ಮಾಧ್ಯಮ ಪ್ರತಿನಿಧಿಗಳನ್ನು ಹೊರಗೆ ಕಳಿಸಿ ಸಾಮಾನ್ಯ ಸಭೆ ನಡೆಸಿದ ಪಿಡಿಓ!
ಗಜೇಂದ್ರಗಡ: ತಾಲೂಕಿನ ಸೂಡಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳನ್ನು ಪಿಡಿಓ ಅಶೋಕ ಕಂಬಿ ಕಾನೂನಿ ಪಾಠ ಹೇಳಿ ಸಭೆಯಿಂದ ಹೊರಗೆ ಕಳಿಸಿದ ಬಳಿಕ ಸಭೆ ನಡೆಸಿದರು.
ಸಾಮಾನ್ಯ ಸಭೆಯಿರುವ ಕುರಿತು ಗ್ರಾಮಸ್ಥರು ಮಾಧ್ಯಮ ಪ್ರತಿನಿಧಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆಯ ವರದಿ ಮಾಡಲು ತೆರಳಿದ್ದರು. ಆದರೆ ಸಭೆ ಆರಂಭಕ್ಕೂ ಮೊದಲು ಕಂಪ್ಯೂಟರ್ ಆಪರೇಟರ್ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಸ್ವಾಗತ ಕೊರಿದರು. ಬಳಿಕ ಪಿಡಿಓ ಅಶೋಕ ಕಂಬಿ ನಿಮ್ಮನ್ನು ಸಭೆಗೆ ಆಹ್ವಾನಿಸಿಲ್ಲ. ಹೀಗಾಗಿ ಕಾನೂನಿನಲ್ಲಿ ನಿಮಗೆ ಸಭೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದರು.
ಕೆಲ ಸದಸ್ಯರ ಸಲಹೆಯಂತೆ ಮೇಲಾಧಿಕಾರಿಗಳಿಗೆ ಕರೆ ಮಾಡಿ ಈ ಕುರಿತು ಮಾಹಿತಿ ಪಡೆದು ಸಭೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಲು ಅಧ್ಯಕ್ಷರ ಪರವಾನಗಿ ನೀಡಿದರೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ ಎಂದರು.
ಬಳಿಕ ಅಧ್ಯಕ್ಷೆ ಖಾದರಬಿ ಮುಜಾವರ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಸಭೆಯಲ್ಲಿ ಭಾಗವಹಿಸಲು ನಾನು ಅವಕಾಶ ಕೊಡುವುದಿಲ್ಲ. ಸಭೆ ಬಳಿಕ ವರದಿ ನೀಡುತ್ತೇವೆ ಎಂದರು. ಹೀಗಾಗಿ ಮಾಧ್ಯಮ ಪ್ರತಿನಿಧಿಗಳು ಸಭೆಯಿಂದ ಹೊರ ನಡೆದರು.
ಪುರಸಭೆ, ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಭಾಗವಹಿಸಲು ಅವಕಾಶವಿರುತ್ತದೆ. ಆದರೆ ಸೂಡಿ ಗ್ರಾಮ ಪಂಚಾಯಿತಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಹೊರಗಿಟ್ಟು ಅಷ್ಟೊಂದು ಗೌಪ್ಯವಾಗಿ ಸಾಮಾನ್ಯ ಸಭೆ ನಡೆಸುವ ಉದ್ದೇಶವಾದರೂ ಏನಿತ್ತು? ಸರ್ಕಾರಿ ಇತ್ತೀಚೆಗೆ ಸಾಮಾನ್ಯ ಸಭೆಯ ಲೈವ್ ಸ್ಟ್ರೀಮಿಂಗ್ ಯೂಟೂಬ್ ಅಥವಾ ಸ್ಥಳೀಯ ಕೇಬಲ್ ಟಿವಿಯಲ್ಲಿ ಪ್ರಸಾರ ಮಾಡಬೇಕೆಂದು ಹೇಳಿದೆ. ಈ ಕುರಿತು ಪಿಡಿಓ ಹಾಗೂ ಮೇಲಾಧಿಕಾರಿಗಳಿಗೆ ತಿಳಿದಿಲ್ಲವೇ? ಎಂದು ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಪಿಡಿಓ, ಅಧ್ಯಕ್ಷೆ ವಿರುದ್ದ ಹರಿಹಾಯ್ದರು.
ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗೆ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ಸಂವಹನ ಕೊರತೆಯಿಂದ ಆಗಿರಬಹುದು. ಸಾಮಾನ್ಯ ಸಭೆಯ ಲೈವ್ ಸ್ಟ್ರೀಮಿಂಗ್ ಯೂಟೂಬ್‌ನಲ್ಲಿ ಪ್ರಸಾರ ಮಾಡಬೇಕೆಂದು ಸರ್ಕಾರ ಹೇಳಿದೆ. ಈ ಕುರಿತು ಗ್ರಾಮ ಪಂಚಾಯಿತಿಯಿಂದ ಮಾಹಿತಿ ಪಡೆಯುತ್ತೇನೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಭರತ್ ಎಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದರು.
