ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಿ ;ಕೂಲಿ ಕಾರ್ಮಿಕರ ಪ್ರತಿಭಟನೆ
ಗಜೇಂದ್ರಗಡ :ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾನವ ದಿನಗಳ ಆಧಾರದ ಮೇಲೆ ಕೂಲಿ ಕೆಲಸ ಕೊಡದಿದ್ದನ್ನು ಖಂಡಿಸಿ ತಾಲೂಕಿನ ಇಟಗಿ ಗ್ರಾಮದ ಕೂಲಿ ಕಾರ್ಮಿಕರು ಶುಕ್ರವಾರ ಗ್ರಾಮ ಪಂಚಾಯತಗೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಯೋಜನೆಯಲ್ಲಿ ಕೂಲಿ ಕೆಲಸ ನೀಡುವಂತೆ ಹಲವಾರು ಕೂಲಿ ಕಾರ್ಮಿಕರು ಕಳೆದ ಎರಡು ತಿಂಗಳಿಂದ ಗ್ರಾ.ಪಂ ಅಭಿವದ್ಧಿ ಅಧಿಕಾರಿಗಳಿಗೆ ಒತ್ತಾಯಿಸುತ್ತ ಬಂದಿದ್ದರು. ಇದುವರೆಗೂ ಕೆಲಸ ಕೊಡದೆ ಕೂಲಿ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೇಳಿದರೆ ಪಿಡಿಒ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಭಾಗದ ಜನರ ಜೀವಾಳ ಆದರೆ ಈ ಯೋಜನೆಯು ತಾಲೂಕಿನಲ್ಲಿ ನೆನೆಗುದಿಗೆ ಬಿದ್ದಿದ್ದೆ 2024-25 ನೇ ಸಾಲಿನಲ್ಲಿ ಕೊಡಬೇಕಾದ ನರೇಗಾ ಕಾಮಗಾರಿ ಕೆಲಸವನ್ನು ಬೇಸಿಗೆ ದಿನಗಳಲ್ಲಿ ನೀಡುವದು ವಾಡಿಕೆ ಆದರೆ ಮುಂಗಾರು ಮಳೆಗಾಲ ಪ್ರಾರಂಭವಾದರೂ ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ನೀಡದಿರುವದು ವಿಪರ್ಯಾಸ.
ಇಟಗಿ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಬೇಸಿಗೆ ದಿನಗಳಲ್ಲಿ 5 ದಿನಗಳ ಕೆಲಸ ನೀಡಲಾಗಿದೆ ಅದು ಅಪೂರ್ಣ ಕೆಲಸ ಕೆಲಸದ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ ಭೇಟಿ ನೀಡಿ 60 ದಿನಗಳ ಬೇಸಿಗೆ ಕೆಲಸ ನೀಡುವದಾಗಿ ಭರವಸೆ ನೀಡಿದರು
ಆದರೆ 5 ದಿನಗಳ ಕೆಲಸ ನೀಡಿದ್ದು ಆ ಕೆಲಸ ಕೂಲಿ ಕೂಡ ಜನರ ಕೈಗೆ ಸಿಕ್ಕಿಲ್ಲ ಆದ್ದರಿಂದ ತ್ವರಿತವಾಗಿ ನಮಗೆ ಕೆಲಸವನ್ನು ನೀಡಬೇಕು ಮತ್ತು ಹಿಂದೆ ಮಾಡಿದ ಕೆಲಸಕ್ಕೆ ಕೂಲಿ ಮೊತ್ತ ಬರಿಸಬೇಕು ಎಂಬುದಾಗಿ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು.
ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡದ ಗ್ರಾಮ ಪಂಚಾಯತ್ ಅಧಿಕಾರಿ, ಅಧ್ಯಕ್ಷರು ಹಾಗೂ ಸದಸ್ಯರು ಸುಮಾರು 10 ಗಂಟೆಯಿಂದ ಹಲಗೆ, ಸಲಕಿ, ಗುದ್ದಲಿಗಳನ್ನು ತೆಗೆದುಕೊಂಡು ಗ್ರಾಮಸ್ಥರು ಊರಿನ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿಕೊಂಡು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿದರೂ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಯಾಗಲಿ, ಅಧ್ಯಕ್ಷರು ಮತ್ತು ಸದಸ್ಯರಾಗಲಿ ಭೇಟಿ ನೀಡಿ ಕೆಲಸದ ಭರವಸೆ ನೀಡದಿರುವದು ಗ್ರಾಮ ಪಂಚಾಯತಿಯ ನಿರ್ಲಕ್ಷ್ಯ ಎದ್ದು ತೋರುತ್ತದೆ. ಗ್ರಾಮ ಪಂಚಾಯತಿ ಅಧಿಕಾರಿ ಮತ್ತು ಅಧ್ಯಕ್ಷರು ದೂರವಾಣಿಯ ಮೂಲಕ ಮಾತನಾಡುತ್ತಿದ್ದಾರೆ ಹೊರತು ಸ್ಥಳಕ್ಕೆ ಆಗಮಿಸುತ್ತಿಲ್ಲ. ಮಧ್ಯಾನ್ಹ 1 ಗಂಟೆಯಾದರೂ ಇನ್ನು ಒಬ್ಬ ಸದಸ್ಯರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗಿರುವದಿಲ್ಲ.
*ತಾಲೂಕಿನಾದ್ಯಂತ ಕುಸಿತ ಕಂಡ ನರೇಗಾ ಯೋಜನೆ:*
ಪ್ರಸಕ್ತ ಸಾಲಿನಲ್ಲಿ ತಾಲೂಕಿನಾದ್ಯಂತ ಕುಸಿತ ಕಂಡ ನರೇಗಾ ಯೋಜನೆ ನರೇಗಾ ಉದ್ದೇಶ ಗ್ರಾಮೀಣ ಪ್ರದೇಶದ ಬಡ ಕೂಲಿ ಕಾರ್ಮಿಕರಿಗೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ 100 ದಿನ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ನೀಡುವದು ಈ ಯೋಜನೆಯ ಮುಖ್ಯ ಉದ್ದೇಶ. ಗ್ರಾಮೀಣ ಪ್ರದೇಶದ ಜನ ವಲಸೆ ಮತ್ತು ಗುಳೆ ಹೋಗುವದನ್ನು ತಪ್ಪಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಜನರ ಜೀವನೋಪಾಯ ವೃದ್ದಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ನರೇಗಾ ಯೋಜನೆಯಡಿಯಲ್ಲಿ ಹಿಂದಿನ ವರ್ಷ ಒಂದು ದಿನಕ್ಕೆ 349/- ರೂಪಾಯಿ ಕೂಲಿಯನ್ನು ನೀಡಲಾಗುತ್ತಿತ್ತು ಆದರೆ ಈ ವರ್ಷದ ಆರಂಭದಲ್ಲಿ ಕೂಲಿ ಮೊತ್ತವನ್ನು 370/- ರೂಪಾಯಿಗಳಿಗೆ ಏರಿಕೆ ಮಾಡಿ ಸರಕಾರ ಅಧಿಕೃತ ಆದೇಶವನ್ನು ಹೊರಡಿಸಿದ್ದು ಕೂಲಿಕಾರ್ಮಿಕರ ಮೊಗದಲ್ಲಿ ಹರ್ಷ ತಂದಿತ್ತು. ಆದರೆ ಈ ಮಹತ್ವ ಪೂರ್ಣ ನರೇಗಾ ಯೋಜನೆಯು ಗಜೇಂದ್ರಗಡ ತಾಲೂಕಿನಲ್ಲಿ ನೆನೆಗುದಿಗೆ ಬಿದ್ದಿದೆ. ಗಜೇಂದ್ರಗಡ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಲವಾರು ಗ್ರಾಮಗಳಲ್ಲಿ ಈ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನೀಡಿಲ್ಲ ಎಂಬುದು ತಾಲೂಕಿನ ಗ್ರಾಮೀಣ ಭಾಗದ ಜನರ ಅಳಲು.
ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಾವು ನo. 6 ಅರ್ಜಿಗಳನ್ನು ನೀಡಿ ಸುಮಾರು ಎರಡು ತಿಂಗಳಾಗಿದೆ ಆದರೆ ಇದಕ್ಕೆ ಗ್ರಾಮ ಪಂಚಾಯತಿ ಯಾವುದೇ ಸ್ಪಂದನೆಯನ್ನು ನೀಡುತ್ತಿಲ್ಲ ಈ ಹಿಂದೆ 5 ದಿನಗಳ ಕಾಲ ಕೆಲಸ ನೀಡಿದ್ದು ಅದರ ಕೂಲಿಯು ನಮಗೆ ತಲುಪಿಲ್ಲ 60 ದಿನಗಳ ಕೆಲಸದ ಭರವಸೆ ನೀಡಿದರೂ ಆದರೆ ಅದು ಬರೇ ಭರವಸೆಯ ಮಾತಾಗಿದೆ ಅಧಿಕಾರಿಗಳು ನಮಗೆ ಸ್ಪಂದನೆ ನೀಡಬೇಕು ನಮ್ಮೂರಿನ ಜನತೆಗೆ ಶೀಘ್ರದಲ್ಲಿ ಕೆಲಸ ನೀಡಬೇಕು ಗ್ರಾಮದಲ್ಲಿ ಅಭಿವೃದ್ಧಿ
ಕೆಲಸಗಳನ್ನು ಮಾಡಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವದು.
ಬಸವರಾಜ ಮಾದರ, ಇಟಗಿ ರೈತ
ನಾವು 5 ದಿನಗಳ ಕಾಲ ಕೆಲಸವನ್ನು ನೀಡಿದ್ದೇವೆ ಈ ವರ್ಷದಲ್ಲಿ ನಾವು ಕ್ರಿಯಾಯೋಜನೆ ಮಾಡಿದ್ದು ಇದಕ್ಕೆ ತಾಲೂಕು ಪಂಚಾಯತಿಯಲ್ಲಿ ಅನುಮೋದನೆ ನೀಡದಿರುವದು ನಮ್ಮ ಗ್ರಾಮದ ನರೇಗಾ ಕೆಲಸಕ್ಕೆ ಹಿನ್ನಡೆಯಾಗಿದೆ. ತಾಲೂಕು ಪಂಚಾಯತಿ ಆಡಳಿತದ ಜೊತೆ ಮಾತನಾಡಿ ಕ್ರಿಯಾಯೋಜನೆ ಅನುಮೋದನೆ ಪಡೆದು ಕೆಲಸ ನೀಡುತ್ತೇವೆ.
ವಿಜಯಲಕ್ಷ್ಮಿ ಶೇಕಪ್ಪ ಕೊಡಗಾನೂರ್, ಅಧ್ಯಕ್ಷರು ಗ್ರಾ ಪಂ ಇಟಗಿ.
