- ಸುದ್ದಿಮೂಲ ಸತ್ಯದರ್ಶನ
ಹಾನಗಲ್, ಸಿಂಧಗಿ ವಿಧಾನಸಭಾ ಉಪಚುನಾವಣೆಗಾಗಿ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಹಾನಗಲ್ ಕ್ಷೇತ್ರದ ಟಿಕೆಟ್ಗಾಗಿ ಕೇಸರಿ ಪಾಳಯದಲ್ಲಿ ಉಪಕದನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಲೇ ಇದೆ. ಇದು ಕೈ, ಕಮಲ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.ರಾಜ್ಯದಲ್ಲಿ ಉಪಚುನಾವಣೆ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದೆ
. ಈಗಾಗಲೇ ಜೆಡಿಎಸ್ ಸಿಂದಗಿ,
ಹಾನಗಲ್ ಕ್ಷೇತ್ರದ ಉಪಕದನಕ್ಕೆ ಅಭ್ಯರ್ಥಿಗಳನ್ನ ಅಂತಿಮಗೊಳಿಸಿದೆ. ಇತ್ತ ಕಾಂಗ್ರೆಸ್ ಕೂಡ ಸಿಂಧಗಿ ಕ್ಯಾಂಡಿಡೇಟ್ ಮೊದಲೇ ಪ್ರಕಟಿಸಿದ್ದರು. ಮಂಗಳವಾರ ರಾತ್ರಿ ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೂಡ ಘೋಷಣೆಯಾಗಿದೆ. ಈ ಮಧ್ಯೆ ಕಮಲ ಪಾಳಯದಲ್ಲಿ ಬೈ ಎಲೆಕ್ಷನ್ ಟಿಕೆಟ್‌ಗಾಗಿ ದೊಡ್ಡ ದಂಡೇ ಲಾಬಿಗೆ ಇಳಿದಿದೆ.
ಬಿಜೆಪಿ ಅಕಾಂಕ್ಷಿಗಳ ಹೆಸರು ರವಾನೆ:
ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಗೆಲುವಿಗಾಗಿ ಬಿಜೆಪಿ ಕಸರತ್ತು ನಡೆಸ್ತಿದೆ. ಎರಡು ಕ್ಷೇತ್ರಗಳ ಆಕಾಂಕ್ಷಿಗಳ ಪಟ್ಟಿಯನ್ನ ಹೊತ್ತು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ದೆಹಲಿಗೆ ತೆರಳಿದ್ದಾರೆ. ಜೊತೆಗೆ ಆ ಪಟ್ಟಿಯಲ್ಲಿ ಕೇಂದ್ರ ಬಿಜೆಪಿಯ ಸಂಸದೀಯ ಮಂಡಳಿಯ ಮುಂದಿಟ್ಟಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ನಾಲ್ವರು ಆಕಾಂಕ್ಷಿಗಳು, ಸಿಂದಗಿಯಲ್ಲಿ ಮೂವರು ಆಕಾಂಕ್ಷಿಗಳ ಹೆಸರನ್ನು ರಾಜ್ಯ ಬಿಜೆಪಿ ಶಿಫಾರಸು ಮಾಡಿದೆ ಎನ್ನಲಾಗಿದೆ. ಇನ್ನು ಹಾನಗಲ್ ಕ್ಷೇತ್ರದಲ್ಲಿ ರೇವತಿ ಶಿವಕುಮಾರ್ ಹೆಸರು ಅಗ್ರಸ್ಥಾನದಲ್ಲಿದೆ. ಇತ್ತ ಸಿಂದಗಿ ಕ್ಷೇತ್ರದಲ್ಲಿ ರಮೇಶ್ ಬೂಸನೂರು ಹೆಸರು ಮುಂಚೂಣಿಯಲ್ಲಿದೆ. ಇನ್ನು ಅಕ್ಟೋಬರ್ 6ಕ್ಕೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮವಾಗುವ ಸಾಧ್ಯತೆ ಇದೆ.
ಇನ್ನು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿರೋ ಮೊದಲ ಉಪ ಚುನಾವಣೆ ಇದಾಗಿದ್ದು, 2 ಕ್ಷೇತ್ರಗಳ ಗೆಲವಿಗೆ ಭಾರೀ ರಣತಂತ್ರ ರೂಪಿಸಿದ್ದಾರೆ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎರಡೂ ಕ್ಷೇತ್ರಗಳಿಗೂ ಚುನಾವಣೆ ಉಸ್ತುವಾರಿಯನ್ನ ನೇಮಿಸಿದ್ದಾರೆ.
ಒಟ್ಟಾರೆ, ಬಿಜೆಪಿ ಗೆಲ್ಲುವ ಕುದುರೆಗಳನ್ನ ರೇಸ್‌ಗೆ ಇಳಿಸುತ್ತಿದ್ರೆ, ಇತ್ತ ಕಾಂಗ್ರೆಸ್ ಆಂತರಿಕ ಸರ್ವೆ ಮೂಲಕ ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿದೆ. ಅದೇನೆ ಇರ್ಲಿ.. ಬೈ ಎಲೆಕ್ಷನ್‌ನಲ್ಲಿ ಪಕ್ಷಗಳ ಲೆಕ್ಕಾಚಾರದಲ್ಲಿ ಯಾರಿಗೆ ಯಶಸ್ಸು ಸಿಗುತ್ತೆ? ಮತದಾರ ಪ್ರಭು ಯಾರಿಗೆ ಮಣೆ ಹಾಕ್ತಾನೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
