RCB ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ವಿರಾಟ್ ಕೊಹ್ಲಿ (Virat Kohli) ಘೋಷಿಸಿದ್ದಾರೆ. ಮುಂದಿನ ಸೀಸನ್ನಲ್ಲಿ ನಾನು ಆರ್‌ಸಿಬಿ (RCB) ತಂಡವನ್ನು ಮುನ್ನಡೆಸುವುದಿಲ್ಲ. ಆರ್‌ಸಿಬಿ ನಾಯಕನಾಗಿ ಇದು ನನ್ನ ಕೊನೆಯ ಐಪಿಎಲ್ ಸೀಸನ್ ಆಗಿರಲಿದೆ ಎಂದು ತಿಳಿಸಿದ್ದಾರೆ. ಅದರಂತೆ ಐಪಿಎಲ್ 2022ರಲ್ಲಿ ಕೊಹ್ಲಿ ಆರ್‌ಸಿಬಿ ತಂಡದ ನಾಯಕನಾಗಿರುವುದಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಕೊಹ್ಲಿ ಟೀಮ್ ಇಂಡಿಯಾ ಟಿ20 ತಂಡಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಮುಂಬರು ಟಿ20 ವಿಶ್ವಕಪ್ ಬಳಿಕ ಕೊಹ್ಲಿ ನಾಯಕನ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಇದೀಗ ಐಪಿಎಲ್ನಲ್ಲೂ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿ ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ.
ಆರ್‌ಸಿಬಿಯ ನಾಯಕನಾಗಿ ಇದು ನನ್ನ ಕೊನೆಯ ಐಪಿಎಲ್. ನನ್ನ ಕೊನೆಯ ಐಪಿಎಲ್ ಪಂದ್ಯವನ್ನು ಆಡುವವರೆಗೂ ನಾನು ಆರ್‌ಸಿಬಿ ಆಟಗಾರನಾಗಿ ಮುಂದುವರಿಯುತ್ತೇನೆ. ನನ್ನನ್ನು ಬೆಂಬಲಿಸಿದ ಆರ್‌ಸಿಬಿ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಕೊಹ್ಲಿ ವಿಡಿಯೋ ಮೂಲಕ ತಿಳಿಸಿದ್ದಾರೆ.
2013 ರಿಂದ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದಾಗ್ಯೂ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ. ಇದೀಗ ಸೀಸನ್ 14 ರ ದ್ವಿತಿಯಾರ್ಧದ ಮೊದಲ ಪಂದ್ಯ ಆರಂಭಕ್ಕೂ ಮುನ್ನ ಕೊಹ್ಲಿ ಮಹತ್ವದ ನಿರ್ಧಾರ ಪ್ರಕಟಿಸಿ ಆರ್‌ಸಿಬಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇನ್ನು ಮುಂಬರುವ ಐಪಿಎಲ್ ಸೀಸನ್ನಲ್ಲಿ ಒಟ್ಟು 10 ತಂಡಗಳಿರಲಿದ್ದು, ಹೀಗಾಗಿ ಮೆಗಾ ಹರಾಜು ನಡೆಯಲಿದೆ. ಈ ಕಾರಣದಿಂದ ಆರ್‌ಸಿಬಿ ಕೊಹ್ಲಿಯನ್ನು ತಂಡದಲ್ಲಿ ಉಳಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.
ಸೆಪ್ಟೆಂಬರ್ 16 ರಂದು ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಮುಂದಿನ ಟಿ20 ವಿಶ್ವಕಪ್ ಬಳಿಕ ನಾಯಕನ ಸ್ಥಾನದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದರು. ಮೂರು ಮಾದರಿಯಲ್ಲೂ ತಂಡವನ್ನು ಮುನ್ನಡೆಸುತ್ತಿರುವುದು ಹೊರೆಯಾಗುತ್ತಿದೆ. ಹೀಗಾಗಿ ಟಿ20 ಕ್ರಿಕೆಟ್ನ ನಾಯಕತ್ವ ಜವಾಬ್ದಾರಿಯಿಂದ ಕೆಳಗಿಳಿಯುವುದಾಗಿ ಕೊಹ್ಲಿ ತಿಳಿಸಿದ್ದರು.
