಫೇಮಸ್​ ಆದರು. ಗಡಿಬಿಡಿ ಗಂಡ, ಮನೆ ದೇವ್ರು, ಶಿವಮೆಚ್ಚಿದ ಕಣ್ಣಪ್ಪ, ಮಂಡ್ಯದ ಗಂಡು, ಪೊಲೀಸ್​ ಸ್ಟೋರಿ, ಅಪ್ಪು, ಅಭಿ, ಆಪ್ತಮಿತ್ರ ಮುಂತಾದ ಸಿನಿಮಾಗಳಲ್ಲಿ ನಟಿಸಿ ಅವರು ಕನ್ನಡ ಸಿನಿಪ್ರಿಯರನ್ನು ರಂಜಿಸಿದ್ದರು.

ಸತ್ಯಜಿತ್​ ಅವರು ಕೊನೆಯದಾಗಿ ನಟಿಸಿದ್ದು ‘ಸೆಕೆಂಡ್​ ಹಾಫ್​’ ಚಿತ್ರದಲ್ಲಿ. ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆ ನಿಭಾಯಿಸಿದ್ದ ಆ ಸಿನಿಮಾ 2018ರಲ್ಲಿ ತೆರೆ ಕಂಡಿತು. ಒಂದು ಕಾಲು ಕಳೆದುಕೊಂಡಿದ್ದ ಅವರು ವ್ಹೀಲ್​ ಚೇರ್​ ಮೇಲೆ ಕುಳಿತುಕೊಂಡೇ ನಟಿಸಿದ್ದರು.

 

Related posts

ತಂದೆಗೆ ತಕ್ಕ ಮಗ’ ಪುನೀತ್ ರಾಜ್‌ಕುಮಾರ್ ಅಪ್ಪನ ಹೆಸರನ್ನು ಉಳಿಸಿ ಬೆಳೆಸಿ ಹೊರಟ

satyadarshana

ಚರ್ಚೆ: ಅಖಂಡ ಕರ್ನಾಟಕದ ಅನಿವಾರ್ಯ, ಉತ್ತರ ಕರ್ನಾಟಕ ಪ್ರತ್ಯೇಕತೆ ಕೂಗು

cradmin

ಚರ್ಚೆ: ಜನೌಷಧದ ಬಗ್ಗೆ ದಾರಿ ತಪ್ಪಿಸುತ್ತಿದ್ದಾರಾ ವೈದ್ಯರು?

cradmin